ಮೈಸೂರು: ಗೋವುಗಳ ವಿಚಾರದಲ್ಲಿ ಹಿಂದುಗಳಿಗೆ ಭಾವನಾತ್ಮಕ ಸಂಬಂಧವಿದ್ದು, ಗೋ ಪೂಜೆ ನಮ್ಮ ನಂಬಿಕೆಯಾಗಿದೆ. ನಿಮ್ಮ ನಂಬಿಕೆಯನ್ನು ನಾವು ಪ್ರಶ್ನಿಸಬಾರದು ಎಂದಾದರೆ ನಮ್ಮ ನಂಬಿಕೆಯನ್ನು ನೀವು ಪ್ರಶ್ನಿಸಬಹುದೇ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಗೋಹತ್ಯೆ ಪರವಾಗಿ ವಾದಿಸುವವರನ್ನು ಪ್ರಶ್ನಿಸಿದರು.
ನಗರದ ಜೆಎಲ್‌ಬಿ ರಸ್ತೆಯ ನಾದಬ್ರಹ್ಮ ಸಂಗೀತ ಸಭಾದಲ್ಲಿ ಯುವ ಬ್ರಿಗೇಡ್ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ‘ನನ್ನ ಬದು ಕಿಗೆ ಗ್ಯಾರಂಟಿ ಕೊಡಿ’ ಕಾರ್ಯಕ್ರಮದಲ್ಲಿ ಮಾತನಾಡಿ, ಗೋವು ಮತ್ತು ಎಮ್ಮೆಯ ಕುರಿತು ಜನರಲ್ಲಿ ಇರುವ ಭಾವನೆ ಹಾಗೂ ಭಾವನಾತ್ಮಕ ಸಂಗತಿಯನ್ನು ಅರಿಯದವರು ಗೋ ಹತ್ಯೆ ಪರವಾಗಿ ಮಾತನಾಡುತ್ತಿದ್ದಾರೆ ಎಂದರು.
‘ಎಮ್ಮೆಯನ್ನು ಕಡಿಯಬಹುದಾದರೆ ಹಸುವನ್ನು ಏತಕ್ಕೆ ಕಡಿಯಬಾರದು?’ ಎಂದು ಪಶುಸಂಗೋಪನಾ ಸಚಿವ ಕೆ. ವೆಂಕಟೇಶ್ ಪ್ರಶ್ನೆ ಮಾಡಿದ್ದಾರೆ. ಗೋಮೂತ್ರ ಸ್ವೀಕಾರ ವಾಡುವ ನಮಗೆ ಇಲ್ಲದ ಚಿಂತೆ ಸಚಿವರಿಗೇಕೆ? ಗೋವಿನ ಕುರಿತು ಮನಸ್ಸಿಗೆ ನೋವಾಗುವ ರೀತಿಯಲ್ಲಿ ಮಾತನಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಮತ್ತು ಅವರ ಮನಸ್ಸನ್ನು ನೋಯಿ ಸಲು ಗೋಹತ್ಯೆ ಕಾಯ್ದೆ ಹಿಂಪಡೆಯಲಾಗುವುದು ಎಂದು ಸರ್ಕಾರ ಹೇಳುತ್ತಿದೆ. ಎಮ್ಮೆ ಮತ್ತು ಹಸುಗಳ ಕುರಿತು ಜನರಲ್ಲಿ ಇರುವ ಭಾವನೆಯನ್ನು ಅರಿಯದೆ ಸಚಿವರು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂದು ಗೋ ಹತ್ಯೆ ಬಗ್ಗೆ ಮಾತನಾಡುವವರು ಮುಂದೆ ಅದರ ಪರಂಪರೆ, ಸಂಸ್ಕೃತಿಯನ್ನು ನಾಶ ಮಾಡಲು ಮುಂದಾಗುವುದು ನಿಶ್ಚಿತ. ಗೋನಾಶಕ್ಕೆ ಅನುಮತಿ ಕೊಟ್ಟರೆ ಶಿವನ ಚಿತ್ರದಲ್ಲಿ ಇರುವ ಗೋವನ್ನು ತೆಗೆಯಬೇಕಾಗುತ್ತದೆ. ಇಂದು ಗೋಮಾಂಸ ತಿನ್ನಲು ಗೋವನ್ನು ಸಾಕುತ್ತಿದ್ದೇವೆ ಎನ್ನುವ ವಿಚಾರದ ವಾದವನ್ನು ಮುಂದಿಡಲಾಗುತ್ತಿದೆ. ಗೋಹತ್ಯೆ ವಿಚಾರ ಹೇಳಿದರೆ ಹಿಂದು ಸಮುದಾಯಕ್ಕೆ ನೋವು ತರಲಿದೆ ಎಂಬುದು ತಲೆಯಲ್ಲಿ ಹೊಕ್ಕಿರುವುದರಿಂದ ಇಂತಹ ವಾತುಗಳನ್ನಾಡುತ್ತಿದ್ದಾರೆ ಎಂದರು.
ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವ ವಿಚಾರದಲ್ಲಿ ಮಾತನಾಡುತ್ತಿರುವ ವ್ಯಾಖ್ಯಾನ ಅವೈಜ್ಞಾನಿಕವಾಗಿ ಕೂಡಿದೆ. ಗೋಹತ್ಯೆ ಯಾಕೆ ಮಾಡಬಾರದು ಎಂದು ನಾನು ವೈಜ್ಞಾನಿಕವಾಗಿ ಹೇಳುತ್ತೇನೆ. ಈ ವಿಚಾರವನ್ನು ವೈಜ್ಞಾನಿಕವಾಗಿಯೇ ನೋಡಬೇಕು ಎಂದು ಹೇಳಿದರು.
ಗೋ ಸಂರಕ್ಷಕ ಫೈಜ್ ಖಾನ್ ಮಾತನಾಡಿ, ನಾವೆಲ್ಲರು ಸೇರಿ ಗೋವುಗಳನ್ನು ಸಂರಕ್ಷಿಸಬೇಕು. ಗೋವುಗಳು ಕೇವಲ ಹಾಲು ಕೊಡುವ ಹಸುವಲ್ಲ, ಅವುಗಳು ನಮಗೆ ತಾಯಿ ಇದ್ದ ಹಾಗೆ. ಸನಾತನ ಕಾಲದಿಂದಲೂ ಗೋವುಗಳನ್ನು ಪೂಜೆ ಮಾಡಿಕೊಂಡು ಬರಲಾಗುತ್ತಿದೆ. ಆದರೆ, ಇದೀಗ ಗೋವುಗಳಿಗೆ ಮನುಷ್ಯರಿಂದ ಕಂಟಕ ಉಂಟಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣ ಕೈಗೊಳ್ಳಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಕಾಂಗ್ರೆಸ್ ಸರ್ಕಾರ ಹಲವು ಗ್ಯಾರೆಂಟಿಗಳನ್ನು ಜಾರಿ ಮಾಡಲು ಹೊರಟಿದೆ. ಆದರೆ, ಮನುಷ್ಯನಿಗೆ ಹಾಲು ಕೊಡುವ ಗೋವುಗಳ ಜೀವಕ್ಕೆ ಸರ್ಕಾರ ಗ್ಯಾರಂಟಿ ನೀಡುತ್ತಿಲ್ಲ. ರಾಜಕೀಯ ಕಾರಣಕೋಸ್ಕರ ಗೋ ಹತ್ಯೆ ನಿಷೇಧ ಕಾಯ್ದೆ ಹಿಂಪಡೆಯಲಾಗುವುದು ಎಂದು ಸರ್ಕಾರ ಹೇಳುತ್ತಿದೆ ಎಂದರು.
ವಿದೇಶಕ್ಕೆ ಗೋಮಾಂಸ ರಫ್ತು ಮಾಡುವುದನ್ನು ನಿಲ್ಲಿಸುವ ಜತೆಗೆ ಗೋಹತ್ಯೆ ತಡೆಗೆ ರಾಷ್ಟ್ರೀಯ ಕಾಯ್ದೆ ಜಾರಿಗೆ ತರಬೇಕು. ಪಂಚಗವ್ಯ , ಗೋಮೂತ್ರದ ಮಹತ್ವದ ಬಗ್ಗೆ ರಾಜ್ಯ ಪಶು ಸಂಗೋಪನಾ ಸಚಿವರು ಅರಿಯಬೇಕು ಎಂದು ಹೇಳಿದರು. ಭಾರತ್ ಸಾಧು ಸಮಾಜ್ ಪ್ರಧಾನರಾದ ಶ್ರೀ 1008ನೇ ಮಹಾಂತ ಚೇತನ್ ಗಿರಿ ಮಹಾರಾಜ್ ಸಾನ್ನಿಧ್ಯ ವಹಿಸಿದ್ದರು.