ಹುಲಸೂರ: ಹೈದರಾಬಾದ್ ಕರ್ನಾಟಕ ವಿಮೋಚನಾ ಚಳುವಳಿಯಲ್ಲಿ ತ್ಯಾಗ, ಬಲಿದಾನದಿಂದ ಗೋರ್ಟಾ ಇತಿಹಾಸದಲ್ಲಿ ನೆಲೆ ನಿಂತ್ತಿದೆ. ಇಲ್ಲಿನ ಸ್ಮಾರಕ ನೋಡಲು ಬೇರೆ ಬೇರೆ ರಾಜ್ಯಗಳಿಂದ ಯಾತ್ರಿಗಳು ಬರಬೇಕು. ಗೋರ್ಟಾ ನಶೆಮುಕ್ತ, ದುಶ್ಚಟಗಳಿಂದ ಮುಕ್ತವಾಗಿ ಮಾದರಿ ಗ್ರಾಮ ಆಗಬೇಕು ಎಂದು ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜುಗೌಡ ಹೇಳಿದರು.
ಗೋರ್ಟಾ (ಬಿ) ಗ್ರಾಮದಲ್ಲಿ ಕೇಶವ ಕಾರ್ಯ ಸಂವರ್ಧನ ಸಮಿತಿಯಿಂದ ಭಾನುವಾರ ಏರ್ಪಡಿಸಿದ್ದ ಕಲ್ಯಾಣ ಕರ್ನಾಟಕ ವಿಮೋಚನಾ ದಿವಸ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಗೋರ್ಟಾ ಸ್ಮಾರಕ, ಇಲ್ಲಿನ ವೀರಗಾಥೆ ಜಗತ್ತಿಗೆ ತಿಳಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರಿಗಳು ಬರುವಂತೆ ಆಗಬೇಕು ಎಂದರು.
ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ಇಡೀ ದೇಶ ಸ್ವಾತಂತ್ರ ಸಂಭ್ರಮದಲ್ಲಿದ್ದರೆ ನಮ್ಮ ಭಾಗದಲ್ಲಿ ರಜಾಕಾರರು ದೌರ್ಜನ್ಯ ನಡೆಸಿದ್ದರು. ಗ್ರಾಮಗಳಲ್ಲಿ ಹಿಂದೂಗಳ, ಮನೆಗಳ, ದೇವಸ್ಥಾನಗಳ ಮೇಲೆ ದಾಳಿ ನಡೆಸಲಾಗಿತ್ತು. ಜಮೀನುಗಳಲ್ಲಿನ ಬೆಳೆ ನಾಶ ಮಾಡಲಾಗಿತ್ತು. ಮಹಿಳೆಯರ ಅತ್ಯಾಚಾರಗೈಯಲಾಗಿತ್ತು. ಮಕ್ಕಳು, ವಯಸ್ಕರನ್ನು ಕತ್ತಿ, ಕೊಡಲಿಯಿಂದ ಹಿಂಸಿಸಿ ಕೊಲ್ಲಲಾಯಿತು. ಈ ಇತಿಹಾಸ ಮಕ್ಕಳಿಗೆ ತಿಳಿಸಬೇಕು ಎಂದರು.
ಡಾ.ಜ್ಯೋತಿರ್ಮಯಾನಂದ ಖಡಕೆ ಉಪನ್ಯಾಸ ನೀಡಿ, ಹೈದರಾಬಾದ್ ನಿಜಾಮ ಭಾರತದ ಒಕ್ಕೂಟದಲ್ಲಿ ವಿಲೀನಕ್ಕೆ ಒಪ್ಪಲಿಲ್ಲ. ಗೋರ್ಟಾದಲ್ಲಿ ಭೀಕರ ಹತ್ಯಾಕಾಂಡ ನಡೆಯಿತು. ಡುಮಣಿ ಅವರ ವಾಡೆ ಕೆಲವರನ್ನು ರಕ್ಷಿಸಿತು. ಮಕ್ಕಳು, ಗರ್ಭಿಣಿಯರನ್ನು ಬರ್ಬರವಾಗಿ ಹತ್ಯೆಗೈಯಲಾಯಿತು. ಸೇನೆಯ ಮೇಜರ್ ಜನರಲ್ ಜೆ.ಎನ್.ಚೌಧರಿ ನೇತೃತ್ವದಲ್ಲಿ ಆಪರೇಷನ್ ಪೋಲೋ ಸೈನಿಕ ಕಾರ್ಯಾಚರಣೆ ನಡೆಸಿ, ಸ್ವಾತಂತ್ರ ದೊರಕಿತು ಎಂದರು.
ಕೃತಿ ಬಿಡುಗಡೆ: ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ.ಬಿ.ಸಿ.ಮಹಾಬಲೇಶ್ವರಪ್ಪ ಬರೆದ ಕಲ್ಯಾಣ ಕರ್ನಾಟಕ ಕುರಿತು ಸಾಹಿತ್ಯದ ಮೂಲಕ ಕ್ರಾಂತಿ ಅಲೆ ಮೂಡಿಸಿದ ಕ್ರಾಂತಿ ವೀರ ಚಂದ್ರಶೇಖರ ಪಾಟೀಲ್ ಕೃತಿ ಬಿಡುಗಡೆ ಮಾಡಲಾಯಿತು. ಹುತಾತ್ಮ ಸ್ಮಾರಕ ನಿರ್ಮಾಣಕ್ಕೆ ಸಹಕರಿಸಿದವರು ಹಾಗೂ ಮಹಾದೇವಪ್ಪ ಡುಮಣಿ ಅವರ ಕುಟುಂಬದವರನ್ನು ಸನ್ಮಾನಿಸಲಾಯಿತು.
ಕೇಶವ ಕಾರ್ಯ ಸಂವರ್ಧನ ಸಮಿತಿ ಅಧ್ಯಕ್ಷ ಮಾರುತಿರಾವ ಪಂಚಭಾಯಿ, ಶಾಸಕರಾದ ಶರಣು ಸಲಗರ, ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ದಲಿಂಗಪ್ಪ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಪ್ರಮುಖರಾದ ಶಿವರಾಜ ಗಂದಗೆ, ಮಾರುತಿರಾವ ಮುಳೆ, ಈಶ್ವರ ಸಿಂಗ್ ಠಾಕೂರ, ಬಿಜೆಪಿ ಮಂಡಲ ಅಧ್ಯಕ್ಷ ಅಶೋಕ ವಕಾರೆ, ಅರುಣ ಬಿನ್ನಾಡಿ, ಅಶೋಕ ಹೊಕ್ರಾಣೆ, ಪ್ರಮುಖರಾದ ಸೋಮನಾಥ ರಾಜೇಶ್ವರೆ, ಬಸವರಾಜ ಪಾಟೀಲ್, ಮಹೇಶ ಪಟ್ಟೆ, ಮಹೇಶ ಬಿರಾದಾರ, ಸುಭಾಷ ಪತಂಗೆ, ಗುರುನಾಥ, ಲೋಕೇಶ ಪಟ್ಟೆ, ಅರುಣ ಜಮಾದಾರ, ವಿಶ್ವನಾಥಯ್ಯ ಮಠಪತಿ ಇತರರಿದ್ದರು.
ರವಿಚಂದ್ರ ಬರದಾಪುರೆ ಸ್ವಾಗತಿಸಿದರು. ವಿಶಾಲ ಸ್ವಾಮಿ ನಿರೂಪಣೆ ಮಾಡಿದರು. ಮಾರುತಿರಾವ ಪಂಚಭಾಯಿ ವಂದಿಸಿದರು.