ಜಿಲ್ಲೆ

ಗೋಕಾಕ ಲಕ್ಷ್ಮೀದೇವಿ ಜಾತ್ರೆಗೆ ಸಿದ್ಧತೆ ಮಾಡಿಕೊಳ್ಳಿ - ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್

ಬೆಳಗಾವಿ: ಜಿಲ್ಲೆಯ ಗೋಕಾಕ ಮಹಾಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಏಕಕಾಲಕ್ಕೆ ಭಾಗವಹಿಸುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಮೂಲ ಸೌಕರ್ಯ ಒದಗಿಸಬೇಕು. ಜಾತ್ರೆಯ ಸಮಯದಲ್ಲಿ ದೇವಸ್ಥಾನದ 10 ಕಿಮೀ ವ್ಯಾಪ್ತಿ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಸಭೆಯಲ್ಲಿ ಮಾತನಾಡಿ, ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಭಕ್ತರಿಗೆ ಯಾವುದೇ ಸಮಸ್ಯೆ ಎದುರಾಗಬಾರದು. ವಾಹನಗಳ ಪಾರ್ಕಿಂಗ್, ಕುಡಿಯುವ ನೀರು ಸೇರಿ ಸಕಲ ಸೌಲಭ್ಯ ಕಲ್ಪಿಸಬೇಕು. ಸಾರಿಗೆ ಇಲಾಖೆ ಭಕ್ತರಿಗೆ ಸಾರಿಗೆ ವ್ಯವಸ್ಥೆ ಮಾಡಬೇಕು ಎಂದರು.

ದೇವಿ ಮೆರವಣಿಗೆ, ದೀಪಾಲಂಕಾರ, ಪಲ್ಲಕ್ಕಿ ಉತ್ಸವ, ಹೊನ್ನಾಟ, ಪ್ರಸಾದ ವ್ಯವಸ್ಥೆ, ಜೋಡೆತ್ತು, ಜೋಡು ಕುದುರೆ ಸ್ಪರ್ಧೆ ಹಾಗೂ ಸೈಕಲ್ ಸ್ಪರ್ಧೆ ಸೇರಿ ಇತರ ಕಾರ್ಯಕ್ರಮ ವೇಳಾಪಟ್ಟಿ ಹಾಗೂ ಭಾಗವಹಿಸಬಹುದಾದ ಭಕ್ತರ ಸಂಖ್ಯೆಯನ್ನು ಮುಂಚಿತವಾಗಿಯೇ ತಿಳಿಸಬೇಕು ಎಂದರು.

ಜೂ. 28ರೊಳಗೆ ಜಾತ್ರೆಯ ಸರ್ವಸಿದ್ಧತೆ ಜತೆಗೆ ತ್ಯಾಜ್ಯ ವಿಲೇವಾರಿಗೂ ಸಿದ್ಧತೆ ಮಾಡಿಕೊಳ್ಳಬೇಕು. ಸಾವಿರಾರು ಜನ ನದಿಯಲ್ಲಿ ಸ್ನಾನ ಮಾಡುವ ಸಂದರ್ಭದಲ್ಲಿ ಅಗತ್ಯದ ಮುನ್ನೆಚ್ಚರಿಕೆ ಫಲಕಗಳನ್ನು ಅಳವಡಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾತನಾಡಿ, ನದಿ ಭಾಗದ ಸ್ಥಳದಲ್ಲಿ ಎಸ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ನಿಯೋಜಿಸಲು ಕ್ರಮ ವಹಿಸಬೇಕು. ಮೊಬೈಲ್ ಟಾಯ್ಲಟ್ ವ್ಯವಸ್ಥೆ ಕಲ್ಪಿಸಬೇಕು. ರಸ್ತೆ ಸಂಚಾರ, ರಥೋತ್ಸವ ಇನ್ನಿತರ ಕಾರ್ಯಕ್ರಮಗಳಿಗೆ ತೊಂದರೆಯಾಗದಂತೆ ಮರಗಳ ಕೊಂಬೆಗಳ ಸವರಿಕೆ ಮಾಡುವಂತೆ ತಿಳಿಸಿದರು.

ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ, ತಹಸೀಲ್ದಾರ್ ಮೋಹನ ಭಸ್ಮೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಈಶ್ವರ ಗಡಾದ ಇತರರಿದ್ದರು.