ಜಿಲ್ಲೆ

ಗೋವಿನಜೋಳ ತೆನೆಗೆ ಬೆಂಕಿ

ಮುಂಡರಗಿ: ರಾಶಿ ಮಾಡಲು ಒಟ್ಟಿದ್ದ ಗೋವಿನಜೋಳ ತೆನೆಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಘಟನೆ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ. ಕೊಟ್ರಪ್ಪ ದೇಸಾಯಿ ಮತ್ತು ಅವರ ಕುಟುಂಬದವರಿಗೆ ಸಂಬಂಧಿಸಿದ 45 ಎಕರೆ ಜಮೀನಿನಲ್ಲಿ ಬೆಳೆಯಲಾಗಿದ್ದ ಗೋವಿನಜೋಳ ಸುಟ್ಟಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ರೈತ ಕೊಟ್ರಪ್ಪ ದೇಸಾಯಿ, ಅಗ್ನಿ ಅನಾಹುತದಿಂದ ತೆನೆಗಳೊಂದಿಗೆ ತಾಡಪತ್ರಿಗಳೂ ಸುಟ್ಟಿವೆ. ಲಕ್ಷಾಂತರ ರೂ. ಖರ್ಚು ಮಾಡಿ ಗೋವಿನಜೋಳ ಬೆಳೆಯಲಾಗಿತ್ತು. ಕಷ್ಟಪಟ್ಟು ಬೆಳೆದ ಬೆಳೆ ಸುಟ್ಟು ನಾಶವಾಗಿರುವುದು ತುಂಬಾ ನೋವು ತರಿಸಿದೆ ಎಂದರು.

ಸ್ಥಳಕ್ಕೆ ಕಂದಾಯ ನಿರೀಕ್ಷಕ ಎಚ್.ಎಂ. ಪಾಟೀಲ, ಗ್ರಾಮ ಲೆಕ್ಕಾಧಿಕಾರಿ ಜಗದೀಶ ಟಿ. ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಸಂಪೂರ್ಣ ವರದಿಯನ್ನು ಮೇಲಧಿಕಾರಿಗೆ ಸಲ್ಲಿಸಲಾಗಿದೆ ಎಂದು ಕಂದಾಯ ನಿರೀಕ್ಷಕರು ತಿಳಿಸಿದರು.