ಜಿಲ್ಲೆ

ಗೋಕರ್ಣಕ್ಕೆ ಬರುವ ಪ್ರವಾಸಿಗರ ಮೇಲೆ ನಿಗಾವಹಿಸಿ

ಕುಮಟಾ: ಹೊರ ರಾಜ್ಯ ಹಾಗೂ ವಿದೇಶದಿಂದ ಗೋಕರ್ಣಕ್ಕೆ ಬರುವವರ ಮೇಲೆ ತಾಲೂಕು ಆಡಳಿತ ಯಾವುದೇ ನಿಗಾ ಇಡದಿರುವ ಬಗ್ಗೆ ತಾ.ಪಂ. ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಇಲ್ಲಿಯ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಮಹೇಶ ಶೆಟ್ಟಿ, ಕರೊನಾ ಹೋರಾಟದಲ್ಲಿ ಗೋಕರ್ಣವನ್ನು ವಿಶೇಷವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ಗೋಕರ್ಣದಲ್ಲಿ ಬುಧವಾರ ವಿದೇಶಿ ಮಹಿಳೆಯೊಂದಿಗೆ ಬಂದಿದ್ದ ವ್ಯಕ್ತಿ ಮೃತಪಟ್ಟಾಗ ಅವರ ಬಗ್ಗೆ ಯಾವುದೇ ಮಾಹಿತಿ ತಾಲೂಕು ಆಡಳಿತದ ಬಳಿ ಇರಲಿಲ್ಲ. ಅವರು ಸಿ-ಫಾರಂ ತುಂಬದೇ ಕಾಟೇಜ್​ನಲ್ಲಿದ್ದರು. ಮುಖ್ಯವಾಗಿ ಮಹಾರಾಷ್ಟ್ರವೂ ಸೇರಿ ಹೊರ ರಾಜ್ಯಗಳಿಂದ ಗೋಕರ್ಣಕ್ಕೆ ಬಂದು ಕ್ರಿಯಾಕರ್ಮಗಳನ್ನು ಮಾಡಿಸಿಕೊಂಡು ಮೂರ್ನಾಲ್ಕು ದಿನದಲ್ಲಿ ಜನ ಮರಳಿ ಹೋಗುತ್ತಿದ್ದಾರೆ. ಕ್ರಿಯಾಕರ್ಮಕ್ಕೆ ಬಂದಿದ್ದರಲ್ಲಿ ಯಾರಾದರೂ ಕರೊನಾದಿಂದಲೇ ಸತ್ತವರಾಗಿದ್ದರೆ ಗುರುತಿಸುವವರು ಯಾರು ಎಂಬುದೇ ಪ್ರಶ್ನೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಇಂದಿನ ಸಭೆಗೆ ಸಿಪಿಐ, ತಹಸೀಲ್ದಾರ್ ಅನುಪಸ್ಥಿತಿಗೆ ಆಕ್ಷೇಪ ವ್ಯಕ್ತಪಡಿಸಿದರು.

ಗೋಕರ್ಣ ಪಂಚಾಯಿತಿ ಅಧ್ಯಕ್ಷೆ ಮಹಾಲಕ್ಷಿ್ಮ ಬಡ್ತಿ ಮಾತನಾಡಿ, ಲಾಕ್​ಡೌನ್ ಸಡಿಲಿಕೆಯ ಬಳಿಕ ಇಲ್ಲಿನ ಚೆಕ್​ಪೋಸ್ಟ್ ತೆರವುಗೊಳಿಸಲಾಗಿದೆ. ಹೀಗಾಗಿ ಪ್ರವಾಸಿಗರ ಮಾಹಿತಿ ದಾಖಲಾತಿ ಇಲ್ಲ. ಕೂಡಲೆ ಇಲ್ಲಿನ ಎಲ್ಲ ರೆಸಾರ್ಟ್​ಗಳನ್ನು ತಪಾಸಣೆ ಮಾಡಬೇಕು ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ ಮಾತನಾಡಿ, ಮೊದಲು ಗೋಕರ್ಣದ ಜನತೆಗೆ ನಿರ್ಬಂಧಿತ ರಾಜ್ಯಗಳಿಂದ ಬರುವ ಪ್ರವಾಸಿಗರ ಅರಿವಿರಬೇಕು ಎಂದರು.

ಬಿಇಒ ರಾಜೇಂದ್ರ ಎಲ್ ಭಟ್ಟ, ಇಒ ಸಿ.ಟಿ. ನಾಯ್ಕ ಇಲಾಖೆಯ ಮಾಹಿತಿ ನೀಡಿದರು. ಅಧ್ಯಕ್ಷೆ ವಿಜಯಾ ಪಟಗಾರ ತಾಪಂ ವಾರ್ಷಿಕ ಆಯವ್ಯಯ ಮಂಡಿಸಿದರು. ವಿವಿಧ ಇಲಾಖೆ ಪ್ರಗತಿ ಪರಿಶೀಲಿಸಿದರು. ಉಪಾಧ್ಯಕ್ಷೆ ಗೀತಾ ಮುಕ್ರಿ, ಇನ್ನಿತರರು ಇದ್ದರು.