ಜಿಲ್ಲೆ

ಗೋಕಾಕ ಜಿಲ್ಲೆಯನ್ನಾಗಿ ಮಾಡದಿದ್ದರೆ ಉಗ್ರ ಹೋರಾಟ

ಗೋಕಾಕ: ಈ ಹಿಂದಿನ ಸರ್ಕಾರಗಳು ರಚಿಸಿದ ಮೂರು ಆಯೋಗಗಳ ವರದಿ ಆಧರಿಸಿ ಗೋಕಾಕ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿಯ ಅಧ್ಯಕ್ಷ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ನಗರದ ಮಿನಿ ವಿಧಾನಸೌಧದ ಆವರಣದಲ್ಲಿ ಶುಕ್ರವಾರ ಗೋಕಾಕ ಜಿಲ್ಲಾ ಹೋರಾಟ ಚಾಲನಾ ಸಮಿತಿ ನೇತತ್ವದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಧರಣಿ ಸತ್ಯಾಗ್ರಹದ ನೇತತ್ವ ವಹಿಸಿ ಅವರು ಮಾತನಾಡಿ, ಮುಂಬರುವ ದಿನಗಳಲ್ಲಿ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಗೋಕಾಕ ಜಿಲ್ಲೆ ಮಾಡದಿದ್ದರೆ ಅನಿರ್ವಾಯವಾಗಿ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಹಾಗಾಗಿ ಅಧಿವೇಶನದಲ್ಲಿ ಚರ್ಚೆ ಮಾಡಿ ಜಿಲ್ಲೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ ಮಾತನಾಡಿ, ಗೋಕಾಕ ಜಿಲ್ಲಾ ಹೋರಾಟಕ್ಕೆ ನಾಲ್ಕು ದಶಕಗಳ ಹಿನ್ನೆಲೆಯಿದೆ. ಹೋರಾಟ ದೊಡ್ಡಮಟ್ಟದಲ್ಲಿ ನಡೆಯುತ್ತಿದ್ದಾಗ ಸರ್ಕಾರ ಎಚ್ಚೆತ್ತುಕೊಳ್ಳುತಿತ್ತು. ಆದರೆ ಇಂದು ಆ ಮಟ್ಟದಲ್ಲಿ ಹೋರಾಟ ನಡೆಯುತ್ತಿಲ್ಲ. ಜಿಲ್ಲೆಯ ಎಲ್ಲ ಶಾಸಕರು ಮತ್ತು ಸಚಿವರು ಬೆಳಗಾವಿ ಅಭಿವದ್ಧಿ ಹಿತದಷ್ಟಿಯಿಂದ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಜಿಲ್ಲೆ ಮಾಡಬೇಕು ಎಂದು ಆಗ್ರಹಿಸಿದರು.

ಶಾಸಕರ ಸಭೆ ಕರೆಯಲಿ: ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಜಿಲ್ಲೆಯ ಎಲ್ಲ ಶಾಸಕರೊಂದಿಗೆ ಸಭೆ ನಡೆಸಿ ಜಿಲ್ಲಾ ವಿಭಜನೆಗೆ ಪೂರಕವಾಗಿ ಚರ್ಚೆ ಮಾಡುತ್ತೇನೆ ಎಂದಿದ್ದಾರೆ. ಆದಷ್ಟು ಬೇಗ ಸಚಿವ ಸತೀಶ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು ಎಂದರು.

ವಕೀಲರ ಸಂಘದ ಅಧ್ಯಕ್ಷ ಬಸವರಾಜ ಕೋಟಗಿ ಮಾತನಾಡಿ, ಅಭಿವೃದ್ಧಿ ದಷ್ಟಿಯಿಂದ ಅಖಂಡ ಬೆಳಗಾವಿ ಜಿಲ್ಲೆಯ ಕನಿಷ್ಠ ಮೂರು ಜಿಲ್ಲೆ ಆಗಬೇಕು ಎಂದರು.

ಡಾ.ಮಹಾಂತೇಶ ಕಡಾಡಿ, ಚಂದ್ರಶೇಖರ ಕೊಣ್ಣೂರ, ಬಸವರಾಜ ಖಾನಪ್ಪನವರ, ಚಂದನ ಗಿಡ್ಡನ್ನವರ, ಅರ್ಜುನ ಪಂಗನ್ನವರ ಮಾತನಾಡಿ, ಜನಸಂಖ್ಯೆ ಆಧಾರದ ಮೇಲೆ ಬೆಳಗಾವಿ ಜಿಲ್ಲೆಯನ್ನು ವಿಭಜಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ವಿಶ್ವನಾಥ ಕಡಕೋಳ, ಸೋಮಶೇಖರ ಮಗದುಮ್ಮ, ದಸ್ತಗಿರಿ ಪೈಲವಾನ್, ಆರ್.ಕೆ. ಪವಾರ, ಮುನ್ನಾ ಖತೀಬ್, ಸದಿಕತ ಮಂಕಾದಾರ, ಸಂಜೀವ ಪೂಜಾರಿ, ಲಕ್ಷ್ಮಣ ಸವಸುದ್ದಿ, ಪುಟ್ಟು ಖಾನಾಪುರೆ, ಬಸವಣ್ಣೆಪ್ಪ ಹಿರಟ್ಟಿ, ನಿಂಗಪ್ಪ ಅಮ್ಮಿನಬಾವಿ, ಮಲ್ಲಿಕಾರ್ಜುನ ಅರಬಾವಿ, ರಜನಿಕಾಂತ ಮಾಳೋದೆ, ಶಫಿ ಜಮಾದರ, ಬಿರಪ್ಪ ಪ್ರಧಾನಿ, ಮಲ್ಲಿಕಾರ್ಜುನ ಈಟಿ ಇತರರಿದ್ದರು.