ನಾಗಮಂಗಲ: ತಾಲೂಕಿನ ಗೊಂಡೇನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 2024-25ನೇ ಸಾಲಿನ 15ನೇ ಹಣಕಾಸು ಯೋಜನೆಯ 56 ಲಕ್ಷ ರೂ. ಅನುದಾನದಲ್ಲಿ ಲಕ್ಷಾಂತರ ರೂ.ಗಳನ್ನು ಪಿಡಿಒ ಮತ್ತು ಅಧ್ಯಕ್ಷ ಜತೆಗೂಡಿ ದುರ್ಬಳಕೆ ಮಾಡಿಕೊಂಡಿದ್ದಾರೆಂದು ಆರೋಪಿಸಿ ಸದಸ್ಯರು ಸಂಬಂಧಿಸಿದ ದಾಖಲೆ ಬಿಡುಗಡೆಗೊಳಿಸಿ ಗ್ರಾಮ ಪಂಚಾಯಿತಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಅಕ್ರಮಗಳ ಕುರಿತಾದ ದಾಖಲೆಗಳನ್ನು ಬಿಡುಗಡೆಗೊಳಿಸಿ ಅಧ್ಯಕ್ಷ ಹಾಗೂ ಪಿಡಿಒ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಮಧು ಮಾತನಾಡಿ, ಕಳೆದ ಏಪ್ರಿಲ್ 24ರಿಂದ ಮೇ 1ರವರೆಗೆ ಕೇವಲ 15 ದಿನಗಳ ಅಂತರದಲ್ಲಿ ರೂ.15,71,528 ರೂ.ಗಳನ್ನು ಸೆಸ್ಕ್ ಬಿಲ್ ಪಾವತಿಗೆಂದು ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿದ್ದಾರೆ. ಆದರೆ ಇಷ್ಟು ದೊಡ್ಡ ಮೊತ್ತದ ಸೆಸ್ಕ್ ಬಿಲ್ ನಮ್ಮ ಪಂಚಾಯಿತಿಗೆ ಬಂದಿಲ್ಲ. ಈ ಬಗ್ಗೆ ಸೆಸ್ಕ್ ಕಚೇರಿಯಲ್ಲಿ ವಿಚಾರಿಸಲಾಗಿದ್ದು 2.48 ಲಕ್ಷ ರೂ.ಗಳನ್ನು ಮಾತ್ರ ಸೆಸ್ಕ್ ಬಿಲ್‌ಗೆ ಪಾವತಿಸಿದ್ದು, ಉಳಿದ ಸುಮಾರು 13 ಲಕ್ಷ ಹಣವನ್ನು ಪಿಡಿಒ ಮತ್ತು ಅಧ್ಯಕ್ಷ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ತಾಪಂ ಇಒ ಹಾಗೂ ಜಿಪಂ ಸಿಇಒ ಅವರಿಗೆ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ವಿಚಾರವಾಗಿ ಸಾಮಾನ್ಯ ಸಭೆಗಳಲ್ಲಿ ಪ್ರಶ್ನಿಸಿದರೆ ಅಧ್ಯಕ್ಷ ಉಡಾಫೆ ಉತ್ತರ ನೀಡುವ ಜತೆಗೆ ಮಾಹಿತಿ ನೀಡದೆ ಸಬೂಬು ಹೇಳಿಕೊಂಡು ಸಭೆಯನ್ನು ಮುಗಿಸುತ್ತಿದ್ದಾರೆ. ಗ್ರಾಪಂ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಿಗೂ ಈ ಹಣ ವಿನಿಯೋಗವಾಗಿಲ್ಲ. ಆದ್ದರಿಂದ ಸರ್ಕಾರದ ಲಕ್ಷಾಂತರ ರೂ. ದುರುಪಯೋಗವಾಗಿದ್ದು ಜನರಿಗೆ ಹಾಗೂ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ.
ಕೂಡಲೇ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸದಿದ್ದರೆ ಜಿಪಂ ಕಾರ್ಯಾಲಯದ ಮುಂದೆ ಸದಸ್ಯರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಪಂ.ಸದಸ್ಯರಾದ ಯೋಗೇಶ್, ನರಸಿಂಹಾಚಾರಿ, ರಂಗಣ್ಣ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು ಪಾಲ್ಗೊಂಡಿದ್ದರು.