ಜಿಲ್ಲೆ

ಗೋ ಶಾಲೆ ಹೆಸರಲ್ಲಿ ೭೬ ಲಕ್ಷ ರೂ. ಅಕ್ರಮ

ಕಲಬುರಗಿ: ನಂದಿ ಎನಿಮಲ್ ವೆಲ್ಫೇರ್ ಸೊಸೈಟಿಯ ಆಡಳಿತ ಮಂಡಳಿಯ ಹೆಸರಿನಲ್ಲಿ ೭೬.೫೧ ಲಕ್ಷ ರೂ. ದುರುಪಯೋಗ ಪಡೆಸಿಕೊಂಡಿದ್ದಾರೆ ಎಂದು ಹುಣಚಿರಾಯ (ಕೇಶವ) ಮೋಟಗಿ ವಿರುದ್ಧ ನಗರದ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
೨೦೦೨ರಲ್ಲಿ ನಂದಿ ಎನಿಮಲ್ ವೆಲ್ಫೇರ್ ಸೊಸೈಟಿ ರಚನೆಯಾಗಿದ್ದು, ನೀತಿ, ನಿಯಮ ರೂಪಿಸಲು ಕೇಶ ಮೋಟಗಿಗೆಗೆ ಅಧಿಕಾರ ನೀಡಲಾಗಿತ್ತು. ಆದರೆ ಆತ ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾನೆ. ನಂತರದ ದಿನಗಳಲ್ಲಿ ಆಡಳಿತ ಮಂಡಳಿ ಸದಸ್ಯರ ಪಟ್ಟಿ ನವೀಕರಣಗೊಂಡಿದೆ. ನವೀಕರಣಗೊಂಡ ಪಟ್ಟಿಯನ್ನು ಪಶುಪಾಲನೆ ಇಲಾಖೆಗೆ ನೀಡದೆ, ಹಳೇ ದಾಖಲೆ ಸಲ್ಲಿಸಿ ೨೦೧೬-೧೭ರಲ್ಲಿ ೧೫.೪೨ ಲಕ್ಷ ರೂ., ೨೦೧೭-೧೮ರಲ್ಲಿ ೯.೯೯ ಲಕ್ಷ ರೂ., ೨೦೧೯-೨೦ರಲ್ಲಿ ೫.೫೯ ಲಕ್ಷ ರೂ., ೨೦೨೨-೨೩ರಲ್ಲಿ ೧೧.೧೧ ಲಕ್ಷ ರೂ, ೨೦೨೩-೨೪ನೇ ಸಾಲಿನಲ್ಲಿ ಪುಣ್ಯಕೋಟಿ ದತ್ತಿ ಯೋಜನೆ ಅಡಿ ೨೪.೧೯ ಲಕ್ಷ ಸೇರಿ ಒಟ್ಟು ೭೬.೫೧ ಲಕ್ಷ ರೂ. ಅನುದಾನವನ್ನು ದುರುಪಯೋಗ ಪಡೆಸಿಕೊಂಡಿದ್ದಾನೆ.
೨೦೧೭-೧೮ರಲ್ಲಿ ಹೊಸ ಆಡಳಿತ ಮಂಡಳಿ ಬಂದರೂ ಸದಸ್ಯರ ಗಮನಕ್ಕೆ ತರದೆ ಹಿಂದಿನ ಸದಸ್ಯರ ಪಟ್ಟಿಯ ಅನ್ವಯ ಹಣ ದುರುಪಯೋಗ ಪಡೆಸಿಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಉಚ್ಛ ನ್ಯಾಯಾಲಯಕ್ಕೂ ಸಹ ಪ್ರಕರಣ (೧೧೭/೨೦೨೨)ವೊಂದಕ್ಕೆ ಹಳೇ ಪಟ್ಟಿ ಸಲ್ಲಿಸಿ, ಕೋರ್ಟ್ಗೂ ತಪ್ಪು ದಾರಿಗೆ ಎಳೆದಿದ್ದಾನೆ. ೨೦೦೨ರ ಪಟ್ಟಿಯನ್ನು ನೀಡಿರುವ ಕುರಿತು ಪಶು ಇಲಾಖೆ ಉಪನಿರ್ದೇಶಕರೂ ದೃಢೀಕರಣ ನೀಡಿದ್ದಾರೆ ಎಂದು ನಗರದ ಸಾಗರ ರಾಠೋಡ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.