ಜಿಲ್ಲೆ

ಗೋವಾಕ್ಕೆ ಪ್ರವಾಸಕ್ಕೆ ತೆರಳಿದ್ದ ಯುವಕ ಮೃತ

ಚನ್ನರಾಯಪಟ್ಟಣ: ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳಿದ್ದ ಯುವಕ ಗೋವಾದ ಬೀಚ್‌ನಲ್ಲಿ ಆಟವಾಡುತ್ತಿದ್ದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.


ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಹೋಬಳಿಯ ಕರಿಕ್ಯಾತನಹಳ್ಳಿ ಗ್ರಾಮದ ಕುಮಾರ್ ಎಂಬುವರ ಮಗ ಸಂಜಯ್‌ಕುಮಾರ್(20) ಮೃತ ಯುವಕ.


ಸಂಜಯ್‌ಕುಮಾರ್ ಸೇರಿದಂತೆ ಕರಿಕ್ಯಾತನಹಳ್ಳಿ ಗ್ರಾಮದ 12 ಯುವಕರ ತಂಡ ಕಳೆದ ಗುರುವಾರ ಗೋವಾಕ್ಕೆ ಪ್ರವಾಸಕ್ಕೆ ತೆರಳಿದ್ದರು. ಎರಡು ದಿನ ಬಹುತೇಕ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದ ಈ ಯುವಕರು ಶನಿವಾರ ಗೋವಾ ಸೇರಿದ್ದರು. ಅಂದು ಸಂಜೆ ಎಲ್ಲ ಸ್ನೇಹಿತರು ಗೋವಾದ ಬಾಗಾ ಬೀಚ್‌ನಲ್ಲಿ ನೀರಿಗಿಳಿದು ಆಟವಾಡುತ್ತಿದ್ದರು. ಈ ವೇಳೆ ದೊಡ್ಡ ಅಲೆ ಬಂದು ಅಪ್ಪಳಿಸಿದ್ದು, ಆರು ಯುವಕರು ಅಲೆಯಲ್ಲಿ ಕೊಚ್ಚಿ ಹೋಗಿದ್ದಾರೆ. ತಕ್ಷಣ ಸ್ಥಳದಲ್ಲಿದ್ದ ಈಜುಗಾರರು ಐವರನ್ನು ರಕ್ಷಿಸಿ ದಡಕ್ಕೆ ಎಳೆದು ತಂದಿದ್ದಾರೆ. ಆದರೆ ಸಂಜಯ್‌ಕುಮಾರ್ ಮಾತ್ರ ಪತ್ತೆಯಾಗಲಿಲ್ಲ.


ಇದರಿಂದ ಉಳಿದವರು ಗಾಬರಿಗೊಂಡು ಹುಡುಕುತ್ತಿದ್ದ ವೇಳೆಗೆ ಅಲೆಯಲ್ಲಿ ಸಂಜಯ್‌ಕುಮಾರ್ ದೇಹ ದಡಕ್ಕೆ ಬಂದಿದೆ. ಹತ್ತಿರಕ್ಕೆ ಹೋಗಿ ನೋಡುವಷ್ಟರಲ್ಲಿ ಆತ ಆಗಲೇ ಮೃತಪಟ್ಟಿದ್ದ. ಅಲ್ಲಿಂದ ಆಂಬುಲೆನ್ಸ್ ಮೂಲಕ ಗೋವಾ ಸರ್ಕಾರಿ ಮೆಡಿಕಲ್ ಆಸ್ಪತ್ರೆಯ ಶವಾಗಾರಕ್ಕೆ ಮೃತದೇಹವನ್ನು ಸಾಗಿಸಲಾಯಿತು.


ವಿಷಯ ತಿಳಿಯುತ್ತಿದ್ದಂತೆಯೇ ಆತನ ತಂದೆ ಹಾಗೂ ಸಂಬಂಧಿಕರು ಗೋವಾಕ್ಕೆ ಭಾನುವಾರ ತೆರಳಿದ್ದರು. ಭಾನುವಾರ ರಜೆಯಾಗಿದ್ದರಿಂದ ಸೋಮವಾರ ಮರಣೋತ್ತರ ಪರೀಕ್ಷೆ ನಡೆಸಿ ಸಂಜಯ್‌ಕುಮಾರ್ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿತು. ಗೋವಾದ ಪಣಜಿ ವ್ಯಾಪ್ತಿಯ ಕಲ್‌ಕುಂಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.