ಚಿಕ್ಕಬಳ್ಳಾಪುರ : ಬೆಂಗಳೂರಿನ ಹೆಬ್ಬಾಳ-ನಾಗವಾರ ವ್ಯಾಲಿಯ (ಎಚ್.ಎನ್.ವ್ಯಾಲಿ) ತ್ಯಾಜ್ಯ ಸಂಸ್ಕರಿಸಿದ ನೀರು ಜಿಲ್ಲಾ ಕೇಂದ್ರದ ಕಂದವಾರ ಕೆರೆಯ ಬಳಿಕ ಗೋಪಾಲಕೃಷ್ಣ ಕೆರೆಯತ್ತ ಸಾಗಿದೆ.
ಜಿಲ್ಲೆಯ 44 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯೇ ಎಚ್.ಎನ್.ವ್ಯಾಲಿ. ಈಗಾಗಲೇ ಬಾಗಲೂರು ಕೆರೆಯಿಂದ ಕಂದವಾರ ಕೆರೆಗೆ ಹರಿದಿದ್ದು, ಮಳೆಗಾಲದ ಸಂದರ್ಭದಲ್ಲೂ ಅನೇಕ ಬಾರಿ ನೀರಿಲ್ಲದೆ ಮೈದಾನದ ಮಾದರಿಯಲ್ಲಿ ಕಾಣಿಸುತ್ತಿದ್ದ ಕೆರೆಗೆ ಜೀವಕಳೆ ಬಂದಿದೆ. ಇದೀಗ ಈ ಕೆರೆಯ ಮೂಲಕ ರಾಜಕಾಲುವೆಯಲ್ಲಿ ಗೋಪಾಲಕೃಷ್ಣ ಕೆರೆಗೆ ನೀರು ಹರಿಸಲಾಗುತ್ತಿದೆ. ಕಂದವಾರ ಕೆರೆಯ ತೂಬಿನಿಂದ ಸೋಮವಾರ ನೀರು ಬಿಟ್ಟು ಪರೀಕ್ಷಿಸಲಾಯಿತು.
ಇನ್ನು 44 ಕೆರೆಗಳಿಗೆ ನೀರು : ಎಚ್.ಎನ್.ವ್ಯಾಲಿ ನೀರಾವರಿ ಯೋಜನೆ ಜಾರಿಗೆ ಪರ ಮತ್ತು ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದು ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇದರ ನಡುವೆ ಒಂದು ಕಡೆ ಎಚ್.ಎನ್. ವ್ಯಾಲಿಯ ನೀರಿನಲ್ಲಿ ವೈದ್ಯಕೀಯ ಮತ್ತು ಕೈಗಾರಿಕೆ ತ್ಯಾಜ್ಯ ಮಿಶ್ರಣವಾಗಿರುವುದರಿಂದ ಅಂತರ್ಜಲ ಮಟ್ಟ ಕಲುಷಿತಗೊಳ್ಳುವುದರ ಜತೆಗೆ ಕೆರೆಗಳು ಹಾಳಾಗುತ್ತವೆ ಎಂಬ ಆರೋಪ ಕೇಳಿ ಬಂದಿದೆ. ಮತ್ತೊಂದೆಡೆ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಸೇರಿ ವಿವಿಧ ಸಂಘಟನೆಗಳು ಕಂದವಾರ ಕೆರೆಗೆ ನೀರು ಹರಿದ ಹಿನ್ನೆಲೆಯಲ್ಲಿ ಜಲಜಾತ್ರೆ ಕೈಗೊಂಡು ಸಂಭ್ರಮಿಸಿವೆ.
ಇನ್ನು 2017ನೇ ಸಾಲಿನ ಸೆ.18 ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ 883.54 ಕೋಟಿ ರೂ. ವೆಚ್ಚದ ಯೋಜನೆಗೆ ಚಾಲನೆ ನೀಡಿದ್ದು ಇದರಡಿ ಜಿಲ್ಲೆಯ 4 ತಾಲೂಕುಗಳ 44 ಕೆರೆಗಳಿಗೆ ವಾರ್ಷಿಕ 2.70 ಟಿಎಂಸಿ ನೀರು ಹರಿಸಬಹುದು ಎಂಬುದು ಅಧಿಕಾರಿಗಳ ಲೆಕ್ಕಾಚಾರ. ಇದಕ್ಕೆ ಈಗಾಗಲೇ ಬರೋಬ್ಬರಿ 114 ಕಿ.ಮೀ ಉದ್ದದ ಪೈಪ್ ಲೈನ್ ಕಾಮಗಾರಿ ಕೈಗೊಳ್ಳಲಾಗಿದೆ. ಕಂದವಾರ ಕೆರೆ ಬಳಿಕ ಗೋಪಾಲಕೃಷ್ಣ ಕೆರೆಗೆ ನೀರು ತುಂಬಿಸಲಾಗುತ್ತಿದೆ. ಉಳಿದ 42 ಕೆರೆಗಳು ಬಾಕಿ ಇವೆ.