ಜಿಲ್ಲೆ

ಗೋವಾದಿಂದ 396 ಜನ ರಾಜ್ಯಕ್ಕೆ

ಕಾರವಾರ: ಕರಾವಳಿ ಹಾಗೂ ದಕ್ಷಿಣ ಕರ್ನಾಟಕ ಭಾಗಕ್ಕೆ ತೆರಳುವ ಗೋವಾ ರಾಜ್ಯದಲ್ಲಿ ಸಿಲುಕಿದ್ದ 396 ಜನರನ್ನು ಇಲ್ಲಿನ ಮಾಜಾಳಿ ತನಿಖಾ ಠಾಣೆಯ ಮೂಲಕ ಎರಡು ದಿನದಲ್ಲಿ ಬರಮಾಡಿಕೊಳ್ಳಲಾಗಿದೆ.

ಜಿಲ್ಲೆಯ ವಿವಿಧ ತಾಲೂಕುಗಳ 244 ಹಾಗೂ ಹೊರ ಜಿಲ್ಲೆಗಳ 152 ಜನರ ಆರೋಗ್ಯ ತಪಾಸಣೆ ನಡೆಸಿ, ಕ್ವಾರಂಟೈನ್ ಸೀಲ್ ಹಾಕಿ ಎನ್​ಡಬ್ಲ್ಯುಕೆಆರ್​ಟಿಸಿ ಬಸ್ ಮೂಲಕ ಅವರವರ ಊರಿಗೆ ಕಳಿಸಲಾಗಿದೆ.

ಸೇವಾ ಸಿಂಧು ವೆಬ್​ಸೈಟ್​ನಲ್ಲಿ ನೋಂದಣಿ ಮಾಡಿ ಎರಡೂ ರಾಜ್ಯಗಳ ಆಡಳಿತಗಳಿಂದ ಅನುಮೋದನೆ ಪಡೆಯುವುದು ಅವಶ್ಯವಾಗಿದ್ದು, ಹಾಗೆ ಮಾಡದ ಕಾರ್ವಿುಕರಿದ್ದರೂ ಇಲ್ಲಿ ಬಂದ ನಂತರ ವೆಬ್​ಸೈಟ್​ನಲ್ಲಿ ಜಿಲ್ಲಾಡಳಿತವೇ ನೋಂದಣಿ ಮಾಡಿ, ಕಾರ್ವಿುಕರನ್ನು ಕಳಿಸಿಕೊಡುವ ವ್ಯವಸ್ಥೆ ಮಾಡಿದೆ. ಗಡಿಯ ತನಿಖಾ ಠಾಣೆಯಲ್ಲಿ ಪೆಂಡಾಲ್ ಹಾಕಿ ಅಲ್ಲಿಯೇ ಊಟ, ನೀರಿನ ವ್ಯವಸ್ಥೆ ಮಾಡಲಾಗಿದೆ. ಎಸಿ ಪ್ರಿಯಾಂಗಾ ಎಂ., ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಪುರುಷೋತ್ತಮ, ತಹಸೀಲ್ದಾರ್ ರಾಮಚಂದ್ರ ಕಟ್ಟಿ, ಚಿತ್ತಾಕುಲಾ ಪಿಎಸ್​ಐ ಪ್ರವೀಣ ಕುಮಾರ್ ಇದನ್ನು ವ್ಯವಸ್ಥಿತವಾಗಿ ನಿರ್ವಹಿಸಿದ್ದಾರೆ.

ದಕ್ಷಿಣ ಕರ್ನಾಟಕ ಹಾಗೂ ಕರಾವಳಿ ಭಾಗಕ್ಕೆ ತೆರಳುವವರನ್ನು ಕಾರವಾರದ ಮೂಲಕ ಉತ್ತರ ಕರ್ನಾಟಕ ಭಾಗಕ್ಕೆ ತೆರಳುವವರನ್ನು ಬೆಳಗಾವಿ ಮೂಲಕ ತೆರಳಲು ವ್ಯವಸ್ಥೆ ಮಾಡಲಾಗಿದೆ.

ಗೋವಾ ಕದಂಬ ಸಾರಿಗೆ ಸಂಸ್ಥೆಯ ಬಸ್​ಗಳ ಮೂಲಕ ಪಣಜಿಯಲ್ಲಿದ್ದ ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ, ಕೊಪ್ಪಳ ಮುಂತಾದ ಊರುಗಳ ಕಾರ್ವಿುಕರನ್ನು ಅನಮೋಡ ತನಿಖಾ ಠಾಣೆಗೆ ಕಳಿಸಲಾಗಿತ್ತು. ಆದರೆ, ಸೇವಾ ಸಿಂಧುವಿನಲ್ಲಿ ನೋಂದಣಿ ಮಾಡದೇ ಒಮ್ಮೆಲೇ ಇಷ್ಟೊಂದು ಕಾರ್ವಿುಕರನ್ನು ಬಿಡಲು ಸಾಧ್ಯವಿಲ್ಲ ಎಂದು ಬಂದ ಬಸ್​ನಲ್ಲೇ ಅವರನ್ನು ವಾಪಸ್ ಕಳಿಸಲಾಗಿದೆ. ಇದರಿಂದ ಊರಿಗೆ ಹೋಗುವ ಸಂಭ್ರಮದಲ್ಲಿದ್ದ ಕಾರ್ವಿುಕರು ಬೇಸರಗೊಂಡಿದ್ದಾರೆ.

ಶಾಸಕಿ ರೂಪಾಲಿ ಭೇಟಿ: ಶಾಸಕಿ ರೂಪಾಲಿ ನಾಯ್ಕ ಗೋವಾ ಗಡಿಗೆ ಭೇಟಿ ನೀಡಿ ರಾಜ್ಯಕ್ಕೆ ಮರಳಿದವರ ಜತೆ ಮಾತುಕತೆ ನಡೆಸಿದರು. ಅಧಿಕಾರಿಗಳಿಗೆ ಸೂಚನೆ ನೀಡಿದರು. ‘ಎಲ್ಲ ವ್ಯವಸ್ಥೆಗಳೂ ಸುಧಾರಣೆಯಾಗುತ್ತವೆ. ಆತಂಕ ಬೇಡ. ಅಧಿಕಾರಿಗಳು ಹೇಳಿದ ಸೂಚನೆ ಪಾಲಿಸಿ, ಮನೆಯಿಂದ ಹೊರ ಬರಬೇಡಿ. ಕೆಲದಿನ ಮನೆಯವರೊಟ್ಟಿಗೆ ಖುಷಿಯಿಂದ ಇರಿ ಎಂದು ಗೋವಾದಿಂದ ಮರಳಿದವರಿಗೆ ಕಿವಿಮಾತು ಹೇಳಿದರು.

ಗೋವಾ ಉದ್ಯೋಗಿಗಳು ಕೊಂಚ ನಿರಾಳ: ಗೋವಾದ ಕೆಲವು ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರವಾರದ ಉದ್ಯೋಗಿಗಳು ಕೊಂಚ ನಿರಾಳರಾಗಿದ್ದಾರೆ. ಗೋವಾದ ಕೈಗಾರಿಕೋದ್ಯಮಿಗಳ ಸಂಸ್ಥೆಯ ಸಹಕಾರದಲ್ಲಿ ಅಲ್ಲಿನ ಸರ್ಕಾರ ಕಾರವಾರದ ಕಾರ್ವಿುಕರನ್ನು ಕರೆಸಿಕೊಳ್ಳಲು ಬದಲಾದ ಕಾರ್ಯಸೂಚಿಯನ್ನು ಸಿದ್ಧ ಮಾಡಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ತಿಳಿಸಿದ್ದಾರೆ.

ಗೋವಾದ ವಿವಿಧ ಕಂಪನಿಗಳಲ್ಲಿರುವ ಸಾವಿರಾರು ಉದ್ಯೋಗಿಗಳಿಗೆ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಿದರೂ ಅಲ್ಲಿಗೆ ತೆರಳಲು ಗೋವಾ ಸರ್ಕಾರ ಅನುಮತಿ ನೀಡಿರಲಿಲ್ಲ. ಅಲ್ಲದೆ, ತೆರಳಿದರೂ 14 ದಿನ ಕ್ವಾರಂಟೈನ್​ನಲ್ಲಿರಬೇಕು. ಪ್ರತಿ ದಿನ 2500 ರೂ.ಕ್ವಾರಂಟೈನ್ ಶುಲ್ಕ ಪಾವತಿಸಬೇಕು.ಸ್ವಂತ ಖರ್ಚಿನಲ್ಲಿ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಗೋವಾ ಸರ್ಕಾರ ಷರತ್ತು ವಿಧಿಸಿತ್ತು. ಇದರಿಂದ ಉದ್ಯೋಗಿಗಳು ಆತಂಕಿತರಾಗಿದ್ದರು. ಶಾಸಕಿ ರೂಪಾಲಿ ನಾಯ್ಕ ಹಾಗೂ ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ್ ಅವರಿಗೆ ಮನವಿ ಮಾಡಿದ್ದರು. ಈ ಕುರಿತು ‘ವಿಜಯವಾಣಿ’ ಮೇ 6 ರಂದು ವರದಿ ಪ್ರಕಟಿಸಿತ್ತು.

ಶಾಸಕಿ ರೂಪಾಲಿ ನಾಯ್ಕ ಕಾರವಾರದ ಉದ್ಯೋಗಿಗಳ ಸಮಸ್ಯೆ ಬಗೆಹರಿಸುವಂತೆ ಗೋವಾ ಸಿಎಂ ಪ್ರಮೋದ ಸಾವಂತ ಅವರಿಗೆ ಕರೆ ಮಾಡಿ ಮನವಿ ಮಾಡಿದ್ದರು. ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಈ ಈ ಸಮಸ್ಯೆ ಬಗೆಹರಿಸಲು ಜಿಪಂ ಸಿಇಒ ಎಂ. ರೋಷನ್ ಅವರಿಗೆ ಸೂಚಿಸಿದ್ದರು. ಎಂ. ರೋಷನ್ ಅವರು ಗೋವಾ ಅಧಿಕಾರಿಗಳ ಜತೆ ರ್ಚಚಿಸಿ, ಕ್ರಮ ವಹಿಸಿದ್ದಾರೆ.

ಗೋವಾ ಕಂಪನಿಗಳಿಂದ ಕಾರವಾರ ಮೂಲದ ಉದ್ಯೋಗಿಗಳ ಪಟ್ಟಿ ಬಂದಲ್ಲಿ ಕಾರವಾರ ಜಿಲ್ಲಾಧಿಕಾರಿಗಳು ಇಲ್ಲಿಂದ ತೆರಳಲು ಅವರೆಲ್ಲರಿಗೂ ಅನುಮತಿ ನೀಡಲಿದ್ದಾರೆ. ಗೋವಾಕ್ಕೆ ತೆರಳಿದ ನಂತರ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ. ಒಂದೆರಡು ದಿನದಲ್ಲಿ ವರದಿ ನೆಗೆಟಿವ್ ಬಂದರಲ್ಲಿ ನೇರವಾಗಿ ಉದ್ಯೋಗಕ್ಕೆ ತೆರಳಬಹುದಾಗಿದೆ. ಕ್ವಾರಂಟೈನ್ ಶುಲ್ಕದ ಹೊರೆ ಇರುವುದಿಲ್ಲ ಎಂದು ಜಿಪಂ ಸಿಇಒ ಎಂ.ರೋಷನ್ ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದಾರೆ.