ಜಿಲ್ಲೆ

ಗೋಕರ್ಣದಲ್ಲಿ ಪುಣ್ಯ ಸ್ನಾನ

ಗೋಕರ್ಣ: ಭಾನುವಾರ ಸೂರ್ಯ ಗ್ರಹಣದ ನಿಮಿತ್ತ ಅಪಾರ ಆಸ್ತಿಕರು ಸಮುದ್ರದಲ್ಲಿ ಪುಣ್ಯ ಸ್ನಾನ ಮಾಡಿದರು. ತರುವಾಯ ಕ್ಷೇತ್ರ ಪದ್ಧತಿಯಂತೆ ಪಿತೃಗಳಿಗೆ ಪುರೋಹಿತ ದ್ವಾರಾ ಪಿಂಡ ಪ್ರದಾನ ಮಾಡಿ ತರ್ಪಣ ಸಮರ್ಪಿಸಿದರು. ಇದರಿಂದ ಸಮುದ್ರ ತೀರದಲ್ಲಿ ದಟ್ಟಣೆ ಕಂಡು ಬಂದಿತು. ರಾಜ್ಯದ ಬೇರೆ ಬೇರೆ ಕಡೆಗಳಿಂದಲೂ ಯಾತ್ರಿಕರು ಆಗಮಿಸಿ ಗ್ರಹಣ ವಿಧಿಯಲ್ಲಿ ಪಾಲ್ಗೊಂಡರು.

ಪೂಜೆ ಇಲ್ಲ: ಗ್ರಹಣ ಪರ್ವ ಕಾಲದಲ್ಲಿ ಆತ್ಮಲಿಂಗ ಮತ್ತು ಮಹಾಗಣಪತಿ ಪೂಜೆ ವಿಶೇಷವಾಗಿತ್ತು. ಆದರೆ, ಕರೊನಾ ಆತಂಕದಿಂದಾಗಿ ಈ ಮಂದಿರಗಳಲ್ಲಿ ಪೂಜೆಗೆ ಅವಕಾಶವಿರಲಿಲ್ಲ. ಮಹಾಬಲೇಶ್ವರ ಮಂದಿರದಲ್ಲಿ ಗ್ರಹಣ ಕಾಲದಲ್ಲಿ ಸ್ಥಳೀಯರಿಗೆ ಮಾತ್ರ ನಂದಿ ಮಂಟಪದಿಂದ ಆತ್ಮಲಿಂಗ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಇಡಗುಂಜಿಯಲ್ಲಿ ಪೂಜೆ: ಇಡಗುಂಜಿಯ ಶ್ರೀ ಮಹಾಗಣಪತಿ ದೇವಸ್ಥಾನ ಇಡೀ ದಿನ ತೆರೆದಿತ್ತು. ಸಾರ್ವಜನಿಕ ದರ್ಶನ ಪೂಜೆಗೂ ಅವಕಾಶವಿತ್ತು. ಗ್ರಹಣ ಕಾಲದಲ್ಲಿ ಜಪ ವಿಶೇಷ ಪೂಜೆ ಆಯೋಜಿಸಲಾಗಿತ್ತು. ಮುರ್ಡೆಶ್ವರ ದೇವಾಲಯದಲ್ಲಿ ಬೆಳಗ್ಗೆ 6.30 ರೊಳಗೆ ಪೂಜೆ ನಡೆಯಿತು. ನಂತರ ಎಂದಿನಂತೆ ದೇವರ ದರ್ಶನಕ್ಕೆ ಮಾತ್ರ ಮಧ್ಯಾಹ್ನ 1.30 ರವರೆಗೂ ಅವಕಾಶ ನೀಡಲಾಯಿತು.