ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಹುಬ್ಬಳ್ಳಿ- ಧಾರವಾಡವನ್ನು ಅಕ್ಷರಶಃ ಸುಂದರಗೊಳಿಸಲು ಕೈಜೋಡಿಸಿರುವ ಸಂಘ- ಸಂಸ್ಥೆಗಳು ಹಲವಾರು. ಇಂತಹ ಸಂಘ ಸಂಸ್ಥೆಗಳ ಸದಸ್ಯರು ತ್ಯಾಜ್ಯ ನಿರ್ವಹಣೆ, ಟ್ರಾಫಿಕ್ ನಿರ್ವಹಣೆ, ರಸ್ತೆಗಳು ಹಾಗೂ ಅಕ್ಕಪಕ್ಕದ ಗೋಡೆಗಳ ಸೌಂದಯೀಕರಣ ಹೀಗೆ ವಿವಿಧ ಸೇವೆಗಳ ಮೂಲಕ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.
ಇಲ್ಲಿಯ ರೆವಲೂಷನ್ ಮೈಂಡ್ಸ್ ಎಂಬ ವಿದ್ಯಾರ್ಥಿ ಕೇಂದ್ರಿತ ಸರ್ಕಾರೇತರ ಸಂಸ್ಥೆಯು ರಸ್ತೆಗಳ ಅಕ್ಕಪಕ್ಕದ ಗೋಡೆಗಳ ಮೇಲೆ ಚಿತ್ತಾರಗಳನ್ನು ಬಿಡಿಸುವ ಮೂಲಕ ಆಕರ್ಷಕಗೊಳಿಸುವ ಕಾರ್ಯದಲ್ಲಿ ತೊಡಗಿದೆ.
ಮಹಾನಗರ ಪಾಲಿಕೆಯ ಸಹಯೋಗದಲ್ಲಿ ಇವರು ಸೌಂದಯೀಕರಣ ಕೆಲಸ ಕೈಗೊಂಡಿದ್ದಾರೆ. ಮಹಾನಗರ ಪಾಲಿಕೆಯವರು ವಿವಿಧ ಬಣ್ಣದ ವ್ಯವಸ್ಥೆ ಮಾಡಿದ್ದು, ಕಲಾವಿದರ ಸೇವೆಯನ್ನು ಇವರು ನೀಡುತ್ತಿದ್ದಾರೆ.
ಪ್ರತಿ ವಾರ ಒಂದೊಂದು ಸ್ಥಳದಲ್ಲಿ ಸೇವೆ ಒದಗಿಸುತ್ತಿರುವ ಇವರು ಈ ಭಾನುವಾರ ನವನಗರದ ಕ್ಯಾನ್ಸರ್ ಆಸ್ಪತ್ರೆಯ ಕಾಂಪೌಂಡ್ಗೆ ಭಾರತೀಯ ಕಲೆ, ಸಂಸ್ಕೃತಿ, ಸಾಹಿತ್ಯ ಬಿಂಬಿಸುವ ಚಿತ್ರಗಳನ್ನು ಬಿಡಿಸಿದರು.
ರೆವಲೂಷನ್ ಮೈಂಡ್ಸ್ ಅಧ್ಯಕ್ಷ ವಿನಾಯಕ ಜೋಗಾರಿಶೆಟ್ಟರ್, ಮಹಾರುದ್ರಪ್ಪ, ಯೋಜನೆಯ ಸಂಯೋಜಕ ಕುಶಾಲ್ ಚಟ್ನಿ ಸೇರಿ ಅನೇಕ ಸದಸ್ಯರು ಚಿತ್ರಗಳನ್ನು ಬಿಡಿಸಿದರು. ಪ್ರತಿ ವಾರ ವೀಕೆಂಡ್ನಲ್ಲಿ ಇವರು ನಗರ ಸೌಂದರ್ಯಕ್ಕಾಗಿ ಸಮಯ ಮೀಸಲಿಡುತ್ತಾರೆ. ಆ ಮೂಲಕ ತಮ್ಮ ಪರಿಸರ ಕಾಳಜಿ ಮೆರೆಯುತ್ತಾರೆ.
ನಮ್ಮ ಹುಬ್ಬಳ್ಳಿ- ಧಾರವಾಡ ಕೂಡ ಕ್ಲೀನ್ ಸಿಟಿ ಆಗಬೇಕು. ಇದಕ್ಕಾಗಿ ಕೇವಲ ಆಡಳಿತ ವ್ಯವಸ್ಥೆಯ ಮೇಲೆ ಭಾರ ಹಾಕದೇ ನಮ್ಮಿಂದಾದ ಸೇವೆ ಮಾಡಬೇಕು. ಇದಕ್ಕೆ ನಾಗರಿಕರ ಸಹಕಾರ ಕೂಡ ಮುಖ್ಯ. ಈಗಾಗಲೇ ವಿದ್ಯಾನಗರ, ಗೋಕುಲ ರಸ್ತೆ, ಮುಂತಾದ ಕಡೆಗಳಲ್ಲಿ ಗೋಡೆ ಬರಹ, ಚಿತ್ತಾರಗಳನ್ನು ಬಿಡಿಸಲಾಗಿದೆ. ಇದೀಗ ನವನಗರದಲ್ಲಿ ವೈವಿಧ್ಯಮಯ ಚಿತ್ರಗಳನ್ನು ಬಿಡಿಸಿ ಸಾರ್ವಜನಿಕರ ಗಮನ ಸೆಳೆದರು.
ನವನಗರ ವಲಯ ಕಚೇರಿ 4ರ ಸಹಾಯಕ ಆಯುಕ್ತ ರಮೇಶ ನೂಲ್ವಿ ಹಾಗೂ ಇತರ ಅಧಿಕಾರಿಗಳು ಕಲಾವಿದರಿಗೆ ಅಗತ್ಯ ಸಹಕಾರ ನೀಡಿದರು. ಚಿತ್ರಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ನೂರಕ್ಕೂ ಹೆಚ್ಚು ಕಲಾವಿದರು, ವಿದ್ಯಾರ್ಥಿಗಳಿರುವ ನಮ್ಮ ಸಂಸ್ಥೆಯ ಮೂಲಕ ಅವಳಿ ನಗರದ ಸೌಂದರ್ಯಕ್ಕೆ ಶ್ರಮಿಸುತ್ತಿದ್ದೇವೆ. ಸ್ಮಾರ್ಟ್ ಸಿಟಿ ರಸ್ತೆ ಬದಿಯ ಗೋಡೆಗಳು ಸುಂದರವಾಗಬೇಕು. ಕಲೆ, ಸಂಸ್ಕೃತಿ, ಪರಂಪರೆ, ಸಾಹಿತ್ಯವು ಇಲ್ಲಿ ಬಿಂಬಿತವಾಗಬೇಕು. ಇದಕ್ಕಾಗಿ ರೆವಲೂಷನ್ ಮೈಂಡ್ಸ್ ಸದಸ್ಯರು ಸೇವೆಯನ್ನು ಉಚಿತವಾಗಿ ನೀಡುತ್ತಿದ್ದಾರೆ.