ತೀರ್ಥಹಳ್ಳಿಯಲ್ಲಿ ಆಯೋಜಿಸಿದ್ದ ತಾಲೂಕು ರಸಗೊಬ್ಬರ ವಿತರಕರ ಸಭೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿದರು. ತಹಸೀಲ್ದಾರ್ ಎಸ್.ರಂಜಿತ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್ ಇದ್ದರು. 
ಜಿಲ್ಲೆ

ಗೊಬ್ಬರದ ಕೊರತೆಯಾಗದಂತೆ ಎಚ್ಚರ ವಹಿಸಿ

ಟಿ.ಎಚ್.ಸಂತೋಷ್ ಕುಮಾರ್

ತೀರ್ಥಹಳ್ಳಿ: ಕಾಳಸಂತೆಕೋರರಿಂದ ತಾಲೂಕಿನಲ್ಲಿ ರಸಗೊಬ್ಬರದ ಕೊರತೆ ಆಗದಂತೆ ವಿತರಕರು ಎಚ್ಚರವಹಿಸಬೇಕು. ಜತೆಗೆ ಸಾವಯವ ಗೊಬ್ಬರ ಬಳಕೆ ಬಗ್ಗೆಯೂ ರೈತರಲ್ಲಿ ಜಾಗೃತಿ ಮೂಡಿಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಪಟ್ಟಣದ ಗ್ರಾಮೀಣ ಸೌಧದಲ್ಲಿ ಗುರುವಾರ ತಾಲೂಕು ರಸಗೊಬ್ಬರ ವಿತರಕರ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನೀಡುವ ಸಬ್ಸಿಡಿ ಹಣದಲ್ಲಿ ರಾಜ್ಯಕ್ಕೆ ಸರಬರಾಜಾಗುವ ಕನಿಷ್ಠ ದರದ ರಸಗೊಬ್ಬರ ದಂಧೆಕೋರರಿಂದ ಕೇರಳ ರಾಜ್ಯಕ್ಕೆ ರವಾನೆಯಾಗುತ್ತಿದೆ. ಇದರಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ರಸಗೊಬ್ಬರದ ಕೊರತೆ ಉಂಟಾಗಿದೆ. ತೀರ್ಥಹಳ್ಳಿ ತಾಲೂಕಿನಿಂದ ಒಂದೇ ಒಂದು ಕಾಳು ರಸಗೊಬ್ಬರ ಹೊರಹೋಗದಂತೆ ಅಕಾರಿಗಳು ಹಾಗೂ ವಿತರಕರು ಎಚ್ಚರ ವಹಿಸಬೇಕು ಸೂಚಿಸಿದರು. ಅತಿಯಾದ ರಸಗೊಬ್ಬರ ಮತ್ತು ರಾಸಾಯನಿಕ ಬಳಕೆಯಿಂದಾಗಿ ಭೂಮಿಯ ಲವತ್ತತೆ ನಾಶವಾಗಿದೆ. ರಸಗೊಬ್ಬರದ ಬಳಕೆಯಿಂದ ಬೆಳೆಗಳಿಗೆ ರೋಗಗಳು ಸಹಜ. ಇದರ ನಿಯಂತ್ರಣಕ್ಕೆ ಕೀಟನಾಶಕ ಬಳಕೆಯೂ ಅನಿವಾರ್ಯವಾಗಿದೆ. ಹೀಗಾಗಿ ಮಣ್ಣಿನ ಸತ್ವ ಕಳೆದುಕೊಂಡಿರುವುದರಿಂದ ನಾವು ತಿನ್ನುವ ಆಹಾರ ವಿಷಯುಕ್ತವಾಗಿದೆ. ನಮ್ಮ ಹಿರಿಯರ ಕಾಲದಲ್ಲಿ ಕೊಟ್ಟಿಗೆಗಳೇ ಗೊಬ್ಬರದ ಕಾರ್ಖಾನೆಗಳಾಗಿದ್ದವು ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು. ಇತ್ತೀಚೆಗೆ ಇಲೆಕ್ಟ್ರಿಕ್ ವಾಹನಗಳು ಬಳಕೆಯಾಗುತ್ತಿರುವುದು ಪರಿಸರದ ದೃಷ್ಟಿಯಿಂದ ಉತ್ತಮ ಬೆಳವಣಿಗೆ. ಇದೇ ರೀತಿಯ ಬದಲಾವಣೆ ಸಾವಯವ ಗೊಬ್ಬರದ ಬಳಕೆಯಲ್ಲೂ ಆಗಬೇಕು. ರೈತರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ರಸಗೊಬ್ಬರ ವಿತರಕರಿಂದಲೂ ಆಗಬೇಕು ಎಂದರು. ತಹಸೀಲ್ದಾರ್ ಎಸ್.ರಂಜಿತ್ ಮಾತನಾಡಿ, ನೈಜ ರೈತರನ್ನು ಗುರುತಿಸಿ ಅವರು ಹೊಂದಿರುವ ಭೂಮಿ ವಿಸ್ತೀರ್ಣದ ಆಧಾರದಲ್ಲಿ ರಸಗೊಬ್ಬರ ವಿತರಣೆ ಮಾಡುವುದು ಸೂಕ್ತ. ಇದಕ್ಕೆ ರೈತರ ಗುರುತಿನ ಕಾರ್ಡ್(ಎ್ಐಡಿ) ಕಡ್ಡಾಯಗೊಳಿಸಿದರೆ ಗೊಬ್ಬರದ ದುರ್ಬಳಕೆ ತಡೆಯಲು ಸಹಕಾರಿ ಎಂದು ಹೇಳಿದರು.

ಸಸ್ಯಗಳಿಗೆ ನೇರವಾಗಿ ಅಗತ್ಯ ಪೊಷಕಾಂಶಗಳನ್ನು ಒದಗಿಸುವ ನ್ಯಾನೋ (ಲಿಕ್ವಿಡ್) ಯೂರಿಯಾ ಮತ್ತು ನ್ಯಾನೋ ಡಿಎಪಿ ಬಳಕೆ ಮಾಡುವುದು ಉತ್ತಮ. ಈ ಬಗ್ಗೆ ಗೊಬ್ಬರದ ವಿತರಕರು ರೈತರಿಗೆ ಮನವರಿಕೆ ಮಾಡಿಕೊಡುವುದು ಸೂಕ್ತ. ಪ್ರವೀಣ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ