ಜಿಲ್ಲೆ

ಗೋಕರ್ಣದಿಂದ ಸ್ವದೇಶಕ್ಕೆ ರಷ್ಯನ್ನರ ಪ್ರಯಾಣ

ಗೋಕರ್ಣ: ಗೋಕರ್ಣದ ವಿವಿಧ ಕಡೆಗಳಲ್ಲಿ ವಾಸವಾಗಿರುವ ರಷ್ಯನ್ ಪ್ರವಾಸಿಗರಿಗೆ ರಷ್ಯಾ ಸರ್ಕಾರ ವಿಶೇಷ ವಿಮಾನದ ವ್ಯವಸ್ಥೆ ಮಾಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯ ಸರ್ಕಾರದ ವಿಶೇಷ ಬಸ್​ನಲ್ಲಿ ಗೋವಾಕ್ಕೆ ತೆರಳಿದರು.

ಸದ್ಯ ಗೋಕರ್ಣದಲ್ಲಿ 180 ರಷ್ಯನ್ನರು ವಾಸವಾಗಿದ್ದು, ಈ ಪೈಕಿ ಮಾಸ್ಕೋ ಮಹಾನಗರಕ್ಕೆ ಸೇರಿದ 24 ರಷ್ಯನ್ನರಿಗೆ ಮಾತ್ರ ಪ್ರಯಾಣಕ್ಕೆ ವ್ಯವಸ್ಥೆ ಮಾಡಲಾಯಿತು.

ಇಲ್ಲಿರುವುದೇ ಒಳಿತು: ಏಪ್ರಿಲ್ 9ರಂದು ವಿಶೇಷ ಫ್ಲೈಟ್ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅದು ರದ್ದಾದ ಕಾರಣ ರಷ್ಯಾದ ವಿವಿಧ ಕಡೆ ಹೋಗ ಬಯಸುವವರಿಗೆ ನಿರಾಸೆಯಾಗಿತ್ತು. ಈ ನಡುವೆ ಹೆಚ್ಚಿನ ರಷ್ಯನ್​ರು ಕರೊನಾ ನಿರ್ಬಂಧದ ಈ ದಿನಗಳಲ್ಲಿ ಸ್ವದೇಶಕ್ಕೆ ಹೋಗುವುದಕ್ಕಿಂತ ಇಲ್ಲಿರುವುದೇ ವಾಸಿ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಹೀಗಾಗಿ ಇಂಥವರು ಇನ್ನೂ ಕೆಲ ಸಮಯ ಗೋಕರ್ಣದಲ್ಲಿಯೇ ಉಳಿಯಲಿದ್ದಾರೆ. ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಮೂಲಕ ಇವರಿಗೆ ವ್ಯವಸ್ಥೆ ಮಾಡಿಕೊಡಲಾಗಿದ್ದು, ಇಲಾಖೆಯ ಕೃಷ್ಣ ನಾಯ್ಕ ಸ್ಥಳದಲ್ಲಿದ್ದು, ವ್ಯವಸ್ಥೆ ನೋಡಿಕೊಂಡರು. ಸಿಪಿಐ ಪರಮೇಶ್ವರ ಗುನಗ, ಪಿಎಸ್​ಐ ನವೀನ ನಾಯ್ಕ ಮತ್ತು ಸಿಬ್ಬಂದಿ ಇದ್ದರು.