ಕಲಬುರಗಿ: ಮೊದಲು ಯಾರು ದೇಶದ್ರೋಹಿಗಳು ಅಂತ ಒಮ್ಮೆ ಬಿಜೆಪಿಯವರು ಯೋಚಿಸಲಿ. ಭಗತಸಿಂಗ್ ಪಾಠ ಪಠ್ಯಪುಸ್ತಕದಿಂದ ಯಾಕೆ ತೆಗೆದಿದ್ದೀರಿ ಎಂದು ಕೇಳಿದ್ದಕ್ಕೆ ದೇಶದ್ರೋಹಿ ಅಂತಾರೆ. ಪಾಠ ತೆಗೆದವರು ದೇಶದ್ರೋಹಿಗಳಲ್ಲವೇ? ಇಷ್ಟಕ್ಕೂ ರಾಷ್ಟ್ರಕ್ಕೆ ಹೆಡಗೇವಾರ್ ಕೊಡುಗೆ ಏನಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.
ರಾಯಚೂರು ಜಿಲ್ಲೆ ಗಬ್ಬೂರದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಶುಕ್ರವಾರ ನಗರದ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಮಕ್ಳಳಿಗೆ ಗೋಡ್ಸೆ ಪಾಠ ಹೇಳುತ್ತಾರೇನ್ರಿ? ಹಾಗಿದ್ದರೆ ಮಹಾತ್ಮ ಗಾಂಜಿಯನ್ನು ಕೊಂದ ನಾಥುರಾಮ ಗೋಡ್ಸೆ ಯಾರು? ಆರೆಸ್ಸೆಸ್ನಲ್ಲಿದ್ದವರು. ಇನ್ನು ಹೆಡಗೇವಾರ್ ಅದರ ಸಂಸ್ಥಾಪಕ. ಅವರ ಭಾಷಣದಿಂದ ನಮ್ಮ ಮಕ್ಕಳು ಕಲಿಯುವುದಾದರೂ ಏನು ಎಂದು ಕಿಡಿಕಾರಿದರು.
1925ರಲ್ಲಿ ದೇಶದಲ್ಲಿ ಸ್ವಾತಂತ್ರ ಸಂಗ್ರಾಮ ನಡೆದಿತ್ತು. ಆಗ ಇದ್ದ ಹೆಡಗೇವಾರ್ ಕೊಡುಗೆ ಸ್ವಾತಂತ್ರ ಸಂಗ್ರಾಮಕ್ಕೆ ಏನು? ಆರೆಸ್ಸೆಸ್ನವರಿಗೆ ಹೆಡಗೇವಾರ್, ಗೋಡ್ಸೆ ಬೇಕಾದರೆ ತಮ್ಮ ಕಚೇರಿಗಳಲ್ಲಿ ಆರಾಸಲಿ. ಪಠ್ಯಪುಸ್ತಕದ ವಿಚಾರದಲ್ಲಿ ಎಡಪಂಥಿ, ಬಲಪಂಥಿಯವಾದ ಮುಖ್ಯವಲ್ಲ. ದೇಶ ಮೊದಲು, ನಂತರ ನಾವು ಎಂಬ ಭಾವನೆ ಮೂಡಿಸುವಂಥ, ರಾಷ್ಟ್ರಭಕ್ತಿ ಹೆಚ್ಚಿಸುವಂಥ ಮಹಾ ಪುರುಷರ ಚರಿತ್ರೆ ಪಠ್ಯದಲ್ಲಿ ಸೇರಿಸಬೇಕು ಎಂದು ಸಲಹೆ ನೀಡಿದರು.
ಮಕ್ಕಳಲ್ಲಿ ಭಾವೈಕ್ಯತೆ, ರಾಷ್ಟ್ರೀಯತೆ, ಜಾತ್ಯತೀತ ಭಾವನೆ ಮೂಡಿಸುವುದರ ಜತೆ ರಾಷ್ಟ್ರಭಕ್ತಿ ಬೆಳೆಸುವಂಥ ಬಸವಾದಿ ಶರಣರು, ನಾರಾಯಣ ಗುರು, ಚಂದ್ರಶೇಖರ ಆಜಾದ್, ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಭಗತಸಿಂಗ್ನಂಥವರ ಪಾಠಗಳನ್ನು ಕಲಿಸಿದರೆ ಮಕ್ಕಳು ಶ್ರೇಷ್ಠ ವ್ಯಕ್ತಿಗಳಾಗುತ್ತಾರೆ. ದೇಶ ಭಕ್ತರಾಗುತ್ತಾರೆ. ಅದನ್ನು ಬಿಟ್ಟು ಹೆಡಗೇವಾರ್ ಬಗ್ಗೆ ಕಲಿಸಿದರೆ ಏನಾಗುತ್ತಾರೆ? ಈಗ ಹೆಡಗೇವಾರ್ ಬಗ್ಗೆ ಸೇರಿಸಿದವರು, ನಾಳೆ ಗೋಡ್ಸೆ ಬಗ್ಗೆ ಪಾಠ ಸೇರಿಸಲು ಹಿಂದೇಟು ಹಾಕಲ್ಲ. ತಕ್ಷಣವೇ ಹೆಡಗೇವಾರ್ ಭಾಷಣ ಪಠ್ಯದಿಂದ ಕೈಬಿಡಲು ಒತ್ತಾಯಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ಡಾ.ಶರಣಪ್ರಕಾಶ ಪಾಟೀಲ್, ಪ್ರಧಾನ ಕಾರ್ಯದರ್ಶಿ ಶರಣಕುಮಾರ ಮೋದಿ, ಶಾಸಕರಾದ ಎಂ.ವೈ.ಪಾಟೀಲ್, ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ್, ಮುಖಂಡರಾದ ಡಾ.ಎಸ್.ಬಿ. ಕಾಮರಡ್ಡಿ ಬೆಂಡೆಬಿಂಬಳಿ, ವಿಜಯಕುಮಾರ ಜಿ.ರಾಮಕೃಷ್ಣ, ಸೋಮಶೇಖರ ಗೋನಾಯಕ, ಮೋಹನಕುಮಾರ ವೈದ್ಯ, ಹಣಮಂತ ಭೂಸನೂರ, ದೇವೇಂದ್ರಪ್ಪ ಮರತೂರ ಇತರರಿದ್ದರು.