ಕೂಡಲಸಂಗಮ ಬಸವ ಧರ್ಮ ಪೀಠದ ಹೇಮರಡ್ಡಿ ಮಲ್ಲಮ್ಮ ಗೋಶಾಲೆಯನ್ನು ಮಾಜಿ ಸಚಿವ ಪ್ರಭು ಚವ್ಹಾಣ ವೀಕ್ಷಿಸಿದರು.  
ಜಿಲ್ಲೆ

ಗೋಸಂರಕ್ಷಣೆಯಲ್ಲಿ ಕಾಂಗ್ರೆಸ್ ಸರ್ಕಾರ ವಿಫಲ

ಕೂಡಲಸಂಗಮ: ನಾನು ಯಾರೊಬ್ಬರ ಗುಂಪಿಗೂ ಸೇರಲು ಬಯಸುವುದಿಲ್ಲ. ನನಗೆ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂದು ಮಾಜಿ ಸಚಿವ ಪ್ರಭು ಚವ್ಹಾಣ ಹೇಳಿದರು.

ಕೂಡಲಸಂಗಮ ಬಸವಧರ್ಮ ಪೀಠದ ಹೇಮರಡ್ಡಿ ಮಲ್ಲಮ್ಮ ಗೋಶಾಲೆಗೆ ಭಾನುವಾರ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಯಶಸ್ವಿಯಾಗಿ ಪಕ್ಷ ಸಂಘಟನೆ ಮಾಡಿದ್ದಾರೆ. ಯತ್ನಾಳರಿಗೂ ರಾಜ್ಯಾಧ್ಯಕ್ಷರಾಗುವ ಅರ್ಹತೆ ಇದೆ. ಇವರಿಬ್ಬರ ಬೆಂಬಲಿಗರ ಕಿತ್ತಾಟದಲ್ಲಿ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ ಎಂದರು.

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಬಹಿರಂಗವಾಗಿಯೇ ಕಾಯ್ದೆ ಉಲ್ಲಂಘನೆಯಾಗುತ್ತಿದೆ. ನಾನು ಪಶುಸಂಗೋಪನೆ ಇಲಾಖೆ ಸಚಿವನಾಗಿದ್ದಾಗ ಗೋಸಂರಕ್ಷಣೆಗಾಗಿ ರಾಜ್ಯದಲ್ಲಿ 27 ಗೋಶಾಲೆ ಆರಭಿಸಿದ್ದೆ. ಆದರೆ, ಈ ಸರ್ಕಾರ ಅವುಗಳನ್ನು ನಿಲ್ಲಿಸಿದೆ. ಗೋವುಗಳ ರಕ್ಷಣೆಯಲ್ಲಿ ಕಾಂಗ್ರೆಸ್ ಸರ್ಕಾರ ವಿಲವಾಗಿದ್ದು, ಗೋಮಾತೆಯ ಶಾಪ ತಟ್ಟಿ ಕೆಲವೇ ದಿನದಲ್ಲಿ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದರು.

5 ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಮೋಸ ಮಾಡಿದೆ. ರಾಜ್ಯದಲ್ಲಿರುವ ಈಗಿನ ಪಶುಸಂಗೋಪನೆ ಇಲಾಖೆ ಸಚಿವರಿಗೆ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿಯೇ ಇಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಮ್ಮಿಕೊಂಡಿದ್ದ ಹಲವು ಯೋಜನೆಗಳು ಸ್ಥಗಿತಗೊಂಡಿವೆ. ಸರ್ಕಾರ ಹೈನುಗಾರರಿಗೆ 716 ಕೋಟಿ ರೂ. ಪ್ರೋತಾಹಧನ ನೀಡುವುದು ಬಾಕಿ ಇದ್ದು, ಕೂಡಲೇ ಬಿಡುಗಡೆ ಮಾಡಬೇಕು ಎಂದರು.

ಬಸವ ಧರ್ಮ ಪೀಠದ ಮಹಾದೇಶ್ವರ ಸ್ವಾಮೀಜಿಯನ್ನು ಭೇಟಿ ಮಾಡಿ ಸನ್ಮಾನ ಸ್ವೀಕರಿಸಿದರು. ನಂತರ ಬಸವಣ್ಣನ ಐಕ್ಯಮಂಟಪ, ಸಂಗಮೇಶ್ವರ ದೇವಸ್ಥಾನದ ದರ್ಶನ ಪಡೆದರು.