ಚಿತ್ರದುರ್ಗ: ಬೆಂಗಳೂರು ಚಾಮರಾಜಪೇಟೆ ಸರ್ಕಾರಿ ಪಶುವೈದ್ಯ ಆಸ್ಪತ್ರೆ ಜಾಗ ಕಬಳಿಸುವ ಹುನ್ನಾರು ನಡೆದಿದೆ ಎಂದು ವಿಶ್ವ ಹಿಂದು ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಬಿ.ವಿ. ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ದುಷ್ಕರ್ಮಿಗಳನ್ನು ಬಂಧಿಸಿ ಶಿಕ್ಷೆಗೊಳಪಡಿಸಬೇಕೆಂದು ಆಗ್ರಹಿಸಿ ಚಿತ್ರದುರ್ಗ ಗೋ ಸಂವರ್ಧನಾ ಸಂರಕ್ಷಣಾ ಸಮಿತಿ ನಗರದಲ್ಲಿ ಸೋಮವಾರ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
ಪಶು ವೈದ್ಯ ಆಸ್ಪತ್ರೆ ಜಾಗ ಕಬಳಿಸುವ ದುಷ್ಟರ ಹುನ್ನಾರಕ್ಕೆ ಕಡಿವಾಣ ಬಿದ್ದಿದ್ದರಿಂದ ಬೆದರಿಕೆ ತಂತ್ರವಾಗಿ ಈ ಹೀನ ಕೃತ್ಯ ಎಸಗಲಾಗಿದೆ.
ಮಾನಸಿಕ ಅಸ್ವಸ್ಥನನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಲಾಗಿದೆ ಎಂದಿರುವ ಸರ್ಕಾರ ನಡೆಯನ್ನು ಶಂಕಿಸಿದ ಸುರೇಶ್, ಕೃತ್ಯ ಎಸಗಿದ ನೈಜ ಆರೋಪಿಗಳು ಯಾರೆಂಬುದು ಸರ್ಕಾರಕ್ಕೆ ಗೊತ್ತಿದೆ. ಅಲ್ಪಸಂಖ್ಯಾತರ ತುಷ್ಟೀಕರಣದ ಭಾಗವಾಗಿ ನೈಜ ಆರೋಪಿಗಳನ್ನು ಬಂಧಿಸಿಲ್ಲ, ಮತಾಂಧರ ರಕ್ಷಣೆಗೆ ಸರ್ಕಾರ ಮುಂದಾಗಿದೆ ಎಂದು ಕಿಡಿಕಾರಿದರು.
ಜಗತ್ತಿನ 197ದೇಶಗಳಲ್ಲಿ ಭಾರತ ಮಾತ್ರ ಹಿಂದು ರಾಷ್ಟ್ರ, ಇದರ ವಿಸ್ತೀರ್ಣ ಈ ಹಿಂದೆ 78 ಲಕ್ಷ ಚದರ ಕಿ.ಮೀ ಇತ್ತು. ಅಫ್ಘಾನಿಸ್ತಾನ,ಪಾಕಿಸ್ತಾನ, ನೇಪಾಳ ಹಾಗೂ ಶ್ರೀಲಂಕವೂ ಸೇರಿತ್ತು. ಆದರೆ, ಪರರ ಆಕ್ರಮಣ, ಒಳಗಿನ ಒಡಕುಗಳಿಂದಾಗಿ ತುಂಡು, ತಂಡಾಗಿದ್ದರಿಂದಾಗಿ ಭಾರತದ ವಿಸ್ತೀರ್ಣವೀಗ 34 ಲಕ್ಷ ಚದರ ಕಿ.ಮೀ.ಗೆ ಕಡಿತವಾಗಿದೆ.
ನಮ್ಮ ದೇಶ ಮೇಲೆ 2 ಸಾವಿರ ವರ್ಷಗಳ ಕಾಲ ಪರಕೀಯರ ಆಕ್ರಮಣ ನಡೆದಿತ್ತು. ಶೇ.90 ಇದ್ದ ಹಿಂದುಗಳ ಸಂಖ್ಯೆ ಶೇ.70ಕ್ಕೆ ಕುಸಿದಿದೆ. ಹೊರಗಿನವರಗಿಂತ ಹೆಚ್ಚಿನ ದಾಳಿ ಈಗ ನಡೆಯುತ್ತಿದೆ. ಮತಕ್ಕಾಗಿ ಶೇ. 18ಜನರ ಓಲೈಕೆ ನಡೆಯುತ್ತಿದೆ. ಇದಕ್ಕೆ ಕಾರಣ ಅವರ ಲ್ಲಿರುವ ಒಗ್ಗಟ್ಟು. ಶೇ.70 ಹಿಂದುಗಳು ಸಂಘಟಿತವಾಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಧರ್ಮವನ್ನು ರಕ್ಷಿಸುವ ಕೆಲಸವಾಗುತ್ತಿಲ್ಲ. ಹಿಂದುಪರ ಸರ್ಕಾರ ಬರುವವರೆಗೆ ಈ ದುಸ್ಥಿತಿ ತಪ್ಪದು. ತುಷ್ಟೀಕರಣದಿಂದಾಗಿ ಗೋಹತ್ಯೆ ಗಳಾಗುತ್ತಿವೆ. ಕುರ್ಚಿ ಶಾಶ್ವತವಲ್ಲ, ಗೋ ಮಾತೆ ಶಾಪ ತಟ್ಟಿದರೆ ಬೆಂದು ಹೋಗ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಗರ ಸುಬ್ರಹ್ಮಣ್ಯಸ್ವಾಮಿ ದೇವಾಲಯದ ಅರ್ಚಕ ರಮೇಶ್ ಮಾತನಾಡಿ, ದೇಶದಲ್ಲಿಂದು ಗೋವಿನ ಸಂತತಿ ಕ್ಷೀಣಿಸುತ್ತಿದೆ. ಗೋ ಮಾತೆ ಕೆಚ್ಚಲು ಕೊಯ್ದ ಪಾಪಿಗಳಿಗೆ ಭಗವಂತನೇ ಶಿಕ್ಷೆ ಕೊಡಬೇಕೆಂದರು.
ಗೋವಿನ ಮಾಲೀಕನಿಗೆ ಸರ್ಕಾರದಿಂದ ಸೂಕ್ತ ಪರಿಹಾರ, ಗೋ ರಕ್ಷಣೆ ದೃಷ್ಟಿಯಿಂದ ರೈತರಿಗೆ ಬಂದೂಕು ಪರವಾನಗಿ, ಗೋವನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಬೇಕು, ಗೋಶಾಲೆಗೆ ಅನುದಾನ ಮುಂದುವರಿಸಬೇಕು. ಗೋಹತ್ಯೆ ವಿರುದ್ಧದ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಪ್ರತಿಭಟನಾನಿರತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಕುಡಾ ಮಾಜಿ ಅಧ್ಯಕ್ಷ ಟಿ. ಬದರಿನಾಥ್, ಬಜರಂಗದಳ ಪ್ರಾಂತ ಸಹಸಂಯೋಜಕ ಪ್ರಭಂಜನ್, ರಾಜಕುಮಾರ್, ಗಿರೀಶ್, ಶ್ರೀನಾಥ್, ಟಿ. ಸಂದೀಪ್, ಕೇಶವ, ನಾಗರಾಜ್, ದೇವರಾಜ್, ಜಿತೇಂದ್ರ ಹುಲಿಕುಂಟೆ, ನಾಗರಾಜ್, ಉದಯ್, ಪರಮೇಶ್, ಮಲ್ಲಿಕಾರ್ಜನ್, ನಾಗರಾಜ್‌ಬೇದ್ರೆ, ಛಲವಾದಿ ತಿಪ್ಪೇಸ್ವಾಮಿ, ರುದ್ರೇಶ್, ಬಸಮ್ಮ, ಗುರುರಾಜ್, ಚಂದ್ರಶೇಖರ್, ಶಿವರಾಜ್, ವೇಣು, ರಂಗನಾಥ್, ಲೋಕೇಶ್, ವೀಣಾ ಮತ್ತಿತರ ಬಿಜೆಪಿ, ಸಂಘ ಪರಿವಾರ ಹಾಗೂ ಸಮಿತಿ ಮುಖಂಡರು ಇದ್ದರು.
ನಗರದ ಆನೆ ಬಾಗಿಲಿನಿಂದ ವೀರ ವನಿತೆ ಒನಕೆ ಓಬವ್ವ ವೃತ್ತದವರೆಗೆ ಹಸುಗಳಿಗೆ ಪೂಜೆ ಸಲ್ಲಿಸಿ ಅವುಗಳೊಂದಿಗೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಿದರು.
---