ಜಿಲ್ಲೆ

ಗೋ ಸೇವೆಯಲ್ಲೇ ಕಾವಿಧಾರಿ ಖುಷಿ

ಸ.ದಾ. ಜೋಶಿ ಬೀದರ್

ಧಾರ್ಮಿಕ-ಆಧ್ಯಾತ್ಮಿಕ ಕಾರ್ಯಕ್ರಮ, ಸತ್ಸಂಗ, ಶೈಕ್ಷಣಿಕ ಇತರ ಸಮಾಜಪರ ಚಟುವಟಿಕೆ ಜತೆಗೆ ಗೋ ಸೇವೆಯಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ಖುಷಿ ಕಂಡುಕೊಳ್ಳುವ ಮೂಲಕ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಮಾದರಿ ಹೆಜ್ಜೆ ಇಟ್ಟಿದ್ದಾರೆ.

ಸ್ವಾಮೀಜಿ ಗೋ ಪ್ರೀತಿಯಿಂದ ಶಿವನಗರದಲ್ಲಿರುವ ಆಶ್ರಮ ಪರಿಸರ ಇದೀಗ ಗೋವುಗಳಿಂದ ತುಂಬಿದೆ. ದೇಸಿ ತಳಿಗಳ ಸಂರಕ್ಷಣೆ ಹಾಗೂ ಸಂವರ್ಧನೆ ಧ್ಯೇಯದೊಂದಿಗೆ ಸ್ವಾಮೀಜಿ ಅವರು ರಾಮಕೃಷ್ಣ ವಿವೇಕಾನಂದ ಆಶ್ರಮ ಗೋ ಶಾಲೆ ಆರಂಭಿಸಿದ್ದಾರೆ. ಗಿರ್, ದೇವಣಿ, ಕಾಂಕ್ರೇಜ್ ಸೇರಿ ಸ್ಥಳೀಯ ತಳಿಗಳ 100ಕ್ಕೂ ಹೆಚ್ಚು ಗೋವುಗಳಿವೆ. ನಿತ್ಯದ ಬಹುತೇಕ ಸಮಯವನ್ನು ಸ್ವಾಮೀಜಿ ಗೋವುಗಳ ಪಾಲನೆ, ಪೋಷಣೆಗೆ ಮೀಸಲಿಟ್ಟು ಅಲ್ಪ ಸಮಯದಲ್ಲೇ ಮಾದರಿ ಗೋ ಶಾಲೆಯಾಗಿ ಪರಿವರ್ತಿಸಿದ್ದಾರೆ. ಈ ಪರಿಸರ ಅನೇಕರನ್ನು ಆಕರ್ಷಿಸುವ ಜತೆಗೆ ಗೋ ಸೇವೆಯಲ್ಲಿ ತೊಡಗಲು ಪ್ರೇರಣೆ ನೀಡುತ್ತಿರುವುದು ವಿಶೇಷ.

ಗೋ ಶಾಲೆ ನಡೆಸುವುದು ಅತ್ಯಂತ ಕಷ್ಟಕರ ಮತ್ತು ಕಠಿಣ ಕೆಲಸ. ಇಂಥದರಲ್ಲೂ ಸ್ವಾಮೀಜಿ ಸರ್ಕಾರದ ನಯಾಪೈಸೆ ನೆರವಿಲ್ಲದೆ ಸಕಲ ವ್ಯವಸ್ಥೆಯ ಸುಸಜ್ಜಿತ ಗೋ ಶಾಲೆ ಕಟ್ಟಿದ್ದಾರೆ. ಗೋವುಗಳಿಗೆ ಮೇವು, ಹುಲ್ಲು ಸೇರಿ ಅಗತ್ಯ ಪೌಷ್ಟಿಕ ಪದಾರ್ಥ ನೀಡುತ್ತಿದ್ದಾರೆ. ವರ್ಲಿ ಆಟ್೯ ಪೇಂಟಿಂಗ್ ನಿಂದ ಕಂಗೊಳಿಸುತ್ತಿರುವ ಕಾಂಪೌಂಡ್ವುಳ್ಳ ಶೆಡ್ ನಿರ್ಮಿಸಿದ್ದಾರೆ. ಉತ್ತಮ ಆರೋಗ್ಯಕ್ಕೆ ಔಷಧಿಯಂತಿರುವ ಪೌಷ್ಟಿಕಾಂಶಗಳ ಖಣಿ ಎನಿಸಿರುವ ಗಿರ್ ತಳಿಯ ಹಾಲು, ತುಪ್ಪ (ಕ್ಷೀರಾಮೃತ) ಮಾರಾಟದಿಂದ ಬರುವ ಅಲ್ಪ ಹಣದ ಜತೆಗೆ ಆಶ್ರಮದ ಭಕ್ತರು ಮತ್ತು ದಾನಿಗಳ ನೆರವಿನಿಂದ ಗೋ ಶಾಲೆ ನಡೆಸುತ್ತಿದ್ದಾರೆ. ನಿರ್ವಹಣೆ ಸಾಕಷ್ಟು ಖರ್ಚುದಾಯಕವಿರುವ ಕಾರಣ 25 ಲಕ್ಷಕ್ಕೂ ಅಧಿಕ ಸಾಲದ ಹೊರೆಯೊಂದಿಗೆ ಸಕಲ ವ್ಯವಸ್ಥೆ ಮಾಡಿ ಗೋವುಗಳ ಪರ ತಮಗಿರುವ ಕಾಳಜಿ ಪ್ರದರ್ಶಿಸಿದ್ದಾರೆ. ಈ ಮೂಲಕ ದೇಸಿ ತಳಿಗಳ ಸಂರಕ್ಷಣೆ ಅಗತ್ಯತೆ ಎಷ್ಟಿದೆ ಎಂಬ ಸಂದೇಶ ಸಮಾಜಕ್ಕೆ ರವಾನಿಸುತ್ತಿದ್ದಾರೆ.

ಗೋ ಆಧರಿತ ಕೃಷಿ ಇಂದಿನ ಜರೂರಿಯಿದೆ. ಕರೊನಾದಿಂದ ದೊಡ್ಡ ದೊಡ್ಡ ಕಂಪನಿಗಳಲ್ಲಿದ್ದವರು ಕೆಲಸ ಕಳೆದುಕೊಂಡು ಮನೆ ಸೇರಿದರು. ಅನೇಕರು ಇನ್ನಿಲ್ಲದ ಯಾತನೆ ಅನುಭವಿಸಿದರು. ಆದರೆ ಗೋ ಆಧರಿತ ಕೃಷಿಕರಿಗೆ ಈ ಮಹಾಮಾರಿ ಏನೂ ಮಾಡಲು ಸಾಧ್ಯವಾಗಿಲ್ಲ. ಕರೊನಾ ಕಷ್ಟದ ಸಮಯ ಪ್ರತಿಯೊಬ್ಬರಿಗೂ ದೊಡ್ಡ ಪಾಠ ಕಲಿಸಿದೆ. ಹೀಗಾಗಿ ಇರುವ ಅಲ್ಪಸ್ವಲ್ಪ ಭೂಮಿ ಬಳಸಿಕೊಂಡು ಗೋ ಆಧರಿತ ಕೃಷಿಯಲ್ಲಿ ತೊಡಗಿದರೆ ಅನೇಕರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯ. ಯುವಕರಲ್ಲಿ ಈ ಚಿಂತನೆಗಳನ್ನು ಬಿತ್ತಿ, ಗೋ ಆಧರಿತ ಕೃಷಿಯತ್ತ ಸೆಳೆಯುವ ದಿಸೆಯಲ್ಲಿ ಗೋ ಶಾಲೆ ಕಾರ್ಯಕ್ರಮ ನಡೆಸುತ್ತಿದೆ ಎನ್ನುತ್ತಾರೆ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ.

ಗೋ ಬ್ಯಾಕ್ ಟು ಉಪನಿಷತ್
ವಿಜ್ಞಾನ, ಸಾಂಸ್ಕೃತಿಕ ಹಾಗೂ ಪಾರಂಪರಿಕ ನೆಲೆಗಟ್ಟಿನಲ್ಲೇ ಭಾರತದ ಪುನರುತ್ಥಾನದ ಕನಸು ಸಾಕಾರ ಸಾಧ್ಯ ಎಂದು ಸ್ವಾಮಿ ವಿವೇಕಾನಂದ ಹೇಳಿದ್ದರು. ಇದಕ್ಕಾಗಿ ಗೋ ಬ್ಯಾಕ್ ಟು ಉಪನಿಷತ್ ಎಂಬ ಕರೆ ಕೊಟ್ಟಿದ್ದರು. ಈ ಮೂಲಕ ನಾವೆಲ್ಲ ಮತ್ತೆ ಗೋವು, ಪರಿಸರ, ಕೃಷಿ ಆಧರಿತ ಹಿಂದಿನ ಬದುಕು ಅಳವಡಿಸಿಕೊಳ್ಳುವ ಅಗತ್ಯತೆ ಪ್ರತಿಪಾದಿಸಿದ್ದರು. ಅವರ ಶತಮಾನದ ಹಿಂದಿನ ಆ ಮಾತು ಇಂದು ಅತ್ಯಂತ ಪ್ರಸ್ತುತವೆನಿಸಿದೆ. ಗೋ ಆಧರಿತ ಕೃಷಿ ಮೂಲಕವೇ ಪ್ರತಿಯೊಬ್ಬರೂ ಸ್ವಾವಲಂಬಿ ಬದುಕು ಸಾಗಿಸಲು, ಆತ್ಮನಿರ್ಭರ ಸದೃಢ ಭಾರತ ಕಟ್ಟಲು ಸಾಧ್ಯ. ಗೋವು ಉಳಿದರೆ ಕೃಷಿ ಪ್ರಧಾನ ದೇಶ ಉಳಿಯುತ್ತದೆ. ಹೀಗಾಗಿ ಗೋವಿನ ಮಹತ್ವ ಇನ್ನಾದರೂ ತಿಳಿಯುವ ಅಗತ್ಯವಿದೆ ಎಂದು ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ ಹೇಳುತ್ತಾರೆ.

ದಿನದ 15 ಗಂಟೆ ಮೀಸಲು !
ಸ್ವಾಮಿ ಜ್ಯೋತಿರ್ಮಯಾನಂದ ಗೋ ಶಾಲೆಗೆ ದಿನದ 15 ಗಂಟೆ ಸಮಯ ಮೀಸಲಿಟ್ಟು ಗೋ ಸೇವೆಯಲ್ಲಿ ತೊಡಗಿದ್ದಾರೆ. ಬೆಳಗ್ಗಿನ ಜಾವ 5ರಿಂದ ತಡರಾತ್ರಿವರೆಗೆ ಗೋವುಗಳೊಂದಿಗೆ ಕಾಲ ಕಳೆಯುತ್ತಿದ್ದಾರೆ. ಸ್ವತಃ ಹಾಲು ಹಿಂಡುತ್ತಾರೆ. ಮೇವು, ಹುಲ್ಲು ಕತ್ತರಿಸಿ ಗೋವುಗಳಿಗೆ ಹಾಕುತ್ತಾರೆ. ಮೈ ತೊಳೆಯುತ್ತಾರೆ. ಎಲ್ಲ ಹಸುಗಳಿಗೆ ದೇವತೆಗಳ, ಮಹಾಪುರುಷರ ಹೆಸರಿಟ್ಟಿದ್ದಾರೆ. ಇವರು ಶೆಡ್ನೊಳಗೆ ಹೋದರೆ ಎಲ್ಲ ಹಸುಗಳು ಓಡೋಡಿ ಬಂದು ಸುತ್ತುವರಿಯುತ್ತವೆ. ಹೀಗಾಗಿ ಸ್ವಾಮೀಜಿಗೆ ಗೋವುಗಳ ಮಧ್ಯೆ ಇದ್ದುಕೊಂಡು, ಅವುಗಳ ಸೇವೆಯಲ್ಲಿ ಕಾಲ ಕಳೆಯುವುದೇ ಎಲ್ಲಿಲ್ಲದ ಖುಷಿ ಕೊಡುತ್ತಿದೆ. ಇವರ ಗೋ ಸೇವೆ ಕಂಡು ಕೆಲ ಸ್ವಯಂ ಸೇವಕರು ಸ್ವಯಂಪ್ರೇರಿತರಾಗಿ ಕೈಜೋಡಿಸಿದ್ದಾರೆ. ವೈದ್ಯ, ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಹ ಆಗಾಗ್ಗೆ ಬಂದು ಇಲ್ಲಿ ಕೆಲಸ ಮಾಡುತ್ತಾರೆ. ತೋಟಗಾರಿಕೆಯಲ್ಲಿ ಪದವಿ ಪಡೆದ ಅರವಿಂದ ಅವರು ಎರಡು ವರ್ಷದಿಂದ ಗೋ ಸೇವೆಯಲ್ಲೇ ತೊಡಗಿದ್ದಾರೆ. ಗೋವುಗಳ ನಿರ್ವಹಣೆಗೆ ಮೂವರು, ಹಾಲು ಮಾರಾಟಕ್ಕೆ ಒಬ್ಬರನ್ನು ನಿಯೋಜಿಸಿ ಕೆಲಸ ಕೊಟ್ಟಿದ್ದಾರೆ. ಬರುವ ದಿನಗಳಲ್ಲಿ ಗೋಮೂತ್ರ, ಸಗಣಿಯಿಂದ ವಿವಿಧ ಉತ್ಪನ್ನ ತಯಾರಿಸುವ ಯೋಜನೆ ಹಾಕಿಕೊಂಡಿದ್ದಾರೆ. ಸ್ವಾಮೀಜಿ ಸಂಪರ್ಕ ಸಂಖ್ಯೆ 6361409357.

ವ್ಯವಹಾರಿಕ ದೃಷ್ಟಿಯಿಂದ ಗೋ ಶಾಲೆ ನಡೆಸುತ್ತಿಲ್ಲ. ಸರ್ಕಾರದಿಂದ ಈವರೆಗೆ ನಯಾಪೈಸೆ ಅನುದಾನ ಸಹ ಪಡೆದಿಲ್ಲ. ಯುವಕರನ್ನು ಗೋ ಆಧರಿತ ಕೃಷಿಯತ್ತ ಸೆಳೆಯಲು ಪ್ರೇರಣೆ ತುಂಬುವ ಕೇಂದ್ರ ಇದಾಗಿಸುವ ಧ್ಯೇಯವಿದೆ. ಸರ್ಕಾರಕ್ಕೆ 50 ಎಕರೆ ಜಾಗ ಕೇಳಲಾಗಿದೆ. ಭೂಮಿ ಕೊಟ್ಟರೆ ಈ ಭಾಗದ ಮಾದರಿ ಗೋಶಾಲೆ ಮಾಡುವ ಉದ್ದೇಶವಿದೆ. ಗೋಹತ್ಯೆ ನಿಷೇಧಕ್ಕೆ ಕಠಿಣ ಕಾಯ್ದೆ ಜಾರಿಗೆ ತಂದಿರುವುದು ಉತ್ತಮ. ಇದರೊಂದಿಗೆ ಗೋ ಶಾಲೆ ನಡೆಸುವವರಿಗೆ ಪ್ರೋತ್ಸಾಹಿಸುವ ಯೋಜನೆ ಬರಬೇಕು. | ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜರಾಮಕೃಷ್ಣ ವಿವೇಕಾನಂದ ಆಶ್ರಮ ಗೋಶಾಲೆ ರೂವಾರಿ