ಜಿಲ್ಲೆ

ಗೋವಾದ ಎರಡು ಬೋಟ್ ವಶ

ಕಾರವಾರ : ಅಕ್ರಮವಾಗಿ ಬೆಳಕು ಮೀನುಗಾರಿಕೆ ನಡೆಸುತ್ತಿದ್ದ ಎರಡು ಗೋವಾ ಬೋಟ್​ಗಳನ್ನು ಶುಕ್ರವಾರ ಕೋಸ್ಟ್​ಗಾರ್ಡ್ ಅಧಿಕಾರಿಗಳು ಹಿಡಿದು ಕಾರವಾರ ಮೀನುಗಾರಿಕೆ ಇಲಾಖೆ ವಶಕ್ಕೆ ಒಪ್ಪಿಸಿದ್ದಾರೆ.

ಕಾರವಾರ ತೀರದಿಂದ 12 ನಾಟಿಕಲ್ ಮೈಲ್ ಹೊರಗೆ ಮೀನುಗಾರಿಕೆ ನಡೆಸುತ್ತಿದ್ದರು ಎನ್ನಲಾಗಿದೆ. ಕೋಸ್ಟ್​ಗಾರ್ಡ್ ಬೋಟ್​ಗಳು ಗಸ್ತು ತಿರುಗುವ ಸಂದರ್ಭದಲ್ಲಿ ಗುರುವಾರ ರಾತ್ರಿ ಇದು ಗಮನಕ್ಕೆ ಬಂದಿದ್ದು, ಬೋಟ್​ಗಳನ್ನು ಎಳೆತರಲಾಗಿದೆ.

ಗೋವಾ ಬೇತುಲ್​ನ ಉಮೇಶ ಲಕ್ಷ್ಮಣ ಸಾಳಗಾಂವಕರ್ ಅವರಿಗೆ ಸೇರಿದ ಸೀಹಾಕ್ ಹಾಗೂ ಡ್ರಾಗನ್ ಸೀ ಹೆಸರಿನ ಬೋಟ್​ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಮೂವರು ಹಾಗೂ ಒಡಿಶಾದ 26 ಸೇರಿ ಒಟ್ಟು 29 ಮೀನುಗಾರರಿದ್ದರು.

ಒಂದು ಬೋಟ್ ಯಾವುದೇ ದಾಖಲೆ ಹೊಂದಿರಲಿಲ್ಲ. 29ರಲ್ಲಿ 12 ಜನರ ಬಳಿ ಮಾತ್ರ ಗುರುತಿನ ಚೀಟಿ ಇತ್ತು ಎನ್ನಲಾಗಿದೆ.

ಬೋಟ್​ನಲ್ಲಿದ್ದ ಲೈಟ್ ಫಿಶಿಂಗ್​ಗೆ ಬಳಸುತ್ತಿದ್ದ 20 ಕೆವಿ ಜನರೇಟರ್, ಇರ್ನÌರ್, 5ಕ್ಕೂ ಹೆಚ್ಚು ಹೆಲೋಜಿನ್ ಲೈಟ್ ಸೇರಿ ಇತರ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.

ಗೋವಾ ಮೀನುಗಾರಿಕೆ ಇಲಾಖೆಗೆ ಮಾಹಿತಿ ನೀಡಲಾಗಿದೆ. ಬೋಟ್​ಗೆ ನಿಯಮದಂತೆ ದಂಡ ವಿಧಿಸಲಾಗುವುದು. 29 ಮೀನುಗಾರರ ಆರೋಗ್ಯ ತಪಾಸಣೆ ನಡೆಸಲಾಗಿದೆ. ಆದರೆ, ಅವರನ್ನು ಬೋಟ್​ನಿಂದ ಕೆಳಗಿಳಿಯಲು ಅವಕಾಶ ನೀಡಿಲ್ಲ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಮುಂದಿನ ಕ್ರಮ ವಹಿಸಲಾಗುವುದು ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಪಿ.ನಾಗರಾಜ್ ತಿಳಿಸಿದ್ದಾರೆ.

ಸಮುದ್ರದಲ್ಲಿ ಬೆಳಕು ಮೀನುಗಾರಿಕೆ ಸಂಪೂರ್ಣ ನಿಷೇಧವಿದೆ. ಕರ್ನಾಟಕದಲ್ಲಿ ಇದುವರೆಗೂ ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶ ನೀಡಿಲ್ಲ. ಇಂಥ ಸಂದರ್ಭದಲ್ಲಿ ಗೋವಾ ಬೋಟ್​ಗಳು ಎಲ್ಲೆಡೆ ಲೈಟ್ ಫಿಶಿಂಗ್ ನಡೆಸುತ್ತಿರುವ ಆರೋಪ ಕೇಳಿ ಬಂದಿತ್ತು. ಬಂದ್ ಮಾಡುವಂತೆ ಸ್ಥಳೀಯ ಮೀನುಗಾರರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು.