ಜಿಲ್ಲೆ

ಗೋಸಂರಕ್ಷಣೆಗೆ ಬೇಕು ಸರ್ಕಾರದ ನೆರವು

ಶಂಕರ ಶರ್ಮಾ ಕುಮಟಾ

ಸರ್ಕಾರ ಗೋಹತ್ಯೆ ನಿಷೇಧ ವಿಧೇಯಕ ತರುವ ಮೂಲಕ ಗೋಸಂರಕ್ಷಣೆಯ ಸಂಕಲ್ಪ ತೊಟ್ಟಿದೆ. ಆದರೆ ರಾಜ್ಯದಲ್ಲಿ ಅನೇಕ ಕಡೆ ಇರುವ ಗೋಶಾಲೆಗಳ ಸ್ಥಿತಿ ಶೋಚನೀಯವಾಗಿದೆ.

ಲಾಕ್ ಡೌನ್ ಮತ್ತು ಆರ್ಥಿಕ ಕೊರತೆಯಿಂದ ಹೊಸಾಡದ ಅಮೃತಧಾರಾ ಗೋಶಾಲೆ ತೀರಾ ಸಂಕಟದ ದಿನ ಎದುರಿಸುತ್ತಿದ್ದು ಸಾಲದ ಸುಳಿಗೆ ಸಿಲುಕಿದೆ. ಸರ್ಕಾರ ಗೋಶಾಲೆಗಳ ನಿರ್ವಹಣೆಗೆ ಪ್ರತಿವರ್ಷ ಸಮರ್ಪಕ ಹಣಕಾಸು ನೆರವನ್ನು ಕಾಯ್ದಿರಿಸದಿದ್ದರೆ ಗೋಸಂರಕ್ಷಣೆಯ ಘೊಷಣೆೆ ಅರ್ಥವಿಲ್ಲದಂತಾಗುತ್ತದೆ.

450 ಗೋವುಗಳಿವೆ: ಹೊಸಾಡದ ಅಮೃತಧಾರಾ ಗೋಶಾಲೆಯಲ್ಲಿ ಲಾಕ್​ಡೌನ್ ಸಂದರ್ಭದಲ್ಲಿ ಮೇವು- ಆಹಾರದ ಪೂರೈಕೆಯೂ ನಿಂತು ಪರಿಸ್ಥಿತಿ ತೀವ್ರ ಹದಗೆಟ್ಟಿತ್ತು. ಆದರೆ, ಗೋ ಪ್ರೇಮಿಗಳ ಸಹಕಾರದಿಂದ ತಾತ್ಕಾಲಿಕವಾಗಿ ಸಮಸ್ಯೆ ತಿಳಿಯಾಗಿತ್ತು. ಈಗ ಅಮೃತಧಾರಾ ಗೋಶಾಲೆಯಲ್ಲಿ ಸುಮಾರು 450ರಷ್ಟು ಗೋವುಗಳಿವೆ. ಆದರೆ, ಜಾಗ ಸಾಲುತ್ತಿಲ್ಲ. ಸರ್ಕಾರ ಅಲ್ಪ ಪ್ರಮಾಣದ ಅನುದಾನ ನೀಡುತ್ತಿದೆ. ಪ್ರತಿ ಗೋವಿಗೆ ದಿನಕ್ಕೆ 17.50 ರೂ. ಗಳಂತೆ ಲೆಕ್ಕ ಹಾಕಿ 200 ಗೋವುಗಳಿಗೆ ಮಾತ್ರ ಸಹಾಯ ನೀಡುತ್ತಿತ್ತು. ಇಲ್ಲಿ ಪ್ರತಿ ಗೋವಿಗೆ ದಿನಕ್ಕೆ ಕನಿಷ್ಠ 70ರಿಂದ 100 ರೂ. ಖರ್ಚು ಬರಲಿದೆ. ಗೊಬ್ಬರ ಸಹಿತ ಗವ್ಯೋತ್ಪನ್ನ ಆದಾಯವು ಖರ್ಚಿನ ಅರ್ಧ ಭಾಗಕ್ಕೂ ಸರಿದೂಗುವುದಿಲ್ಲ. ಗೋಶಾಲೆ ನಿರ್ವಹಣೆಗೆ ಗೋಪ್ರೇಮಿ ದಾನಿಗಳ ನೆರವು ಕೂಡ ಸಾಲುತ್ತಿಲ್ಲ. ತಿಂಗಳಿಗೆ 5 ಲಕ್ಷಕ್ಕೂ ಹೆಚ್ಚು ಖರ್ಚಿರುವ ಈ ಗೋಶಾಲೆಗೆ ಸರ್ಕಾರ ಇಡೀ ವರ್ಷಕ್ಕೆ ಕೇವಲ 3 ಲಕ್ಷ ರೂ. ನೆರವು ನೀಡುತ್ತಿದೆ. ಹೀಗಾಗಿ 40 ಲಕ್ಷ ರೂ.ಗಳಿಗೂ ಹೆಚ್ಚು ಸಾಲದ ಶೂಲ ಗೋಶಾಲೆಗೆ ಚುಚ್ಚಿಕೊಂಡಿದೆ.

1500 ಕೋಟಿ ರೂ. ನೀಡಿ: ಅಮೃತಧಾರಾ ಗೋಶಾಲೆಯ ಪರಿಸ್ಥಿತಿ ಕುರಿತು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ ಗೋಶಾಲೆಯ ಅಧ್ಯಕ್ಷ ಮುರಲೀಧರ ಪ್ರಭು, ‘ನಮ್ಮ ಗೋಶಾಲೆಯೂ ಸೇರಿ ರಾಜ್ಯದ ಬಹಳಷ್ಟು ಗೋಶಾಲೆಗಳು ಇತ್ತೀಚಿನ ದಿನಗಳಲ್ಲಿ ತೀವ್ರವಾದ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಪ್ರತಿವರ್ಷ ಕೊಡುತ್ತಿದ್ದ ಅನುದಾನವೂ ಬರುತ್ತಿಲ್ಲ. ಹೀಗಾಗಿ ಹೊಸದಾಗಿ ಗೋವುಗಳನ್ನು ಸೇರಿಸಿಕೊಳ್ಳುವುದಿರಲಿ, ಇರುವ ಗೋವುಗಳನ್ನೇ ನಿರ್ವಹಿಸುವುದು ಕಷ್ಟವಾಗಿದೆ. ಹೀಗಾಗಿ ಗೋಸಂರಕ್ಷಣೆಗೆ ಕಾಯ್ದೆ ಬೆಂಬಲದ ಜೊತೆಗೆ ಪೂರ್ಣ ಪ್ರಮಾಣದ ಬಜೆಟ್ ಅವಕಾಶವೂ ಇರಬೇಕು. ಇಡೀ ರಾಜ್ಯಕ್ಕೆ ಕನಿಷ್ಠ 1500 ಕೋಟಿ ರೂ. ಬಜೆಟ್ ಘೊಷಿಸಿ, ಸಂಬಂಧಪಟ್ಟ ಇಲಾಖೆಯಿಂದ ನಿಗಾವಹಿಸಬೇಕು. ಅಕ್ರಮವಾಗಿ ಕಸಾಯಿಖಾನೆ ಸೇರುವ ಗೋವುಗಳಿಗೆ ಸರಿಯಾದ ಆಶ್ರಯ ನೀಡಲು ಸಾಧ್ಯವಿದೆ. ಯಾವ ಗೋಶಾಲೆಯಲ್ಲೂ ಸಮಸ್ಯೆ ಇರುವುದಿಲ್ಲ. ಗೋಶಾಲೆಗಳನ್ನು ಸ್ವಾವಲಂಬಿಗೊಳಿಸುವತ್ತ ಸರ್ಕಾರ ಅಧ್ಯಯನ ನಡೆಸಿ ಉತ್ತಮ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು. ಸಂವಿಧಾನಬದ್ಧ ಅವಕಾಶವಿದೆ. ಗೋಸಂರಕ್ಷಣೆಗೆ ಬದ್ಧತೆ ಬೇಕು’ ಎಂದು ತಿಳಿಸಿದ್ದಾರೆ.

ಅಮೃತಧಾರಾ ಗೋಶಾಲೆಯ ಸಮಸ್ಯೆ ಗೊತ್ತಾಗಿದೆ. ಶೀಘ್ರವೇ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಗೋಶಾಲೆಗೆ ಪೂರ್ಣ ಅನುದಾನ ಬಿಡುಗಡೆಗೆ ಕೋರುತ್ತೇನೆ. ಸದ್ಯ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಜಾರಿಗೆ ತಂದು ಸರ್ಕಾರ ಮಾತು ಪಾಲಿಸಿದೆ. ಭವಿಷ್ಯದಲ್ಲಿ ಗೋಶಾಲೆಗಳ ಬಗ್ಗೂ ಉತ್ತಮ ನಿರ್ಧಾರ ತೆಗೆದುಕೊಳ್ಳಬಹುದು. | ದಿನಕರ ಶೆಟ್ಟಿ ಕುಮಟಾ ಶಾಸಕ

ಕಾಯ್ದೆಯೊಂದೇ ಸಾಲದು: ರಾಜ್ಯದಲ್ಲಿ 2012ರಲ್ಲಿ ಅಂದಿನ ಸರ್ಕಾರ ಜಾರಿಗೆ ತಂದಿದ್ದ ಗೋಸೇವಾ ಆಯೋಗವನ್ನು 2015ರಲ್ಲಿ ಆಡಳಿತದಲ್ಲಿದ್ದ ಸರ್ಕಾರ ರದ್ದು ಪಡಿಸಿತ್ತು. ಸದ್ಯ ಪ್ರಾಣಿ ಕಲ್ಯಾಣ ಮಂಡಳಿಯೇ ಗೋವಿಗೆ ಸಂಬಂಧಿಸಿದ ವಿಚಾರಗಳನ್ನೂ ನಿಭಾಯಿಸುತ್ತಿದೆ. ಆದರೆ, ಅದು ಸಮರ್ಪಕವಾಗಿಲ್ಲ. ಗೋಹತ್ಯೆ ಕುರಿತ ಕಾಯ್ದೆಯಷ್ಟೇ ಸಾಲದು, ಗೋಶಾಲೆಗಳಿಗೆ ನಿರ್ವಹಣೆಯ ಶೇ. 75ರಷ್ಟು ಅನುದಾನವನ್ನು ಸರ್ಕಾರವೇ ಭರಿಸಬೇಕು. ಕನಿಷ್ಠ ಸರ್ಕಾರಿ ತಸ್ತೀಕು ಪಡೆಯುವ ದೇವಾಲಯಗಳಲ್ಲಿಯಾದರೂ ಚಿಕ್ಕ ಚಿಕ್ಕ ಗೋಶಾಲೆಗಳನ್ನು ಆರಂಭಿಸಿ, ಸ್ವಂತದ ಆದಾಯದಲ್ಲಿ ನಿರ್ವಹಿಸುವುದು ಸಾಧ್ಯವಾದರೆ ಭಾರತೀಯ ಗೋಸಂತತಿ ಉಳಿಯುತ್ತದೆ ಎಂಬುದು ಗೋಪ್ರೇಮಿಗಳ ಅಭಿಪ್ರಾಯವಾಗಿದೆ.

ಅಕ್ರಮ ಹಿಡಿದರೆ ಸಾಕುವುದು ಕಷ್ಟ: ಅಮೃತಧಾರಾ ಗೋಶಾಲೆಯಲ್ಲಿ ಅಪಘಾತಕ್ಕೀಡಾದ, ಅಶಕ್ತ, ನಿರುಪಯುಕ್ತ ಗೋವುಗಳೂ ಸಾಕಷ್ಟಿವೆ. ಮುಖ್ಯವಾಗಿ ಅಕ್ರಮ ಗೋಸಾಗಾಟದ ವೇಳೆ ಪೊಲೀಸರು ಹಿಡಿದು ನ್ಯಾಯಾಲಯದ ಆದೇಶದಂತೆ ನೀಡಿರುವ ಸುಮಾರು 55 ಕೋಣಗಳು, ಕಾರವಾರ ನಗರಸಭೆಯವರು ಕಳಿಸಿಕೊಟ್ಟ 60 ಗೋವುಗಳಿಗೆ ಇಲ್ಲಿ ನೆಲೆಕೊಟ್ಟು ವರ್ಷವಾಗುತ್ತ ಬಂತು. ಪೊಲೀಸರಿಗೂ ಅಕ್ರಮವಾಗಿ ಸಾಗಿಸುವ ಗೋವು ಹಿಡಿದರೆ ಸಾಕುವುದು ಕಷ್ಟ. ಎತ್ತು, ಕೋಣ, ಹೈಬ್ರಿಡ್ ರಾಸುಗಳಾದರೆ ಇನ್ನಷ್ಟು ಕಷ್ಟ. ಹೀಗಾಗಿ ಗೋಶಾಲೆಯ ಆಡಳಿತ ಸಮಿತಿ ಅಭಿಯಾನ ನಡೆಸುವ ಚಿಂತನೆ ನಡೆಸಿದ್ದು, ಇಂಥ ಪರಿಸ್ಥಿತಿಯಲ್ಲಿ ಗೋಪ್ರೇಮಿ ಸಂಘಟನೆಗಳು ಗೋಶಾಲೆಯ ಕಷ್ಟ ಅರ್ಥಮಾಡಿಕೊಂಡು ನೆರವಾಗಬೇಕಿದೆ.</