ಕೊಡಗು : ಹಗಲು-ರಾತ್ರಿ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ 44ನೇ ವರ್ಷದ ಗೋಣಿಕೊಪ್ಪ ದಸರಾ ಆಚರಣೆಗೆ ಮತ್ತಷ್ಟು ಮೆರುಗು ನೀಡಲಾಗುವುದು ಎಂದು ಕಾವೇರಿ ದಸರಾ ಸಮಿತಿ ಅಧ್ಯಕ್ಷ ಬಿ.ಎನ್.ಪ್ರಕಾಶ್ ತಿಳಿಸಿದರು.
ಗೋಣಿಕೊಪ್ಪ ದಸರಾ ಹಿನ್ನೆಲೆಯಲ್ಲಿ ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಕಕೂನ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.
ಸೆ. 26ರಂದು ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆಯೊಂದಿಗೆ ಆರಂಭವಾಗಿ ಅ.5 ರಂದು ವಿಜಯ ದಶಮಿ ಮೂಲಕ ದಸರಾಕ್ಕೆ ತೆರೆ ಎಳೆಯಲಾಗುತ್ತದೆ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಮಾಡಲು 20ಕ್ಕೂ ಹೆಚ್ಚು ಉಪ ಸಮಿತಿಗಳ್ನು ರಚಿಸಲಾಗಿದೆ. ಎಲ್ಲರ ಸಹಕಾರದಲ್ಲಿ ಚಾಮುಂಡೇಶ್ವರಿ ಆರಾಧನೆಯೊಂದಿಗೆ ದಸರಾ ನಡೆಸಲಾಗುವುದು ಎಂದು ತಿಳಿಸಿದರು.
ಶಬ್ದಮಾಲಿನ್ಯ ತಡೆಗೆ ರಾತ್ರಿ 10 ಗಂಟೆ ನಂತರದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ ನೀಡಿರುವ ನಿರ್ಬಂಧ ಪಾಲಿಸಬೇಕಿದೆ. ಬೆಳಗಿನ ಸಮಯದಲ್ಲಿ ವೈವಿಧ್ಯಮಯ ಕಾರ್ಯಕ್ರಮ ನಡೆಸಲು ಒತ್ತು ನೀಡಲಾಗಿದೆ. ವಿಜ್ಞಾನ ಮೇಳ, ಮಕ್ಕಳ ದಸರಾ, ಮಕ್ಕಳ ಸಂತೆ, ಕ್ರೀಡಾಕೂಟ, ಮಹಿಳಾ ದಸರಾ, ಕವಿಗೋಷ್ಠಿ, ರಂಗೋಲಿ ಸ್ಪರ್ಧೆ, ಚೆಸ್ ಸೇರಿದಂತೆ ವಿವಿಧ ಸ್ಫರ್ಧೆಗಳು ನಡೆಯಲಿವೆ. ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆವರಗೆ ದಸರಾ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವುದು. ಸಮಯ ಉಳಿಸಲು ವಿಶೇಷ ಪ್ರಯತ್ನ, ವೇದಿಕೆ ಸಭಾ ಕಾರ್ಯಕ್ರಮದಲ್ಲಿ ಭಾಷಣಕ್ಕೆ ಕಡಿವಾಣ, ನಿರೂಪಣೆಗೆ ಒತ್ತು, ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ದೇವಿ ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ವಿಜಯ ದಶಮಿ ದಿನದಂದು ಸ್ತಬ್ಧಚಿತ್ರ ಮೆರವಣಿಗೆ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದೆ. ವಿವಿಧ ಇಲಾಖೆ ಹಾಗೂ ಸಂಘ, ಸಂಸ್ಥೆಗಳ ಸ್ತಬ್ಧಚಿತ್ರಕ್ಕೂ ಅವಕಾಶ ನೀಡಲಾಗುವುದು. ಸಂಜೆ 6 ಗಂಟೆಗೆ ಶೋಭಾಯಾತ್ರೆ ನಡೆಸಲಾಗುವುದು. ಶೋಭಾಯಾತ್ರೆ ಪ್ರಸ್ತುತಪಡಿಸುವ ಮಂಟಪ ಸಮಿತಿಗಳಿಗೆ ಪ್ರೋತ್ಸಾಹಧನ ನೀಡುವ ಮೂಲಕ ಮತ್ತಷ್ಟು ಮೆರಗು ನೀಡಲು ಚಿಂತನೆ ನಡೆಸಲಾಗಿದೆ ಎಂದರು.
ದಸರಾ ವೇದಿಕೆಯಲ್ಲಿ ಪ್ರದರ್ಶನ ನೀಡಿದ ಸಾಕಷ್ಟು ಸ್ಥಳೀಯ ಪ್ರತಿಭೆಗಳು ರಾಜ್ಯ, ರಾಷ್ಟ್ರ ಮಟ್ಟಕ್ಕೂ ತಲುಪಿರುವುದು ವಿಶೇಷವಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಸ್ಥಳೀಯ ಪ್ರತಿಭೆಗಳಿಗೆ ಹೆಚ್ಚು ಪ್ರೋತ್ಸಾಹ, ಅವಕಾಶ ನೀಡಲಾಗುವುದು. ಪಟ್ಟಣದ 2 ಕಿ. ಮೀ. ವ್ಯಾಪ್ತಿಯ ರಸ್ತೆ ಹಾಗೂ ಅಂಗಡಿ ಮಳಿಗೆಗಳಲ್ಲಿ ದೀಪಾಲಂಕಾರ ಮಾಡಲಾಗುವುದು ಎಂದು ತಿಳಿಸಿದರು.
ಮೆಚ್ಚುಗೆ: 2008 ರಿಂದ ಸರ್ಕಾರದ ಅನುದಾನ ಪಡೆಯಲು ಅವಕಾಶವಾಯಿತು. ಈ ವರ್ಷದ ಆಚರಣೆಗೆ 50 ಲಕ್ಷ ರೂ.ಗಳನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ. ಶಾಸಕ ಕೆ.ಜಿ.ಬೋಪಯ್ಯ ಅವರ ಪ್ರಯತ್ನದಿಂದ ಗೋಣಿಕೊಪ್ಪ ದಸರಾ ಸರ್ಕಾರದ ಮಟ್ಟದಲ್ಲಿಯೂ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಬಿ. ಎನ್. ಪ್ರಕಾಶ್ ಹೇಳಿದರು.
ದಶ ಮಂಟಪ ಸಮಿತಿ ಅಧ್ಯಕ್ಷ ಕಾಡ್ಯಮಾಡ ಚೇತನ್ ಮಾತನಾಡಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಜಿಮ್ಮ ಸುಬ್ಬಯ್ಯ, ಪತ್ರಕರ್ತ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಸಂವಾದ ಸಂಚಾಲಕ ಎನ್.ಎನ್.ದಿನೇಶ್, ಸಂಘದ ಪ್ರಮುಖರಾದ ಮಂಡೇಡ ಅಶೋಕ್, ವಿ.ವಿ.ಅರುಣ್‌ಕುಮಾರ್, ಚಿಮ್ಮಣಮಾಡ ದರ್ಶನ್ ದೇವಯ್ಯ, ಎಚ್.ಕೆ.ಜಗದೀಶ್, ಡಿ.ನಾಗೇಶ್, ಎಚ್.ಆರ್.ಸತೀಶ್ ಇದ್ದರು.