ಜಿಲ್ಲೆ

ಗೋವಾ ಮಾದರಿ ಟೂರಿಸಂ ಬೇಡ

ಕಾರವಾರ : ಜಿಲ್ಲೆಯಲ್ಲಿ ಸುಸ್ಥಿರ, ಗ್ರಾಮೀಣ ಹಾಗೂ ಕೃಷಿ ಆಧಾರಿತ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಅಭಿಪ್ರಾಯಪಟ್ಟರು.

ಪ್ರವಾಸೋದ್ಯಮ ಇಲಾಖೆಯಿಂದ ಸದಾಶಿವಗಡ ಕೋಟೆಯ ಜಂಗಲ್ ಲಾಜಸ್​ನಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಗೋವಾ ಅಥವಾ ಕೇರಳ ಮಾದರಿ ಅನುಸರಿಸುವುದರಿಂದ ಪ್ರಯೋಜನವಿಲ್ಲ. ಎಲ್ಲೆಡೆ ಸಿಮೆಂಟ್ ರೋಡ್ ಮಾಡುವ ಬದಲು ಉತ್ತರ ಕನ್ನಡದ ಸತ್ವವನ್ನು ತೋರಿಸುವ ಮಾದರಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾಗಬೇಕಿದೆ.

ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿರುವ ಜಿಲ್ಲೆಗಳ ಪೈಕಿ ಉತ್ತರ ಕನ್ನಡವೂ ಒಂದು ಎಂದು ಕರ್ನಾಟಕ ಸರ್ಕಾರ ಪ್ರಕಟಿಸಿದ ನೂತನ ಪ್ರವಾಸೋದ್ಯಮ ನೀತಿಯಲ್ಲಿ ತಿಳಿಸಲಾಗಿದೆ.

ಹಣ ಹೂಡಿಕೆಗೆ ಬರುವ ಉದ್ಯಮಗಳಿಗೆ ಏಕಗವಾಕ್ಷಿ ಅನುಮೋದನೆ ವ್ಯವಸ್ಥೆ ಮಾಡಲಾಗುವುದು. ಪ್ರವಾಸೋದ್ಯಮಗಳು ಇಲ್ಲಿ ಹಣ ಹೂಡಲು ಮುಂದೆ ಬರಬೇಕು ಎಂದರು.

ಕರಾವಳಿ ಇನ್ಸ್​ಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್​ವೆುಂಟ್ ಮುಖ್ಯಸ್ಥ ಸತೀಶ ಮಾತನಾಡಿ, ಕರೊನಾ ಪರಿಸ್ಥಿತಿ ಸ್ಥಳೀಯ ಪ್ರವಾಸೋದ್ಯಮ ಅಭಿವೃದ್ಧಿಗೆ ಹೊಸ ಅವಕಾಶ ತೆರೆದಿಟ್ಟಿದೆ ಎಂದರು.

ಹೋಂ ಸ್ಟೇ ಮಾಲೀಕರ ಸಂಘದ ಉಪಾಧ್ಯಕ್ಷ ರವಿ ಪಂಡಿತ ಮಾತನಾಡಿ, ಹೋಂ ಸ್ಟೇಗಳಿಗೆ ಇರುವ ಸಿಆರ್​ರೆಡ್ ಕಾಯ್ದೆಯ ತೊಂದರೆಯನ್ನು ಜಿಲ್ಲಾಡಳಿತ ನಿವಾರಿಸಬೇಕು. ಗೋವಾ ಮಾದರಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಅವಕಾಶ ನೀಡಬೇಕು ಎಂದರು. ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಪುರುಷೋತ್ತಮ ಸ್ವಾಗತಿಸಿದರು.