ಗೋಕರ್ಣ: ರಾಜ್ಯದಲ್ಲಿ ಸಂಪೂರ್ಣ ಗೋವಧೆ ನಿಷೇಧ ಮತ್ತು ಭಾರತೀಯ ಗೋತಳಿಗಳ ಸಂರಕ್ಷಣೆ ಹಾಗೂ ಸಂವರ್ಧನೆಗೆ ಅನುವು ಮಾಡಿಕೊಡುವ ಮಸೂದೆಯನ್ನು ಸೋಮವಾರದಿಂದ ಪ್ರಾರಂಭವಾಗಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಅಂಗೀಕರಿಸುವಂತೆ ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಶ್ರೀಮಠ ಸಂಚಾಲಿತ ಭಾರತೀಯ ಗೋಪರಿವಾರ ವತಿಯಿಂದ ರಾಜ್ಯದ ಒಂದು ಕೋಟಿಗೂ ಅಧಿಕ ಜನತೆಯ ಪ್ರತ್ಯೇಕ ಹಕ್ಕೊತ್ತಾಯ ಮನವಿಯನ್ನು ಈಗಾಗಲೇ ಮುಖ್ಯಮಂತ್ರಿಗಳಿಗೆ ಮತ್ತು ಪ್ರಧಾನ ಮಂತ್ರಿಗಳಿಗೆ ಸಲ್ಲಿಸಲಾಗಿದೆ. ಅಭಯಾಕ್ಷರ ಅಭಿಯಾನದಡಿ ಪಕ್ಷ ಭೇದ, ಧರ್ಮ ಭೇದ ಇಲ್ಲದೆ ಹಲವು ಸೆಲೆಬ್ರಿಟಿಗಳು ಇದಕ್ಕೆ ಹಸ್ತಾಕ್ಷರವಿತ್ತಿದ್ದಾರೆ. ನಾಡಿನ ವಿವಿಧ ಮಠಾಧೀಶರು, ಧರ್ಮ ಗುರುಗಳು, ಶಿಕ್ಷಣ ತಜ್ಞರು ಮತ್ತು ಸಮಾಜದ ಸರ್ವ ಸ್ತರದ ಗಣ್ಯರು ಈ ಹಕ್ಕೊತ್ತಾಯ ಮಂಡಿಸಿದ್ದಾರೆ. ಸರ್ಕಾರ ನಾಡಿನ ಬಹುಜನರ ಈ ಅಭಿಪ್ರಾಯಕ್ಕೆ ಮನ್ನಣೆಯಿತ್ತು ಈ ಅಧಿವೇಶನದಲ್ಲಿಯೇ ಮಸೂದೆ ಅಂಗೀಕರಿಸಬೇಕು ಎಂದು ಶ್ರೀಗಳು ಆಗ್ರಹಿಸಿದ್ದಾರೆ.
ಗೋವು ಎಲ್ಲರದ್ದಾಗಲಿ: ಗೋವು ಇಲ್ಲದ ಬದುಕು ಊಹಿಸಲೂ ಅಸಾಧ್ಯ. ಕರೊನಾ ಸಂಕಷ್ಟದಿಂದ ಕಂಗೆಟ್ಟಿರುವ ದೇಶ ಮತ್ತು ನಾಡಿಗೆ ಗೋ ಆಧಾರಿತ ಕೃಷಿ ವರದಾನವಾಗಬಲ್ಲದು. ವಿಶೇಷವಾಗಿ ಗ್ರಾಮೀಣರ ಬದುಕನ್ನು ಹಸನಾಗಿಸುವ ಶಕ್ತಿ ಗೋಸಾಕಣೆಗಿದೆ. ಕೇವಲ ಹಾಲಿಗಾಗಿ ಗೋವು ಎಂಬ ಭಾವನೆ ಬದಲಾಗಿ ಆರ್ಥಿಕ ಪುನಶ್ಚೇತನಕ್ಕೆ ಗೋವು, ಗೋಮೂತ್ರ ಮತ್ತು ಗೋಮಯದ ಸದ್ಬಳಕೆ ಮೂಲಕ ಗೋಸಾಕಣೆ ಲಾಭದಾಯಕ ಮಾಡಬಹುದು ಎನ್ನುವುದನ್ನು ರೈತಾಪಿ ಗ್ರಾಮೀಣರಿಗೆ ಮನದಟ್ಟು ಮಾಡುವ ಕಾರ್ಯ ಈ ಹೊಸ ಮಸೂದೆಯಿಂದ ಆಗಲಿ. ಆದ್ದರಿಂದ ಎಲ್ಲ ಪಕ್ಷದ ಪ್ರಮುಖರು ಗೋವನ್ನು ರಾಜಕೀಯೇತರವಾಗಿ ಕಂಡು ಹೊಸ ಮಸೂದೆ ಬರಲು ಬೆಂಬಲ ನೀಡಿ ಸರ್ವನುಮತದಿಂದ ಅಂಗೀಕರಿಸಿ ದೇಶಕ್ಕೆ ಕರ್ನಾಟಕದ ಜನಪ್ರತಿನಿಧಿಗಳು ಮಾದರಿ ಆಗುವಂತಾಗಲಿ ಎಂದು ರಾಘವೇಶ್ವರ ಶ್ರೀಗಳು ಸಲಹೆ ಮಾಡಿದ್ದಾರೆ.
ಗೋ ಸೇವಾ ಆಯೋಗ ಬರಲಿ: ಉತ್ತರ ಪ್ರದೇಶ ಮತ್ತು ಇತರ ಕೆಲವು ರಾಜ್ಯಗಳಂತೆ ರಾಜ್ಯದಲ್ಲಿಯೂ ಗೋ ಸೇವಾ ಆಯೋಗ ರಚಿಸುವಂತಾಗ ಬೇಕು. ವಾರಸುದಾರರಿಲ್ಲದ ಗೋವುಗಳು ರಾಜ್ಯದ ನಗರ ಮತ್ತು ಪಟ್ಟಣಗಳಲ್ಲಿ ಬಹು ದೊಡ್ಡ ಸಮಸ್ಯೆಯಾಗಿವೆ. ಇಂತಹ ಗೋವುಗಳು ಕಟುಕರ ಪಾಲಾಗುತ್ತಿರುವ ಆತಂಕ ಎಲ್ಲೆಡೆ ಇದೆ. ಇದನ್ನು ತಪ್ಪಿಸಲು ಸರ್ಕಾರ ಪ್ರತಿ ಜಿಲ್ಲೆಯಲ್ಲಿ ಗೋವುಗಳು ಸ್ವಚ್ಛಂದವಾಗಿ ವಿಹರಿಸಿ ಸಂತುಷ್ಟವಾಗಿ ಬದುಕಬಲ್ಲ ಗೋಸ್ವರ್ಗಗಳ ನಿರ್ವಣಕ್ಕೆ ಈ ಆಯೋಗದ ಮೂಲಕ ಮುಂದಾಗಲಿ. ಗವ್ಯೋತ್ಪನ್ನಗಳನ್ನು ಜನಪ್ರಿಯಗೊಳಿಸಿ ಅವುಗಳ ಔಷಧೀಯ ಗುಣಗಳ ಬಗ್ಗೆ ಆಳ ಸಂಶೋಧನೆ ನಡೆಯಲಿ. ಇದಕ್ಕೆ ಶ್ರೀಮಠ ಎಲ್ಲ ಬಗೆಯ ತಾಂತ್ರಿಕ ನೆರವು ಒದಗಿಸಲು ಸಿದ್ಧವಿದೆ ಎಂದು ಶ್ರೀಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರ ಈ ಅಧಿವೇಶನದಲ್ಲಿಯೇ ನೂತನ ಗೋವಧೆ ನಿಷೇಧ ಕಾನೂನಿಗೆ ಮುಂದಾಗಿ ಗೋ ಕುಲ ಸಂರಕ್ಷಣೆ ಮತ್ತು ಸಂವರ್ಧನೆಗೆ ಕಟಿಬದ್ಧವಾಗಲಿ ಎಂದು ನಾಡಿನ ಸಮಸ್ತ ಗೋಪ್ರೇಮಿಗಳ ವತಿಯಿಂದ ರಾಘವೇಶ್ವರ ಶ್ರೀಗಳು ಹಕ್ಕೊತ್ತಾಯ ಮಂಡಿಸಿದ್ದಾರೆ.