ಕೊಳ್ಳೇಗಾಲ ಪಟ್ಟಣದ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ 2022 ನೇ ಸಾಲಿನ ಮಾನಸೋತ್ಸವ ಪ್ರಶಸ್ತಿಯನ್ನು ಹಿರಿಯ ಜಾನಪದ ವಿದ್ವಾಂಸ ನಾಡೋಜ ಡಾ.ಗೊ.ರು. ಚನ್ನಬಸಪ್ಪ ಅವರಿಗೆ ಗಣ್ಯರು ಪ್ರದಾನ ಮಾಡಿದರು. ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಸೌಮ್ಯನಾಥ ಸ್ವಾಮೀಜಿ, ಜಿ.ಎಸ್.ಜಯದೇವ, ದತ್ತೇಶ್ ಕುಮಾರ್, ನಾಗರಾಜು, ಕೃಷ್ಣೇಗೌಡ ಇತರರು ಇದ್ದರು.  
ಜಿಲ್ಲೆ

ಗೊರುಚಗೆ ಮಾನಸೋತ್ಸವ ಪ್ರಶಸ್ತಿ ಪ್ರದಾನ

ಕೊಳ್ಳೇಗಾಲ: ಪಟ್ಟಣದ ಮಾನಸ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಆಯೋಜಿಸಿದ್ದ 2022ನೇ ಮಾನಸೋತ್ಸವ ವಾರ್ಷಿಕ ಕಾರ್ಯಕ್ರಮದಲ್ಲಿ ಹಿರಿಯ ಜಾನಪದ ವಿದ್ವಾಂಸ ನಾಡೋಜ ಡಾ.ಗೊ.ರು.ಚನ್ನಬಸಪ್ಪ ಅವರಿಗೆ ಮಾನಸೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಾಲೂರು ಬೃಹ್ಮಠದ ಶಾಂತಮಲ್ಲಿಕಾರ್ಜುನ ಶ್ರೀಗಳು ಮತ್ತು ಆದಿಚುಂಚನಗಿರಿ ಸಂಸ್ಥಾನದ ಶ್ರೀ ಸೌಮ್ಯನಾಥ ಸ್ವಾಮೀಜಿ ಗೊರುಚ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಿದರು.

ಪ್ರಶಸ್ತಿ ಸ್ವೀಕರಿಸಿದ ಮಾತನಾಡಿದ ನಾಡೋಜ ಡಾ.ಗೊ.ರು.ಚನ್ನಬಸಪ್ಪ, ದೇಶದಲ್ಲಿ ಶಿಕ್ಷಿತರು ಹೆಚ್ಚಾಗುತ್ತಿದ್ದಾರೆ. ಎಲ್ಲ ಕ್ಷೇತ್ರದಲ್ಲಿ ದೇಶ ಅಪ್ರತಿಮ ಸಾಧನೆ ಮಾಡುತ್ತ ಮುಂದುವರಿಯುತ್ತಿದ್ದರೂ ಜಾತೀಯತೆ ಮಾತ್ರ ಬೇರೂರಿದೆ. ಇದು ದುರದುಷ್ಟಕರ ಸಂಗತಿ ಎಂದ ಅವರು, ಈ ಬಾರಿಯ ಮಾನಸ ಪ್ರಶಸ್ತಿ ದೊರಕಿರುವುದು ಸಂತೋಷದ ವಿಚಾರ. ಇನ್ನು ಸಾಲೂರು ಬೃಹ್ಮಠದ ಶಾಂತಮಲ್ಲಿಕಾರ್ಜುನ ಶ್ರೀಗಳು ಮತ್ತು ಆದಿಚುಂಚನಗಿರಿ ಸಂಸ್ಥಾನದ ಶ್ರೀ ಸೌಮ್ಯನಾಥ ಸ್ವಾಮೀಜಿಗಳಿಂದ ಪ್ರಶಸ್ತಿ ಸ್ವೀಕರಿಸಿದ್ದು ಇನ್ನಷ್ಟು ಸಂತಸ ತಂದಿದೆ ಎಂದರು.

ಮಾನಸ ಶಿಕ್ಷಣ ಸಂಸ್ಥೆ ಈ ಭಾಗದ ಗ್ರಾಮೀಣ ಮಕ್ಕಳಲ್ಲಿ ಜ್ಞಾನ ದಾಸೋಹ ಉಣಬಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇಲ್ಲಿ ಓದಿದ ವಿದ್ಯಾರ್ಥಿಗಳು ಸಾಧಕರಾಗಬೇಕು. ಸ್ಪರ್ಧಾತ್ಮಕ ಯುಗದಲ್ಲಿ ಸಾಮಾನ್ಯ ಜ್ಞಾನ ಬೆಳೆಸಿಕೊಳ್ಳಬೇಕು. ಸಾಧನೆ ಮಾಡಬೇಕು. ಜೀವನದಲ್ಲಿ ತಂದೆ ತಾಯಿಗಳನ್ನು ಕಡೆಗಣಿಸಬಾರದು ಎಂದು ಕಿವಿ ಮಾತು ಹೇಳಿದರು.

ಆದಿಚುಂಚನಗಿರಿ ಸಂಸ್ಥಾನ ಮಠದ ಶ್ರೀ ಸೌಮ್ಯನಾಥ ಸ್ವಾಮೀಜಿ ಮಾತನಾಡಿ, ಪ್ರಸ್ತುತ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸರ್ಕಾರ ಎಷ್ಟು ಹೆಚ್ಚು ಹಣ ವ್ಯಯಿಸಿದರು ಅಲ್ಲಿನ ವ್ಯವಸ್ಥೆ ಹೇಗಿದೆ ಎಂಬುದನ್ನು ನೋಡಿದ್ದೇವೆ. ಸರ್ಕಾರಿ ಶಾಲೆ ಮತ್ತು ಕಾಲೇಜಿನ ಪರಿಸ್ಥಿತಿ ಬಹಳಷ್ಟು ಸುಧಾರಿಸಬೇಕಿದೆ. ಹಿಂದಿನಿಂದಲು ಮಠ ಮಾನ್ಯಗಳು ಶಿಕ್ಷಣಕ್ಕೆ ಒತ್ತು ನೀಡಿವೆ. ಸಮಾಜಕ್ಕೆ ಒಳ್ಳೆಯ ಪ್ರಜೆಗಳನ್ನು ನೀಡಿವೆ. ನಮ್ಮಲ್ಲಿ ಓದಿದ ಮಕ್ಕಳು ಎತ್ತರಕ್ಕೆ ಬೆಳೆದರೆ ಸಾಕು, ಅದೇ ಸಂತೋಷ ಎಂದರು.

27 ವರ್ಷಗಳಿಂದ ಮಾನಸ ಶಿಕ್ಷಣ ಸಂಸ್ಥೆ ಉತ್ತಮ ಸೇವೆ ನೀಡುತ್ತಿದೆ. ಇಲ್ಲಿ ಓದಿದವರು ಎತ್ತರಕ್ಕೆ ಬೆಳೆದು ಸಾಧನೆ ಮಾಡುತ್ತಿದ್ದಾರೆ. ಒಳ್ಳೆಯ ಸ್ಥಾನಮಾನ ಅಲಂಕರಿಸಿದ್ದಾರೆ ಎಂದರು.
ಸಾಲೂರು ಬೃಹನ್ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ಬಾಮೀಜಿ ಮಾತನಾಡಿ, ಅವರ ಬದುಕು ಅವರಿಗಲ್ಲ ಶಿಕ್ಷಣಕ್ಕೆ ಎಂಬ ನುಡಿಯಂತೆ ದತ್ತೇಶ್ ಅವರು ಈ ಭಾಗದ ಮಕ್ಕಳಿಗೆ ಶಿಕ್ಷಣ ದಾಸೋಹ ನೀಡುತ್ತಿದ್ದಾರೆ. ಅವರ ಸಾರಥ್ಯದಲ್ಲಿ ಮಾನಸೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದೆ. ಪ್ರತಿ ವರ್ಷ ಒಬ್ಬ ಆದರ್ಶ ವ್ಯಕ್ತಿಗಳನ್ನು ಪರಿಚಯಿಸಿ ಮಾನಸ ಪ್ರಶಸ್ತಿ ನೀಡುತ್ತಿರುವುದು ಒಳ್ಳೆಯ ಕೆಲಸವಾಗಿದೆ. ಅವರಿಂದ ಮಕ್ಕಳು ಪ್ರೇರಣೆಗೆ ಒಳಗಾಗುತ್ತಾರೆ ಎಂದರು.

ದೀನಬಂಧು ಸಂಸ್ಥೆಯ ಮುಖ್ಯಸ್ಥ ಪ್ರೊ. ಜಿ.ಎಸ್.ಜಯದೇವ ಮಾತನಾಡಿ, ಉತ್ತಮ ಮೌಲ್ಯಗುಣಗಳನ್ನು ಹೊಂದಿರುವ ಗೋರುಚ ಅವರಿಗೆ ಮಾನಸ ಪ್ರಶಸ್ತಿ ಪ್ರಧಾನ ಮಾಡುತ್ತಿರುವುದು ಒಳ್ಳೆಯ ಕೆಲಸವಾಗಿದೆ. ಮಕ್ಕಳು ಪ್ರಸ್ತುತ ಮೊಬೈಲ್ ವ್ಯಸನಕ್ಕೆ ಒಳಗಾಗಿದ್ದು ಇದ್ದರಿಂದ ಅವರು ತಪ್ಪಿಸಿಕೊಳ್ಳಬೇಕು ಎಂದರು.

ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ದತ್ತೇಶ್ ಕುಮಾರ್, ಅಧ್ಯಕ್ಷ ನಾಗರಾಜು, ನಿಸರ್ಗ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಪ್ರಾಂಶುಪಾಲ ಕೃಷ್ಣೆಗೌಡ, ನಾಗಭೂಷಣ, ಶಂಕರ್, ಉಷಾರಾಣಿ, ಮಂಜುಳಾ, ಚನ್ನಶೆಟ್ಟಿ, ನಾಗೇಂದ್ರ ಕುಮಾರ್, ರಾಮಕೃಷ್ಣ, ಧನಂಜಯ, ರೂಪಾದತ್ತೇಶ್ ಮತಿತ್ತರಿದ್ದರು.

ಮತ ಜಾಡ್ಯದಿಂದ ನರಳುತ್ತಿದೆ ದೇಶ: ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಮುಖಕ್ಕೆ ಬಳಿದ ಮಸಿಯಂತೆ ಹಣ, ಮತ ಜಾಡ್ಯದಿಂದ ದೇಶ ನರಳುತ್ತಿದೆ. ಹಣ, ಜಾತಿ ಅಧಿಕಾರದ ಹುಚ್ಚು ಹೆಚ್ಚಾಗಿದೆ ಎಂದು ಡಾ.ಗೊ.ರು.ಚನ್ನಬಸಪ್ಪ ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ಬೆಳಗೆದ್ದು ನೋಡಿದರೆ ಅಮಾಯಕರ ಸಾವು, ನೋವುಗಳು, ಭಯೋತ್ಪಾದಕರ ಬೀಕರ ಕೃತ್ಯಗಳು, ಮತಾಂಧರ ಮತಿಹೀನ ಹೇಳಿಕೆಗಳು, ಜಾತ್ಯಾತೀತರು ಎನ್ನುವವರ ಆತ್ಮವಂಚನೆಗಳು, ಆಶ್ರಯ ಕಳೆದುಕೊಂಡವರ ಆರ್ತನಾದ, ಸ್ವಾರ್ಥ, ಸ್ಫಾರ್ಥ ಸಾಧಕರ ಕಿಡಿಗೇಡಿತನ, ಕೌಟುಂಬಿಕ ಕಲಹಗಳು, ರಾಜಕೀಯ ಹಗರಣಗಳು, ಧಾರ್ಮಿಕ ಮೌಢ್ಯ ಆಚರಣೆಗಳು, ಮಹಿಳೆಯರ ಮೇಲಿನ ದೌರ್ಜನ್ಯ ಮಕ್ಕಳ ಅಪರಹರಣ, ನಿರುದ್ಯೋಗ, ವರ್ತಕರ ಮೋಸ, ಉಳ್ಳವರ ಮೋಜು, ಬಡ ರೈತರ ಆತ್ಮಹತ್ಯೆ, ಅಧಿಕಾರಿಗಳ ಅಲಸ್ಯ, ಬುದ್ದಿ ಜೀವಿಗಳ ಅಭಿನಯ, ಮೋಜು, ಪಿಡುಗು ಇನ್ನಿತರ ಭಯಂಕರ ದೃಶ್ಯ ಕಾಣುತ್ತಿದ್ದೇವೆ. ಇವೆಲ್ಲ ಕಾರಣದಿಂದ ಕವಿಯಾದವನ್ನು ಬೆಳಗಾಗದಿರಲ್ಲಯ್ಯ ಭಗವಂತ ಎನ್ನುತ್ತಾನೆ. ಮಲಗಿದ್ದಾಗ ಮಾತ್ರ ನಿಶ್ಚಿಂತೆ ಎಂಬ ಕವಿಯ ಮಾತಿನಂತೆ ನಾನು ಸ ಶಾಶ್ವತ ನಿದ್ರೆಗಾಗಿ ಕಾಯುತ್ತಿರುವೆ ಎಂದು ನೋವಿನಿಂದಲೇ ತಿಳಿಸಿದರು.

ಡಾ.ಎಸ್.ದತ್ತೇಶ್ ಕುಮಾರ್ ಮಾನಸ ಶಿಕ್ಷಣ ಸಂಸ್ಥೆ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿದ್ದಾರೆ. ಬಲಿಷ್ಠ ಭಾರತ ನಿರ್ಮಾಣಕ್ಕೆ ಬೇಕಾದ ಪ್ರಜೆಗಳು ಇಲ್ಲಿ ತಯಾರಾಗುತ್ತಿದ್ದಾರೆ. ಗಾಂಧೀಜಿಯವರ ಕನಸು ನನಸಾಗುತ್ತಿದೆ. ಶೈಕ್ಷಣಿಕ ಪ್ರಗತಿ ಆಗುತ್ತಿದೆ. ಅಂತೆಯೇ ಯುವಕ, ಯುವತಿಯರು ಸ್ವಯಂ ಉದ್ಯೋಗವನ್ನು ಕಟ್ಟಿಕೊಳ್ಳಬೇಕು. ಇದ್ದರಿಂದ ಸ್ವಾಭಿಮಾನ ಜೀವನ ಸಿಗುತ್ತದೆ.
ಜಿ.ವೆಂಕಟರಾಮ್
> ಸೇವಾ ಭಾರತಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಾಮರಾಜನಗರ

ಮಾನಸ ಶಿಕ್ಷಣ ಸಂಸ್ಥೆಯಿಂದ ಮನೆ ಮನೆಗಳಲ್ಲಿ ಮಾನಸ ಜ್ಯೋತಿ ಉರಿಯುತ್ತಿದೆ. ಇಲ್ಲಿ ಕಲಿತ ಅನೇಕರು ದೇಶ ವಿದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಚಿನ್ನ ಮಾರಿ ಸ್ಥಾಪಿಸಿದ ಸಂಸ್ಥೆಯಲ್ಲಿ ಚಿನ್ನದಂತಹ ವಿದ್ಯಾರ್ಥಿಗಳು ಸೃಷ್ಟಿಯಾಗುತ್ತಿದ್ದಾರೆ. ಇವರಿಗೆ ಒಳ್ಳೆಯ ಭವಿಷ್ಯವಿದೆ.
> ಪ್ರೊ.ಎಸ್. ಶಿವರಾಜಪ್ಪ ಮೈಸೂರು ವಿವಿ ಗಾಂಧಿ ಅಧ್ಯಯನ ಸಂಸ್ಥೆ ವಿಶ್ರಾಂತ ನಿರ್ದೇಶಕ