ಜಿಲ್ಲೆ

ಗೋ ಬ್ಯಾಕ್​ ಸಿದ್ದು ಹೋರಾಟ ಎಚ್ಚರಿಕೆ

ತುಮಕೂರು ಡೆಸ್ಕ್

ಸಿಎಂ ವಿರುದ್ಧ ಕಪು$್ಪಬಾವುಟ ಪ್ರದರ್ಶನ!, ಅನುದಾನ ತಾರತಮ್ಯಕ್ಕೆ ಎನ್​ಡಿಎ ಶಾಸಕರ ಆಕ್ರೋಶ

ತುಮಕೂರು: ಜಿಲ್ಲೆಯ ಕಾಂಗ್ರೆಸ್​ ಶಾಸಕರ ಕ್ಷೇತ್ರಗಳಿಗೆ ವಿಶೇಷ ಅನುದಾನ ನೀಡಿ ವಿಪಕ್ಷ (ಬಿಜೆಪಿ&ಜೆಡಿಎಸ್​) ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡದೆ ತಾರತಮ್ಯ ಮಾಡುತ್ತಿರುವ ರಾಜ್ಯ ಕಾಂಗ್ರೆಸ್​ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ಡಿ.2ರಂದು ನಗರಕ್ಕೆ ಆಗಮಿಸುತ್ತಿರುವ ಸಿಎಂ ಸಿದ್ದರಾಮಯ್ಯಗೆ ಕಪು$್ಪ ಬಾವುಟ ಪ್ರದರ್ಶಿಸಿ "ಗೋ ಬ್ಯಾಕ್​ ಸಿದ್ದು' ಹೋರಾಟ ನಡೆಸುವುದಾಗಿ ಜಿಲ್ಲೆಯ ಎನ್​ಡಿಎ ಶಾಸಕರು ಎಚ್ಚರಿಕೆ ಸಂದೇಶ ರವಾನಿಸಿದರು.

ಕಾಂಗ್ರೆಸ್​ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು 1 ವರ್ಷ 8 ತಿಂಗಳಾದರೂ 1 ರೂಪಾಯಿಯ ಅಭಿವೃದ್ಧಿ ಕೆಲಸಗಳಾಗಿಲ್ಲ. ಶಾಸಕರ ಕ್ಷೇತ್ರಗಳಿಗೆ 25 ಕೋಟಿ ರೂಪಾಯಿಗಳ ವಿಶೇಷ ಅನುದಾನ ನೀಡುವುದಾಗಿ ಈ ಹಿಂದೆ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದರು. ಆದರೆ, ಈವರೆಗೆ ನಯಾಪೈಸೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಮಂಗಳವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಗ್ರಾಮಾಂತರ ಬಿಜೆಪಿ ಶಾಸಕ ಬಿ.ಸುರೇಶಗೌಡ ಹರಿಹಾಯ್ದರು.

ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆಗೆ ಡಿ.2ರಂದು ತುಮಕೂರಿಗೆ ಬರುತ್ತಿರುವ ಸಿದ್ದರಾಮಯ್ಯ ವಿರುದ್ಧ ಜಿಲ್ಲೆಯ ಬಿಜೆಪಿ, ಜೆಡಿಎಸ್​ ಶಾಸಕರು ಪ್ರತಿನಿಧಿಸುವ ಕ್ಷೇತ್ರದ ಸಾವಿರಾರು ಜನರು ನಗರಕ್ಕೆ ಬಂದು ಪ್ರತಿಭಟನೆ ನಡೆಸಿ "ಗೋ ಬ್ಯಾಕ್​ ಸಿದ್ದರಾಮಯ್ಯ' ಹೋರಾಟ ಮಾಡಲಿದ್ದೇವೆ. ಸಿಎಂ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯ ಕಾಂಗ್ರೆಸ್​ ಶಾಸಕರಿಗೆ ವಿಶೇಷ ಅನುದಾನವನ್ನು ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದು ನಮ್ಮ ಕ್ಷೇತ್ರಗಳಿಗೆ ಅನುದಾನ

ನೀಡದೆ ಮೋಸವೆಸಗಿದ್ದಾರೆ ಎಂದರು.

ಕಾಂಗ್ರೆಸ್​ ಶಾಸಕರಿಗೆ ನೀಡಿರುವ ಅನುದಾನದಲ್ಲೂ ತಾರತಮ್ಯ ಮಾಡಲಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್​ ಸಂಬಂಧಿಯಾದ ಕುಣಿಗಲ್​ ಶಾಸಕ ಡಾ.ಎಚ್​.ಡಿ. ರಂಗನಾಥ್​ ಕ್ಷೇತ್ರಕ್ಕೆ 43 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದರೆ, ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಪ್ರತಿನಿಧಿಸುವ ಶಿರಾ ಕ್ಷೇತ್ರಕ್ಕೆ 8 ಕೋಟಿ ರೂ. ಮಾತ್ರ ನೀಡಲಾಗಿದೆ. ಸಚಿವ ಡಾ.ಜಿ.ಪರಮೇಶ್ವರ ಕ್ಷೇತ್ರ ಕೊರಟಗೆರೆಗೆ 10 ಕೋಟಿ ರೂ., ಸಚಿವ ಕೆ.ಎನ್​.ರಾಜಣ್ಣರ ಮಧುಗಿರಿ ಕ್ಷೇತ್ರಕ್ಕೆ ವಿವಿಧ ಇಲಾಖೆಗಳ ಅನುದಾನ, ಎಸ್​.ಆರ್​.ಶ್ರೀನಿವಾಸ್​ರ ಗುಬ್ಬಿ ಕ್ಷೇತ್ರಕ್ಕೆ 5 ಕೋಟಿ ರೂಪಾಯಿ, ಕೆ.ಷಡಕ್ಷರಿ ಅವರ ತಿಪಟೂರು ಕ್ಷೇತ್ರಕ್ಕೆ 10 ಕೋಟಿ ರೂಪಾಯಿ, ಹಂಚಿಕೆ ಮಾಡಲಾಗಿದೆ. ಬಿಜೆಪಿ, ಜೆಡಿಎಸ್​ ಶಾಸಕರ ಕ್ಷೇತ್ರಗಳಿಗೆ ನಯಾ ಪೈಸೆ ಅನುದಾನ ನೀಡಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಶಾಸಕರಿಗೆ ಕೊಡಬೇಕಾದ ಅನುದಾನ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ ಮನೆಯಿಂದ ತಂದ ಹಣವಲ್ಲ. ಜನರ ತೆರಿಗೆ ಹಣ. ವಿಪಕ್ಷದ ಶಾಸಕರಿಗೆ ಅನುದಾನ ನೀಡದೆ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಉಪಚುನಾವಣೆಯಲ್ಲಿ 3 ಕ್ಷೇತ್ರ ಗೆದ್ದ ಮಾತ್ರಕ್ಕೆ ಭೂಮಂಡಲವನ್ನೇ ಗೆದ್ದಂತೆ ಬೀಗುತ್ತಿರುವ ಕಾಂಗ್ರೆಸ್​ ನಾಯಕರು ಅಧಿಕಾರ ಶಾಶ್ವತವಲ್ಲ ಎಂಬುದನ್ನು ತಿಳಿಯಬೇಕು ಎಂದು ಸುರೇಶ್​ಗೌಡ ಎಚ್ಚರಿಸಿದರು.

ಜನರ ತೆರಿಗೆ ಹಣವನ್ನು ಎಲ್ಲ ಕ್ಷೇತ್ರಗಳಿಗೆ ಸಮಾನವಾಗಿ ಹಂಚಬೇಕು. ಕೇಂದ್ರ ಸರ್ಕಾರ ತೆರಿಗೆ ಹಣ ಬಿಡುಗಡೆ ಮಾಡಲಿಲ್ಲ ಎಂದು ಪ್ರಧಾನಮಂತ್ರಿ, ಹಣಕಾಸು ಮಂತ್ರಿ ವಿರುದ್ಧ ಪ್ರತಿಭಟನೆ ಮಾಡಿದ ಕಾಂಗ್ರೆಸ್​ ನಾಯಕರು ಯಾವ ನೈತಿಕತೆ ಉಳಿಸಿಕೊಂಡಿದ್ದೀರಾ?. ಬಿಜೆಪಿ, ಜೆಡಿಎಸ್​ ಕ್ಷೇತ್ರದ ಜನ ತೆರಿಗೆ ಕಟ್ಟುವುದಿಲ್ಲವೆ? ಎಂದು ತುರುವೇಕೆರೆ ಜೆಡಿಎಸ್​ ಶಾಸಕ ಎಂ.ಟಿ.ಕೃಷ್ಣಪ್ಪ ಆಕ್ರೋಶಭರಿತರಾಗಿ ಪ್ರಶ್ನಿಸಿದರು.

ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಮಾತನಾಡಿ, ವಿಪಕ್ಷಗಳ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡದೆ ತಾರತಮ್ಯ ಮಾಡಿದ ಕಾಂಗ್ರೆಸ್​ ಸರ್ಕಾರದ ನಡವಳಿಕೆ ಖಂಡನೀಯ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಈ ಬಗ್ಗೆ ಸಿಎಂ ಗಮನಕ್ಕೆ ತಂದು ಬಿಜೆಪಿ&ಜೆಡಿಎಸ್​ ಶಾಸಕರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ

ಮಾಡಬೇಕು ಎಂದು ಒತ್ತಾಯಿಸಿದರು.

ಡಿ.2ರಂದು ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮಕ್ಕೆ ನಗರಕ್ಕೆ ಅಗಮಿಸುವ ಸಿಎಂ ಸಿದ್ದರಾಮಯ್ಯ ಅವರ ಕಾರಿಗೆ ಅಡ್ಡಲಾಗಿ ಮಲಗಿ ಸರ್ಕಾರದ ತಾರತಮ್ಯ ನೀತಿ ವಿರುದ್ಧ ಪ್ರತಿಭಟನೆ ನಡೆಸಲಾಗುವುದು. ನಮ್ಮ ಹೋರಾಟ ಹತ್ತಿಕ್ಕಲು ಪೊಲೀಸ್​ ಬಲ ಬಳಸಿದರೂ ಜಗ್ಗುವುದಿಲ್ಲ. ನಮ್ಮನ್ನು ಜೈಲಿಗೆ ಬೇಕಾದರೂ ಹಾಕಲಿ, ಅವರ ಮನೆಗೆ ಬೇಕಾದರೂ ಕರೆದೊಯ್ಯಲಿ. ನಮಗೆ ಆಗಿರುವ ಅನ್ಯಾಯ ಸರಿಪಡಿಸಬೇಕು | ಬಿ.ಸುರೇಶಗೌಡ ಗ್ರಾಮಾಂತರ ಶಾಸಕಹೇಮಾವತಿ ಎಕ್ಸ್​ಪ್ರೆಸ್​ ಕೆನಾಲ್​ ಯೋಜನೆಯಡಿ ನಮ್ಮ ಜಿಲ್ಲೆಯ ರೈತರಿಗೆ ಅನ್ಯಾಯ ಮಾಡಿ ಹೇಮಾವತಿ ನೀರು ಹರಿಸಿಕೊಳ್ಳಲು ಡಿಸಿಎಂ ಹುನ್ನಾರ ನಡೆಸಿದ್ದಾರೆ. ಈ ಸಂಬಂಧ ಕರೆದಿದ್ದ ಇಂಜಿನಿಯರ್​ಗಳ ಸಭೆಯಲ್ಲಿ ಅಧಿಕಾರಿಗಳು ಶಾಸಕರ ಮಾತು ಕೇಳಬೇಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಹೇಳಿದ್ದಾರೆ. ಇದು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ. ಶಿವಕುಮಾರ್​ ತಮ್ಮ ಹೇಳಿಕೆ ವಾಪಸ್​ ಪಡೆದು ರಾಜ್ಯದ ಶಾಸಕರ ಕ್ಷಮೆ ಯಾಚಿಸಬೇಕು.| ಎಂ.ಟಿ.ಕೃಷ್ಣಪ್ಪ ಜೆಡಿಎಸ್​ ಶಾಸಕ