ಕಡೂರು ಬಸವೇಶ್ವರ ವೃತ್ತದಲ್ಲಿ ಆಗಮಿಸಿದ ನಂದಿ ರಥಯಾತ್ರೆಯನ್ನು ಬಿಜೆಪಿ ಮಂಡಲದ ಪದಾಧಿಕಾರಿಗಳು ಸ್ವಾಗತಿಸಿದರು. ಬಿ.ಪಿ.ದೇವಾನಂದ್, ಜಿಗಣೇಹಳ್ಳಿ ನೀಲಕಂಠಪ್ಪ, ನವೀನ್ ಇತರರಿದ್ದರು.  
ಜಿಲ್ಲೆ

ಗೋಮಾತೆ ರಕ್ಷಿಸಲು ನಂದಿ ರಥಯಾತ್ರೆ

ಎಸ್.ಎನ್.ರವೀಂದ್ರ

ಕಡೂರು: ಗೋಮಾತೆಗೆ ರಾಷ್ಟ್ರೀಯ ಮಾನ್ಯತೆ ದೊರೆಯಬೇಕೆಂಬ ಉದ್ದೇಶದಿಂದ ರಾಜ್ಯಾದ್ಯಂತ ಸಂಚರಿಸುತ್ತಿರುವ ನಂದಿ ರಥಯಾತ್ರೆಯನ್ನು ಸೋಮವಾರ ಚಿಕ್ಕಮಗಳೂರಿನಿಂದ ಪಟ್ಟಣಕ್ಕೆ ಆಗಮಿಸಿದಾಗ ಬಿಜೆಪಿ ತಾಲೂಕು ಘಟಕದಿಂದ ಭವ್ಯವಾಗಿ ಬರಮಾಡಿಕೊಳ್ಳಲಾಯಿತು.

ಪಟ್ಟಣದ ಬಸವೇಶ್ವರ ವೃತ್ತದ ಬಳಿ ರಥಯಾತ್ರೆಯನ್ನು ಬಿಜೆಪಿ ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್ ಸ್ವಾಗತಿಸಿ ಮಾತನಾಡಿ, ಬಂಟ್ವಾಳ ತಾಲೂಕಿನ ಬ್ರಹ್ಮಗಿರಿಯ ಗೋಸೇವಾ ಕೇಂದ್ರ ಹಾಗೂ ರಾಷ್ಟ್ರೀಯ ಗೋಸೇವಾ ಸಂಸ್ಥಾನದಿಂದ ಡಿ.31ರಿಂದ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸುತ್ತಿದ್ದು, ಮಾ.29ರಂದು ಸಮಾರೋಪಗೊಳ್ಳಲಿದೆ. ರಾಮ ಮಂದಿರ ನಿರ್ಮಾಣಗೊಂಡು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಠ ಮಂದಿರಗಳಲ್ಲಿ ಗೋಮಯ ದೀಪಗಳನ್ನು ಬೆಳಗಿಸಿ ಭಕ್ತಿ ಸಮರ್ಪಿಸುವ ಕಾರ್ಯವಾಗಬೇಕಿದೆ. ಗೋಮಾತೆ ಅಷ್ಟ ಶಕ್ತಿಗಳ ದೇವತೆಯಾಗಿ ಮಾತೃಸ್ವರೂಪಿಯಲ್ಲಿ ಪೂಜಿಸಲಾಗುತ್ತದೆ ಎಂದು ಹೇಳಿದರು.

ಬಿಜೆಪಿ ಮಂಡಲ ಉಪಾಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಮಾತನಾಡಿ, ವಿಷಮುಕ್ತ ಗಾಳಿ, ಆಹಾರ ಮತ್ತು ಪ್ರಕೃತಿಯ ಸಂರಕ್ಷಣೆ ಉದ್ದೇಶದಿಂದ ರಾಜ್ಯಾದ್ಯಂತ ಸಂಚರಿಸುತ್ತಿರುವ ನಂದಿ ಯಾತ್ರೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದರು.

ಯಾತ್ರೆಯಲ್ಲಿದ್ದ ದೇಶಿ ತಳಿಯ ಗೋವುಗಳಿಗೆ ಪೂಜೆ ಸಲ್ಲಿಸಲಾಯಿತು. ಪ್ರಧಾನ ಕಾರ್ಯದರ್ಶಿ ಕುರುಬಗೆರೆ ಮಹೇಶ್, ಮಲ್ಲಿಕಾರ್ಜುನ್, ಟಿ.ಆರ್.ಲಕ್ಕಪ್ಪ, ಉದಯ್‌ಕುಮಾರ್, ಕುಮಾರ್, ರಘು, ಸಂಪತ್, ನವೀನ್, ಪ್ರೇಮ್‌ಕುಮಾರ್ ಬಾಬು ಇತರರಿದ್ದರು.