ಗೋಕರ್ಣ: ಪುರಾಣ ಪ್ರಸಿದ್ಧ ಮಹಾಬಲೇಶ್ವರ ಮಂದಿರದಲ್ಲಿ ಅ.5ರಿಂದ ಈ ಹಿಂದಿನಂತೆ ಎಲ್ಲ ಪ್ರಕಾರದ ಸೇವೆಗಳು ಪ್ರಾರಂಭವಾಗಲಿವೆ. ಕಳೆದ ಮಾರ್ಚ್ ನಲ್ಲಿ ಕರೊನಾ ಆತಂಕ ಹೆಚ್ಚಾದ ತರುವಾಯ ಮಂದಿರದಲ್ಲಿ ನಿತ್ಯ ನೈಮಿತ್ತಿಕೆಗಳ ಹೊರತಾಗಿ ಉಳಿದೆಲ್ಲ ಸೇವೆಗಳನ್ನು ರದ್ದು ಪಡಿಸಿ ಭಕ್ತರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
ಕೆಲವು ದಿನಗಳ ಹಿಂದಿನಿಂದ ಸರ್ಕಾರದ ಮಾರ್ಗಸೂಚಿಯಂತೆ ಮಾಸ್ಕ್ ಹಾಕಿದ ಭಕ್ತರಿಗೆ ಸ್ಯಾನಿಟೈಸರ್ ತರುವಾಯ ನಂದಿ ಮಂಟಪದ ವರೆಗೆ ಬಂದು ಆತ್ಮಲಿಂಗ ದರ್ಶನ ಮಾಡಲು ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
ನಿರ್ದಿಷ್ಟ ಭಕ್ತರಿಗೆ ಅವಕಾಶ: ಸೇವೆ ಆರಂಭದ ಹಿನ್ನೆಲೆಯಲ್ಲಿ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಂದಿರದಲ್ಲಿ ಈಗಾಗಲೇ ಮಾಡಿಕೊಳ್ಳಲಾಗಿದೆ. ಸ್ಥಳೀಯ ಉಪಾಧಿವಂತರಿಂದ ಪೂಜೆ ಮಾಡಿಸುವ ವೇಳೆ ಪರಸ್ಪರ ಅಂತರ ಕಾಯ್ದುಕೊಳ್ಳಲು ಸಂಕಲ್ಪ ಮಾಡಿಸುವ ಸ್ಥಳದಲ್ಲಿ ಮತ್ತು ಆತ್ಮಲಿಂಗಕ್ಕೆ ಪೂಜೆಗೆ ಹೋಗುವ ವೇಳೆ ಸರತಿ ಸಾಲಿನಲ್ಲಿ ಪ್ರತ್ಯೇಕವಾದ ಮಾರ್ಕ್ ಹಾಕಲಾಗಿದೆ.
ಸರ್ಕಾರಿ ನಿಯಮದಂತೆ ನಿರ್ದಿಷ್ಟ ಸಂಖ್ಯೆಯ ಭಕ್ತರನ್ನು ಮಾತ್ರ ಒಮ್ಮೆ ಮಂದಿರದ ನಂದಿ ಮಂಟಪ ಮತ್ತು ಗರ್ಭಗುಡಿಗೆ ಬಿಡಲಾಗುವುದು. ಉಳಿದವರು ಮಂದಿರದ ಹೊರ ಪ್ರಾಂಗಣದಲ್ಲಿ ಇರಲು ವ್ಯವಸ್ಥೆ ಮಾಡಲಾಗಿದೆ. ಇದೇ ರೀತಿ ಗರ್ಭಗುಡಿಯಲ್ಲಿಯೂ ಪರಸ್ಪರ ಅಂತರ ನಿರ್ವಹಣೆಗೆ ಆದ್ಯತೆ ನೀಡಲಾಗಿದೆ.
ಈ ಬಗ್ಗೆ ಮಾತನಾಡಿದ ಆಡಳಿತಾಧಿಕಾರಿ ಜಿ.ಕೆ.ಹೆಗಡೆ, ಹಿಂದಿನಂತೆ ಮಂದಿರದಲ್ಲಿ ಭಕ್ತರು ಎಲ್ಲ ರೀತಿಯ ಸೇವೆಗಳನ್ನು ಆತ್ಮಲಿಂಗಕ್ಕೆ ಕೈಗೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಸರ್ಕಾರಿ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವ ಜೊತೆಗೆ ಮಂದಿರದಲ್ಲಿ ವಿವಿಧ ಆಂತರಿಕ ನಿಬಂಧನೆಗಳನ್ನು ಕೂಡ ಜಾರಿಗೆ ತರಲಾಗುತ್ತಿದೆ ಎಂದು ತಿಳಿಸಿದ್ದಾರೆ.