ಹೆಜ್ಜೆನಾದ ತಂಡದಿಂದ ನೃತ್ಯ ನಡೆಯಿತು. 
ಜಿಲ್ಲೆ

ಗೋಣಿಕೊಪ್ಪ 44ನೇ ವರ್ಷದ ದಸರೆಗೆ ಚಾಲನೆ

Kodagu

ಗೋಣಿಕೊಪ್ಪ: ಗೋಣಿಕೊಪ್ಪ 44ನೇ ವರ್ಷದ ದಸರಾಕ್ಕೆ ಸೋಮವಾರ ರಾತ್ರಿ ಕಾವೇರಿ ಕಲಾ ವೇದಿಕೆ ಉದ್ಘಾಟಿಸುವ ಮೂಲಕ ಚಾಲನೆ ನೀಡಲಾಯಿತು.


ಮಂಗಳೂರಿನ ಹೆಜ್ಜೆನಾದ ತಂಡ ನೃತ್ಯ ಮತ್ತು ಸಂಗೀತದ ಮೂಲಕ ಮುದ ನೀಡಿತು. ಮೂರು ಗಂಟೆಗಳ ಕಾಲ ಕಲಾ ಪ್ರದರ್ಶನ ನೀಡಿದರು. ಸೌಜನ್ಯ, ಖುಷಿ ಶೆಟ್ಟಿ, ಭೂಮಿಕಾ, ಜ್ಞಾನ ಐತಾಳ್, ಪ್ರಕೃತಿರಾವ್, ರಶ್ಮಿಕಾ, ವಂದನಾ, ಅನನ್ಯ ಕಾಮತ್, ಆರ್ಯ ತಂಡದ ನೃತ್ಯ ಹಾಗೂ ಸುಪ್ರಿತ್, ಮೋಹಿತ್ ಅವರ ಕಂಠದಿಂದ ಸಂಗೀತ ಸುಧೆ ಹರಿಯಿತು. ನವದುರ್ಗಿ, ಆಂಜನೇಯ, ಶ್ರೀರಾಮ ಹಾಡು, ವಿನಾಯಕ ಸ್ತುತಿ ನಡೆಯಿತು. ಪುಣ್ಯಕೋಟಿ ಕಥೆ ಮೂಡಿ ಬಂತು. ಕಲಾಪ್ರಿಯರು ಕುಣಿದು ಸಂಭ್ರಮಿಸಿದರು.
ವೇದಿಕೆಯನ್ನು ಎಲ್‌ಇಡಿ ಸ್ಕ್ರೀನ್ ಮೂಲಕ ನಿರ್ಮಿಸಿರುವುದು ಆಕರ್ಷಕವಾಗಿದೆ. ಪರದೆಯಲ್ಲಿ ಕರ್ನಾಟಕ ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಹಿತಿ, ಪ್ರಕೃತಿ ನೋಟ ಕಾರ್ಯಕ್ರಮದ ನಡುವೆ ಮೂಡಿಬರುವ ಮೂಲಕ ಗಮನ ಸೆಳೆಯಿತು. ಗೋಣಿಕೊಪ್ಪ ಪ್ರೋಮೋ ಅನಾವರಣಗೊಳಿಸಿ, ಹಿಂದಿನ ದಸರಾವನ್ನು ಮತ್ತೆ ಮೆಲುಕು ಹಾಕುವಂತೆ ಮಾಡಿತು. ಪ್ರಕೃತಿ ವಿಕೋಪ, ಕರೊನಾ ಹಿನ್ನೆಲೆ, ಎರಡು ವರ್ಷಗಳಿಂದ ಕಾರ್ಯಕ್ರಮ ನಡೆಯದೆ ಜಡ್ಡುಗಟ್ಟಿದ ಕಲಾಭಿಮಾನಿಗಳ ಮನಸ್ಸಿಗೆ ಮುದ ನೀಡಿತು.
ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 9 ದಿನಗಳು ದೇವಿಯನ್ನು ಆರಾಧಿಸುವ ಮೂಲಕ ಸಮೃದ್ಧಿ, ಜನರ ಆರೋಗ್ಯ ನೆಮ್ಮದಿಗಾಗಿ ಪ್ರಾರ್ಥಿಸಿದರು. ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ಸೇರಲು ಅವಕಾಶ ದೊರೆತಿದೆ ಎಂದರು.


ಸಮಿತಿಯ ಅಧ್ಯಕ್ಷ ಬಿ.ಎನ್.ಪ್ರಕಾಶ್ ಮಾತನಾಡಿ, ನಮ್ಮ ಮನಸ್ಸನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ದೇವಿ ಆರಾಧನೆಯಿಂದ ಸಾಧ್ಯವಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮನಸ್ಸನ್ನು ಉಲ್ಲಾಸಭರಿತವಾಗಿ ಇಟ್ಟುಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಕಾರ್ಯಧ್ಯಕ್ಷ ಸಿ.ಕೆ.ಬೋಪಣ್ಣ, ಗ್ರಾ.ಪಂ. ಅಧ್ಯಕ್ಷೆ ಚೈತ್ರಾ ಬಿ. ಚೇತನ್, ಉಪಾಧ್ಯಕ್ಷೆ ವೈ.ಎಂ.ಸವಿತಾ, ಪ್ರಮುಖರಾದ ನೆಲ್ಲೀರ ಚಲನ್ ಕುಮಾರ್, ಕುಲ್ಲಚಂಡ ಬೋಪಣ್ಣ, ಸುನೀಲ್ ಮಾದಪ್ಪ, ಬಿ.ಡಿ.ಮುಕುಂದ, ಎಂ.ಜಿ.ಮೋಹನ್, ಕಾಡ್ಯಮಾಡ ಚೇತನ್, ಅಜ್ಜಿಕುಟ್ಟೀರ ಸಿ. ದೇವಯ್ಯ ಇದ್ದರು.


ಸೆ. 28ರಂದು ಬೆಳಗ್ಗೆ 9 ಗಂಟೆಗೆ ಅನುದಾನಿತ ಪ್ರೌಡಶಾಲೆಯಲ್ಲಿ ದಸರಾ ಚೆಸ್, ಕಾವೇರಿ ಕಲಾ ವೇದಿಕೆಯಲ್ಲಿ ಮಹಿಳಾ ದಸರಾ, ಸಂಜೆ 6ಕ್ಕೆ ನಾಟ್ಯನಿಕೇತನ ತಂಡದ ನೃತ್ಯ, 7 ಗಂಟೆಗೆ ಪಂಚಮ್ ತ್ಯಾಗರಾಜ್ ತಂಡದ ಸುಗಮ ಸಂಗೀತ, 8 ಗಂಟೆಗೆ ಕೊಡವ ನೈಟ್ಸ್ ಆಯೋಜಿಸಲಾಗಿದೆ.

03 : ಹೆಜ್ಜೆನಾದ ತಂಡದಿಂದ ನೃತ್ಯ ನಡೆಯಿತು.