ಜಿಲ್ಲೆ

ಗೊಲ್ಲರಹಟ್ಟಿಯಲ್ಲಿ ನೀರಿಗೆ ತತ್ವ್ವಾರ

ಪ್ರತಿಭಟನೆಗೆ ಮುಂದಾದ ಜನರು, ಸ್ಥಳಕ್ಕೆ ದೌಡಾಯಿಸಿದ ಡಿಸಿ

ತುಮಕೂರು: ಕುಣಿಗಲ್​ ತಾಲೂಕು ದೊಡ್ಡ ಮಳಲವಾಡಿ ಗೊಲ್ಲರಹಟ್ಟಿಯಲ್ಲಿ ಕಳೆದ ಮೂರು ತಿಂಗಳಿಂದಲೂ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಗೊಲ್ಲರಹಟ್ಟಿಯಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ಬಗ್ಗೆ ಸ್ಥಳಿಯ ಆಡಳಿಯಕ್ಕೆ ಸಾಕಷ್ಟು ಮನವಿ ಸಲ್ಲಿಸಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಗಮನ ಸೆಳೆಯಲು ಸ್ಥಳಿಯರು ಪ್ರತಿಭಟನೆಗೆ ಮುಂದಾಗಿದ್ದರು.

ಪ್ರತಿಭಟನೆಯ ಮುನ್ಸೂಚನೆ ಅರಿತ ಜಿಲ್ಲಾಧಿಕಾರಿ ಶುಭಕಲ್ಯಾಣ್​, ತಹಸೀಲ್ದಾರ್​ ಯು.ರಶ್ಮಿ ಜತೆಗೂಡಿ ತರಾತುರಿಯಲ್ಲಿ ಶುಕ್ರವಾರ ಗೊಲ್ಲರಹಟ್ಟಿಗೆ ದೌಡಾಯಿಸಿ ಸ್ಥಳಿಯರಿಂದ ನೀರಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದರು, ಪಕ್ಕದ ಗ್ರಾಮದ ಕೊಳವೆ ಬಾವಿಯಿಂದ ಪೈಪ್​ಲೈನ್​ ಮೂಲಕ ನೀರೊದಗಿಸಲು ಕ್ರಮಕೈಗೊಳ್ಳಲು ಗ್ರಾಪಂ ಪಿಡಿಒಗೆ ಸೂಚಿಸಿ, ಅಗತ್ಯ ಅನುದಾನ ಒದಗಿಸುವ ಭರವಸೆ ನೀಡಿದರು.

ನಂತರ ಕುಣಿಗಲ್​ ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ತೆರೆಯಲಾಗಿರುವ ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ತೂಕ ಮತ್ತು ಅಳತೆ ಪ್ರಕ್ರಿಯೆ ಪರಿಶೀಲಿಸಿ ರೈತರಿಂದ ಅಹವಾಲುಗಳನ್ನು ಆಲಿಸಿ ಸುದ್ದಿಗಾರರ ಜತೆ ಮಾತನಾಡಿದರು.

ಕುಣಿಗಲ್​ ತಾಲೂಕಿನ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ದೊಡ್ಡ ಮಳಲವಾಡಿ ಗೊಲ್ಲರಹಟ್ಟಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಈಗಾಗಲೇ ಪಕ್ಕದ ಗ್ರಾಮದಿಂದ ದೊಡ್ಡ ಮಳಲವಾಡಿ ಗೊಲ್ಲರಹಟ್ಟಿ ಗ್ರಾಮಕ್ಕೆ ನೀರೊದಗಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ ಎಂದು ಡಿಸಿ ತಿಳಿಸಿದರು.

ನೀರಿನ ಸಮಸ್ಯೆಯನ್ನು ಕೂಡಲೇ ಬಗೆಹರಿಸಲು ಈಗಾಗಲೇ ಸ್ಥಳಿಯ ಪಿಡಿಒ, ಗ್ರಾಮೀಣ ಕುಡಿಯುವ ನೀರು ಮತ್ತು ನೈಮಲ್ಯ ವಿಭಾಗದ ಇಂಜಿನಿಯರ್​ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಗೊಲ್ಲರಹಟ್ಟಿಯ 40 ಮನೆಗಳಿಗೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದರು. ನೀರಿನ ಸಮಸ್ಯೆ ವರದಿಯಾದ ಕೂಡಲೇ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ, ಜಿಪಂ ಬದ್ಧವಾಗಿದೆ. ಬೇಸಿಗೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವುದು ಮೊದಲ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ರಾಗಿ ಬೆಳೆದ ರೈತರ ಅನುಕೂಲಕ್ಕಾಗಿ ಕುಣಿಗಲ್​ ತಾಲೂಕಿನಲ್ಲಿ 2 ರಾಗಿ ಖರೀದಿ ಕೇಂದ್ರಗಳನ್ನು ತೆರೆದು ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟಾರೆ 11 ಕಡೆ ರಾಗಿ ಖರೀದಿ ಕೇಂದ್ರ ತೆರೆಯಲಾಗಿದ್ದು, 56000 ರೈತರು ರಾಗಿ ಮಾರಾಟ ಮಾಡಲು ಖರೀದಿ ಕೇಂದ್ರದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ 6 ಲಕ್ಷ ಕ್ವಿಂಟಾಲ್​ ರಾಗಿ ಖರೀದಿಯಾಗುತ್ತದೆ ಎಂಬ ನಿರೀಕ್ಷೆಯಿದ್ದು, ಜೂನ್​ ವರೆಗೂ ರೈತರಿಂದ ರಾಗಿ ಖರೀದಿಸುವ ಪ್ರಕ್ರಿಯೆ ನಡೆಯಲಿದೆ ಎಂದರು. ಜಿಲ್ಲೆಯಲ್ಲಿ ಸುಮಾರು 2160 ಕೆರೆಗಳಿದ್ದು, ಕೆಲವು ಕೆರೆಗಳು ಒತ್ತುವರಿಯಾಗಿರುವ ಬಗ್ಗೆ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಕೆರೆ ಒತ್ತುವರಿ ತೆರವುಗೊಳಿಸಲು ಜಿಲ್ಲಾದ್ಯಂತ ಆಂದೋಲನ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಕುಣಿಗಲ್​ ಹಾಗೂ ಗುಬ್ಬಿ ತಾಲೂಕಿನಲ್ಲಿ ಈಗಾಗಲೇ ಕೆರೆ ಒತ್ತುವರಿ ತೆರವು ಕಾರ್ಯ ಪ್ರಗತಿಯಲ್ಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ತ್ವರಿತವಾಗಿ ಕ್ರಮಕೈಗೊಳ್ಳಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳಲ್ಲಿ 15ನೇ ಹಣಕಾಸು ನಿಧಿ, ಜಲ್​ ಜೀವನ್​ ಮಿಷನ್​ ಯೋಜನೆ, ಗ್ರಾಪಂ ಅನುದಾನದಿಂದ ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲು ಅವಕಾಶವಿದ್ದು, ಅಧಿಕಾರಿಗಳು ತ್ವರಿತವಾಗಿ ಕ್ರಮಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಜನರಿಗೆ ಕುಡಿಯುವ ನೀರಿಗೆ ಯಾವ ರೀತಿಯಲ್ಲೂ ಸಮಸ್ಯೆ ಉಂಟಾಗಬಾರದು. ಸಮಸ್ಯೆ ತಲೆದೋರಿದಾಗ ತಕ್ಷಣ ಸ್ಪಂದಿಸಲು ಎಲ್ಲ ತಾಲೂಕುಗಳಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಎಂದು ಶುಭಕಲ್ಯಾಣ್​ ತಿಳಿಸಿದರು.

ಜಿಲ್ಲೆಯಲ್ಲಿ ಈವರೆಗೂ 12 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದೆ. ಕಳೆದ ವರ್ಷ 1000 ಮಿಮೀ ಮಳೆಯಾಗಿರುವುದರಿಂದ ಜಿಲ್ಲೆಯನ್ನು ಬರಪೀಡಿತ ಎಂದು ಸರ್ಕಾರದಿಂದ ಘೋಷಣೆ ಮಾಡಿಲ್ಲ. ಕಳೆದ ವರ್ಷ ಸರಾಸರಿಗಿಂತ ಶೇ.65ಕ್ಕಿಂತ ಹೆಚ್ಚಿನ ಮಳೆಯಾಗಿರುವುದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿದೆ. ಪಾವಗಡದಂತಹ ಗುಡ್ಡಗಾಡು ಪ್ರದೇಶಗಳಲ್ಲಿ ಕೊಳವೆ ಬಾವಿಗಳು ಕೆಟ್ಟು ಹೋಗುತ್ತಿರುವ ಹಾಗೂ ಕೊಳವೆ ಬಾವಿಗಳಲ್ಲಿ ನೀರಿನ ಇಳುವರಿ ಕಡಿಮೆಯಾಗುತ್ತಿರುವ ಬಗ್ಗೆ ವರದಿಯಾಗಿದೆ. | ಶುಭಕಲ್ಯಾಣ್​ ಜಿಲ್ಲಾಧಿಕಾರಿ