ಜಿಲ್ಲೆ

ಗೊಲ್ಲ ಸಂಘದ ಅನುದಾನ ದುರುಪಯೋಗ

ಚಿತ್ರದುರ್ಗ: ಜಿಲ್ಲಾ ಯಾದವ (ಗೊಲ್ಲರ) ಸಂಘದ ಅನುದಾನ ದುರ್ಬಳಕೆಯಾಗಿದ್ದು, ಸಮಾಜಕ್ಕೆ ಭಾರಿ ಅನ್ಯಾಯವಾಗಿದೆ ಎಂದು ಮಾಜಿ ಶಾಸಕ ಎ.ವಿ.ಉಮಾಪತಿ ಆರೋಪಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದಿನ ಅಧ್ಯಕ್ಷರು ಸೇರಿ ಮತ್ತಿತರರು ಬ್ರಹ್ಮಾಂಡ ಭ್ರಷ್ಟಾಚಾರ ಎಸಗಿದ್ದಾರೆ. ಸಮ್ಮೇಳನ ನಡೆಸದೆ, 2.5 ಲಕ್ಷ ರೂ. ಖರ್ಚು ತೋರಿಸಿದ್ದಾರೆ. ಸಂಘದ ಆಸ್ತಿ ಕಬಳಿಸಲು ಮುಂದಾಗಿದ್ದಾರೆ ಎಂದು ದೂರಿದರು.

ಜಿಲ್ಲಾ ಗೊಲ್ಲರ ವಸತಿ ನಿಲಯದಲ್ಲಿ ನಮ್ಮ ಸಮಾಜ ಸೇರಿ ವಿವಿಧ ಸಮುದಾಯದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ ಸಿಗುತ್ತಿತ್ತು. ಆದರೆ, ಆ ಕಟ್ಟಡ ಕೆಡವಿ ನೆಲಸಮ ಮಾಡಿದ್ದು, ದೊಡ್ಡ ದ್ರೋಹ. ಸರ್ವ ಸದಸ್ಯರ ಒಪ್ಪಿಗೆ ಪಡೆಯದೇ ಸರ್ವಾಧಿಕಾರಿ ಧೋರಣೆಯೊಂದಿಗೆ ಏಕ ಪಕ್ಷೀಯ ನಿರ್ಧಾರ ಕೈಗೊಂಡು ಸಂಘ ಹಾಳು ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕೇಂದ್ರದ ಮಾಜಿ ಸಚಿವ ಎ.ನಾರಾಯಣ ಸ್ವಾಮಿ 50 ಲಕ್ಷ ರೂ., ಎಂಎಲ್ಸಿ ಕೆ.ಎಸ್.ನವೀನ್, ಜಿ.ಸಿ.ಚಂದ್ರಶೇಖರ್ ತಲಾ 10 ಲಕ್ಷ ರೂ. ಅನುದಾನ ನೀಡಿದ್ದಾರೆ. ಆದರೆ, ಯಾವುದೇ ಕಟ್ಟಡ ಕಾಮಗಾರಿ ನಡೆದಿಲ್ಲವೆಂದು ತಹಸೀಲ್ದಾರ್ ಪರಿಶೀಲಿಸಿ ವರದಿ ನೀಡಿದ್ದಾರೆ. ಹಾಗಾದರೆ, ಅನುದಾನ ಏನಾಯಿತು ಎಂದು ಪ್ರಶ್ನಿಸಿದರು.

2,600 ಮಂದಿಗೆ ಸದಸ್ಯತ್ವ ನೀಡಿದ್ದಾರೆ. ಇದರಲ್ಲೂ ಅಕ್ರಮ ನಡೆದಿದೆ. ಸಂಘದ ಬೈಲಾ ಬದಲಿಸುವ ಅಧಿಕಾರ ಕೊಟ್ಟವರ‌್ಯಾರು ಎಂದು ಪ್ರಶ್ನಿಸಿದ ಉಮಾಪತಿ, ಸಮಾಜಕ್ಕಾಗಿ ಯಾವ ಒಳ್ಳೆಯ ಕೆಲಸ ಮಾಡಿದ್ದೀರಿ ತೋರಿಸಿ ಎಂದು ಸವಾಲು ಹಾಕಿದರು.

ಸಮಾವೇಶ-ವಾಗ್ವಾದ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಏ. 20ರಂದು ಆಯೋಜಿಸಿರುವ ರಾಜ್ಯ ಗೊಲ್ಲ ಯಾದವ ಸಮಾವೇಶಕ್ಕೂ ನಮಗೂ ಯಾವ ಸಂಬಂಧವಿಲ್ಲ ಎಂದು ಎ.ವಿ.ಉಮಾಪತಿ ಪ್ರಸ್ತಾಪಿಸುತ್ತಿದ್ದಂತೆ ಮುಖಂಡ ಕೆ.ಸಿ.ರಮೇಶ್ ಆಕ್ಷೇಪ ವ್ಯಕ್ತಪಡಿಸಿದರು. ಇದು ನಿಮ್ಮ ಮನೆಯ ಕಾರ್ಯಕ್ರಮವಲ್ಲ. ಸಮಾಜಕ್ಕೆ ಸಂಬಂಧಿಸಿದ್ದಾಗಿದೆ. ಇಲ್ಲಿ ಸಂಘದ ವಿಚಾರವನ್ನಷ್ಟೇ ಮಾತನಾಡಿ ಎಂದರು. ಇದರಿಂದಾಗಿ ಸಮುದಾಯದ ಮುಖಂಡರಲ್ಲೇ ಕೆಲ ಕಾಲ ಪರ, ವಿರೋಧದ ಚರ್ಚೆ, ವಾಗ್ವಾದ ನಡೆಯಿತು.

ಮುಖಂಡರಾದ ಜಿ.ಟಿ.ಅಜ್ಜಪ್ಪ, ಸಿ.ಟಿ.ಕೃಷ್ಣಮೂರ್ತಿ, ಕೂನೀಕೆರೆ ರಾಮಣ್ಣ, ಲಿಂಗಾರೆಡ್ಡಿ, ಕೆ.ಸಿ.ರಮೇಶ್, ಚಿತ್ತಪ್ಪ, ಗುತ್ತಿಕಟ್ಟೆ ಪ್ರಕಾಶ್, ಸಂಪತ್ ಇತರರಿದ್ದರು.