ಗೋಕರ್ಣ: ಮಹಾಶಿವರಾತ್ರಿ ಮಹೋತ್ಸವದ ಪ್ರಮುಖ ಆಗಮೋಕ್ತ ಕಾರ್ಯಕ್ರಮವಾದ ಮಹಾಬಲೇಶ್ವರ ಮಹಾರಥೋತ್ಸವ ಭಾನುವಾರ ಭಕ್ತರ ಜಯಘೊಷದೊಂದಿಗೆ ಅದ್ದೂರಿಯಾಗಿ ಜರುಗಿತು.
ಮಹಾಬಲೇಶ್ವರ ಮಂದಿರಲ್ಲಿ ಮುಖ್ಯ ಅರ್ಚಕ ವೇ. ಅಮೃತೇಶ ಹಿರೇ ನೇತೃತ್ವದಲ್ಲಿ ಅಪರಾಹ್ನದಿಂದ ಮಹಾರಥೋತ್ಸವಕ್ಕೆ ಸಂಬಂಧಿಸಿದ ವಿಧಿ- ವಿಧಾನಗಳು ಪ್ರಾರಂಭವಾದವು. ತರುವಾಯ ರಥಬೀದಿಗೆ ಆಗಮಿಸಿದ ಮಹಾಬಲೇಶ್ವರ ಉತ್ಸವ ಮಹಾರಥೋತ್ಸವದಲ್ಲಿ ಪಾಲ್ಗೊಂಡಿತು. ರಥದ ಮನೆಯಿಂದ ಹರ ಹರ ಮಹದೇವ... ಜಯಘೊಷದೊಂದಿಗೆ ಪ್ರಾರಂಭವಾದ ರಥೋತ್ಸವ ವೆಂಕಟ್ರಮಣ ಮಂದಿರದ ತನಕ ಸಾಗಿ ಮುಕ್ಕಾಲು ಗಂಟೆಯೊಳಗೆ ತಿರುಗಿ ಸ್ವಸ್ಥಾನಕ್ಕೆ ಆಗಮಿಸಿತು. ರಥೋತ್ಸವದಲ್ಲಿ ಅಂದಾಜು 5 ಸಾವಿರ ಭಕ್ತರು ಪಾಲ್ಗೊಂಡರು. ಹೊರ ಊರಿನಿಂದ ಬಂದ ಯಾತ್ರಿಕರು ಬಹು ಕಡಿಮೆ ಸಂಖ್ಯೆಯಲ್ಲಿ ಕಂಡುಬಂದರು.
ರಥ ಕಾಣಿಕೆ: ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಮತ್ತು ಕವಳೆ ಶ್ರೀ ಕೈವಲ್ಯ ಮಠಾಧೀಶ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿ ಶ್ರೀ ಮಹಾಬಲೇಶ್ವರನಿಗೆ ರಥ ಕಾಣಿಕೆ ಸಮರ್ಪಿಸಿದರು. ಮಹಾರಥೋತ್ಸವದ ವೇಳೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠ ಎಂ. ಬದ್ರಿನಾಥ, ಭಟ್ಕಳ ಡಿಎಸ್ಪಿ ಬೆಳ್ಳಿಯಪ್ಪ ಸ್ಥಳದಲ್ಲಿದ್ದರು. ಸಿಪಿಐ ಪರಮೇಶ್ವರ ಗುನಗ, ಪಿಎಸ್ಐ ನವೀನ ನಾಯ್ಕ ಬಂದೋಬಸ್ತ್ ನಿರ್ವಹಿಸಿದರು.