ಜಿಲ್ಲೆ

ಗೊರುರು ಗ್ರಾಮದ 12 ದಲಿತ ಕುಟುಂಬಗಳಿಗೆ ಸವರ್ಣೀಯರಿಂದ ತೊಂದರೆ

ಹಾಸನ: ಬೇಲೂರು ತಾಲೂಕು ಗೊರುರು ಗ್ರಾಮದ 12 ದಲಿತ ಕುಟುಂಬಗಳಿಗೆ ಸವರ್ಣೀಯರು ಅನೇಕ ರೀತಿಯ ತೊಂದರೆ ನೀಡುತ್ತಿದ್ದು, ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಮಧ್ಯೆ ಪ್ರವೇಶಿಸಿ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದರೆ ಡಿಸಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಉಪಾಧ್ಯಕ್ಷ ವೆಂಕಟಯ್ಯ ಎಚ್ಚರಿಸಿದರು.

ಸುಮಾರು 13 ಎಕರೆ ಭೂಮಿಗಾಗಿ ಕೆಲ ಪ್ರಭಾವಿಗಳು ಗೂಂಡಾಗಳನ್ನು ಕರೆತಂದು ಸ್ಥಳೀಯ ಅಧಿಕಾರಿಗಳಿಗೂ ತೊಂದರೆ ನೀಡುತ್ತಿದ್ದಾರೆ.

ದಲಿತರಾದ ಬಸವರಾಜು, ರಾಜಯ್ಯ, ಕರಿಯಯ್ಯ, ಧರ್ಮಯ್ಯ ಸೇರಿದಂತೆ 12 ಕುಟುಂಬದವರು, 1960 ರಿಂದ ಸದರಿ ಭೂಮಿಯಲ್ಲಿ ಅನುಭೋಗದಲ್ಲಿದ್ದು, ಸಾಗುವಳಿ ಮಾಡುತ್ತಿದ್ದಾರೆ. ಇವರ ಹೆಸರಿಗೇ ಪಹಣಿ ಬರುತ್ತಿದೆ. ಆದರೆ ಕನಾಯಕನಹಳ್ಳಿ ಗ್ರಾಮದ ದಿ.ಕೆ.ಆರ್.ಈಶ್ವರಪ್ಪ ಎಂಬುವರ ಪತ್ನಿ ಎ.ಬಿ. ವೀಣಾ ಹಾಗೂ ಅವರ ತಮ್ಮ ಮೊಗಣ್ಣಗೌಡ ಇವರು ಸರ್ಕಾರಿ ನೌಕರರಾಗಿದ್ದರೂ, ಗೊರೂರು ಗ್ರಾಮದ ಸರ್ವೆ ನಂ. 16 ರಲ್ಲಿ 5 ಎಕರೆ ಜಾಗ ಇದ್ದರೂ, ದಲಿತರ ಜಾಗ ಹೆಚ್.ಆರ್.ಪಿ. ಯೋಜನೆಯಡಿ ನಮಗೆ ಮಂಜೂರಾಗಿದೆ ಎಂದು ಗ್ರಾಂಟ್ ಸರ್ಟಿಫಿಕೇಟ್ ತಂದುಕೊಟ್ಟು ತಮ್ಮ ಹೆಸರಿಗೆ ಅಕ್ರಮವಾಗಿ ಗ್ರಾಂಟ್ ಮಾಡಿಸಿಕೊಂಡಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಟಿಯಲ್ಲಿ ದೂರಿದರು.

ಇದು 1960 ರಿಂದಲೂ ಅನುಭೋಗದಲ್ಲಿರುವ ಬಿಸಲಯ್ಯ ಅವರ ಕುಟುಂಬದವರಿಗೆ ತಿಳಿದಿಲ್ಲ. ಈ ನಡುವೆ 2021 ರಲ್ಲಿ ವೀಣಾ, ಮೊಗಣ್ಣಗೌಡ, ಬಿಸಲಯ್ಯ ಅವರ ಕುಟುಬದವರ ಮೇಲೆ ದೌರ್ಜನ್ಯ, ದಬ್ಬಾಳಿಕೆ, ಮಾಡಿ ರೌಡಿಗಳ ಗುಂಪು ಕಟ್ಟಿಕೊಂಡು ಹಲ್ಲೆ ಮಾಡಿದ್ದಾರೆ. ಈ ಸಂಬಂಧ ದಲಿತ ದೌರ್ಜನ್ಯ ಕೇಸು ದಾಖಲಾಗಿದೆ. ಅಲ್ಲಿಂದ ಸುಮ್ಮನಿದ್ದವರು ಇದೀಗ ಮತ್ತು ರೌಡಿಗಳ ಗುಂಪು ಕಟ್ಟಿಕೊಂಡು ದಲಿತರ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡಲು ಹುನ್ನಾರ ನಡೆಸಿದ್ದಾರೆ. ಜಮೀನಿನ ಬಳಿ ಹೋಗದಂತೆ ಹೆದರಿಸಿ, ಬೆದರಿಸಿ, ತೊಂದರೆ ಕೊಡುತ್ತಿರುತ್ತಾರೆ. ಈಗ ಅಶೋಕ, ಆನಂದ ಎಂಬುವರು ಬಿಸಲಯ್ಯ ಅವರ ಕುಟುಂಬದವರಿಗೆ ಕಿರುಕುಳ ಕೊಡುತ್ತಿದ್ದಾರೆ ಎಂದರು.

ಬಿಸಲಯ್ಯ ಕುಟುಂಬದವರು ಜಿಲ್ಲಾಧಿಕಾರಿಗಳು, ಎಸಿ, ತಹಸೀಲ್ದಾರ್ ಮೊದಲಾದವರಿಗೆ ದೂರು ಸಲ್ಲಿಸಿದಾಗ ತಹಸೀಲ್ದಾರ್ ಕಚೇರಿಯಿಂದ ಮಹಜರು ನಡೆದಿದೆ. ಆದರೆ ಬಿಸಲಯ್ಯ ಕುಟುಂಬದವರಿಗೆ ಅನುಭವದ ಸರ್ಟಫಿಕೇಟ್ ನೀಡದೆ ಕೆಲ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದರಿಂದ ದಲಿತ ಕುಟುಂಬಗಳಿಗೆ ಅನ್ಯಾಯವಾಗಿದೆ ಎಂದು ಅಳಲು ತೋಡಿಕೊಂಡರು. ಕೂಡಲೇ ಶಾಸಕ ಎಚ್.ಕೆ.ಸುರೇಶ್, ಡಿಸಿ ಅವರು, ಇತರೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ತೊಂದರೆ ನೀಡುತ್ತಿರುವ ಮೇಲೆ ಕ್ರಮ ಜರುಗಿಸಬೇಕು. ನೊಂದವರಿಗೆ ನ್ಯಾಯ ಕೊಡಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಸಿದರು.

ಸುದ್ದಿಗೋಷ್ಟಿಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಪರಮೇಶ್, ಕುಬೇರ, ಆಲೂರು ತಾಲೂಕು ಅಧ್ಯಕ್ಷ ಪುಟ್ಟರಾಜು, ಗುರುಪ್ರಸಾದ್ ಇದ್ದರು.