ಸೋಮವಾರಪೇಟೆಯ ಬಸವೇಶ್ವರ ರಸ್ತೆಯ ನಿವಾಸಿ ಶಂಕರಪ್ಪ, ಶಾರದಾ ದಂಪತಿ ಗೊಂಬೆಗಳಿಗೆ ಪೂಜೆ ಸಲ್ಲಿಸುತ್ತಿರುವುದು. 
ಜಿಲ್ಲೆ

ಗೊಂಬೆಗಳನ್ನು ಇರಿಸಿ ನವರಾತ್ರಿ ಉತ್ಸವ ಆಚರಣೆ

ಸೋಮವಾರಪೇಟೆ:
ಪಟ್ಟಣದ ಬಸವೇಶ್ವರ ರಸ್ತೆ ನಿವಾಸಿ ಕಾಫಿ ಬೆಳೆಗಾರ ಎ.ಪಿ.ಶಂಕರಪ್ಪ ಎಂಬುವರ ಪತ್ನಿ ಶಾರದಾ ಅವರು 64 ವರ್ಷಗಳಿಂದ ವಿವಿಧ ಗೊಂಬೆಗಳನಿಟ್ಟು 9 ದಿನಗಳ ಕಾಲ ನವರಾತ್ರಿ ಉತ್ಸವವನ್ನು ವಿನೂತನವಾಗಿ ಆಚರಿಸುತ್ತಿದ್ದಾರೆ.

ಬೆಂಗಳೂರು ಮೂಲದ ಇವರು ಮದುವೆಯಾಗಿ ಸೋಮವಾರಪೇಟೆಗೆ ಬಂದ ವರುಷದಲ್ಲಿಯೇ ನವರಾತ್ರಿ ಹಬ್ಬವನ್ನು ಪ್ರಾರಂಭಿಸಿದ್ದರು. ಸಾಮಾನ್ಯವಾಗಿ ವಿವಿಧ ಗೊಂಬೆಗಳನ್ನಿರಿಸಿ ಪೂಜೆ ಮಾಡುವುದು ವಾಡಿಕೆ. ಆದರೆ, ಇಲ್ಲಿ ಶ್ರೀ ಶೈಲಾಪುತ್ರಿ ದೇವಿ, ಶ್ರೀ ಬ್ರಹ್ಮಚಾರಿಣಿ ದೇವಿ, ಶ್ರೀ ಕುಷ್ಮಾಂಡಾ ದೇವಿ, ಶ್ರೀ ಸ್ಕಂದ ಮಾತೆ, ಶ್ರೀ ಕಾತ್ಯಾಯಿನಿ ದೇವಿ, ಶ್ರೀ ಕಾಲಾರಾತ್ರಿ ದೇವಿ, ಶ್ರೀ ಮಹಾಗೌರಿ ದೇವಿ, ಶ್ರೀ ಸಿದ್ಧಿಧಾತ್ರಿ ದೇವಿ, ಶ್ರೀ ಆದಿ ಶಕ್ತಿ ದೇವಿಯ ಗೊಂಬೆಗಳನ್ನಿರಿಸಿ, ಆಭರಣಗಳಿಂದ ಸಿಂಗರಿಸಿ ಪೂಜೆ ನಡೆಸಲಾಗುತ್ತಿದೆ.

ಪ್ರತಿದಿನ ವಿವಿಧ ತಿಂಡಿಗಳನ್ನು ಮಾಡಿ, ಬೆಳಗ್ಗೆ ಮತ್ತು ಸಂಜೆ ಪೂಜೆ ಮತ್ತು ಧ್ಯಾನ ನಡೆಸಲಾಗುತ್ತಿದೆ. ಸುಮಂಗಲೆೆಯರನ್ನು ಕರೆದು ಫಲ ತಾಂಬೂಲ ನೀಡಲಾಗುತ್ತಿದೆ. ಕಳೆದ 60 ವರ್ಷಗಳ ಹಿಂದೆ ಇವರ ತಂದೆ ಕೊಡಿಸಿದ್ದ ಮರದಲ್ಲಿ ಕೆತ್ತನೆಯ ಗೌರಿ-ಗಣೇಶನ ಮೂರ್ತಿಗಳು ಇಂದಿಗೂ ಆಕರ್ಷಕವಾಗಿವೆ. ದೇವಾಲಯಗಳ ಭೇಟಿ ಸಂದರ್ಭ ವಿವಿಧ ರಾಜ್ಯಗಳಿಂದ ತಂದಿರುವ ಖಡ್ಗ ಸೇರಿದಂತೆ ವಿವಿಧ ಪರಿಕರಗಳನ್ನು ಇಟ್ಟು ಪೂಜಿಸಲಾಗುತ್ತಿದೆ. ಎಲ್ಲ ಗೊಂಬೆಗಳಿಗೂ ಹೊಸ ಸೀರೆಯನ್ನು ಉಡಿಸಿ ಅಲಂಕಾರ ಮಾಡಿರುವುದು ವಿಶೇಷವಾಗಿದೆ.