ಧಾರವಾಡ: ವನ್ಯಜೀವಿ ಸಪ್ತಾಹ ಕೇವಲ ಅರಣ್ಯ ಇಲಾಖೆ ಸಿಬ್ಬಂದಿಗೆ ಸೀಮಿತವಾಗಿಲ್ಲ. ಇಲಾಖೆ ಜತೆಗೆ ಜನರನ್ನೂ ಸೇರಿಸಿದರೆ ಸಪ್ತಾಹವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಬಹುದು ಎಂಬುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸಾಬೀತು ಮಾಡಿದ್ದಾರೆ.
ವನ್ಯಜೀವಿ ಸಪ್ತಾಹ ಹೆಸರಿನಲ್ಲಿ ಒಂದು ವಾರ ಕಾಲ ನಗರದ ವಿವಿಧೆಡೆ ಕಾರ್ಯಕ್ರಮ ನಡೆಸಿ ಇಲಾಖೆ ಅನುದಾನ ಅಪವ್ಯಯ ಮಾಡದೆ, ಇಲಾಖೆಯ ಕಾಂಪೌಂಡ್ ಗೋಡೆ ಮೇಲೆ ವನ್ಯ ಜೀವಿಗಳ ಚಿತ್ರಗಳನ್ನು ಬಿಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಗೋಡೆಗಳ ಮೇಲೆ ಚಿತ್ರ ಬಿಡಿಸಲು ಆಸಕ್ತಿ ಹೊಂದಿರುವ ಕಲಾವಿದರಿಗೆ ಇಲಾಖೆ ವತಿಯಿಂದ ಆಹ್ವಾನ ನೀಡಲಾಗಿತ್ತು. ‘ಭವಿಷ್ಯಕ್ಕಾಗಿ ರಣಹದ್ದು’ ಎಂಬ ಘೊಷ ವಾಕ್ಯದೊಂದಿಗೆ ಅ. 2ರಂದು ಪ್ರಾರಂಭವಾಗಿರುವ ಈ ಸಪ್ತಾಹದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್ ಕ್ಷೀರಸಾಗರ ಸೇರಿ ಅಂದಾಜು 70 ಕಲಾವಿದರು ಭಾಗವಹಿಸಿ ಚಿತ್ರಗಳನ್ನು ಬಿಡಿಸಿದ್ದಾರೆ.
ಆನೆ, ಜಿಂಕೆ, ಸಿಂಹ, ಕಾಡುಪಾಪ, ವಿವಿಧ ಬಗೆಯ ಪಕ್ಷಿಗಳು ಸೇರಿ ಅನೇಕ ಕಾಡು ಪ್ರಾಣಿಗಳ ಚಿತ್ರಗಳನ್ನು ಬಿಡಿಸಿದ್ದಾರೆ. ಕೇವಲ ಚಿತ್ರಗಳನ್ನು ಬಿಡಿಸದೆ, ಕಾಡಿನಲ್ಲಿ ವಾಸವಾಗಿರುವ ಪ್ರಾಣಿಗಳನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂಬ ಸಂದೇಶವನ್ನೂ ಸಾರಿದ್ದಾರೆ. ಜತೆಗೆ ಅರಣ್ಯ ಹಾಗೂ ಸದ್ಯದ ಅರಣ್ಯ ಪ್ರದೇಶಗಳ ಸ್ಥಿತಿ ಏನಿದೆ ಎಂಬುದನ್ನು ಜನರಿಗೆ ತಿಳಿಸುವ ಕೆಲಸ ಮಾಡಿದ್ದಾರೆ.
ಹ್ಯುಮೇನ್ ಸೊಸೈಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆಯ ಸಹಯೋಗದಲ್ಲಿ ಇಲಾಖೆ ಹಮ್ಮಿಕೊಂಡಿರುವ ಕಾರ್ಯಕ್ರಮ ಅ. 8ರವರೆಗೆ ನಡೆಯಲಿದ್ದು, ಚಿತ್ರಕಲೆ, ಘೊಷ ವಾಕ್ಯ, ರಸಪ್ರಶ್ನೆ ಸ್ಪರ್ಧೆ, ವೆಬಿನಾರ್ಗಳನ್ನು ಸಹ ನಡೆಸಲಾಗಿದೆ.