ನಂದಗುಡಿ : ಕೋಲಾರ ಜಿಲ್ಲೆಯ ಕೆರೆಗಳಿಗೆ ಕೆಸಿ ವ್ಯಾಲಿ ನೀರು ಹರಿಸುವ ಯೋಜನೆ ನಂದಗುಡಿ ಹೋಬಳಿಯ ಗೇರಹಳ್ಳಿಗೆ ಶಾಪವಾಗಿದೆ. ತಾವರೆಕೆರೆಯ 151 ಎಕರೆ, ಬಾಣಮಾಕನಹಳ್ಳಿ 23 ಎಕರೆಯಲ್ಲಿರುವ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಆದರೆ, ಈ ಕೆರೆಗಳ ಹಿನ್ನೀರು ಗೇರಹಳ್ಳಿಯ ರೈತರ ಪ್ರಾಣ ಹಿಂಡುತ್ತಿದೆ!
ಗೇರಹಳ್ಳಿಯ ಅಂದಾಜು 35 ಎಕರೆ ಜಮೀನಿಗೆ ಹಿನ್ನೀರು ವ್ಯಾಪಿಸಿದೆ. ಜಮೀನಿನಲ್ಲಿರುವ ಗಿಡ, ಮರಗಳು ಒಣಗುತ್ತಿದ್ದರೆ, ಬೆಳೆದ ಸಲು ಕೈಗೆ ಬರದೆ ರೈತರು ಸಾಲದ ಸುಳಿಗೆ ಸಿಲುಕುವಂತಾಗಿದೆ. ಈ ವ್ಯಾಪ್ತಿಯಲ್ಲಿ ಅಲ್ಪಾವಧಿ ಬೆಳೆಗಳಲ್ಲದೆ, ದೀರ್ಘಾವಧಿ ಬೆಳೆಯಾಗಿ ಮಾವು ಬೆಳೆಯಲಾಗಿದೆ. ಆದರೆ, ಹಿನ್ನೀರು ಸುತ್ತುವರಿದಿರುವ ಪರಿಣಾಮ ಬೆಳೆ ತೆಗೆದುಕೊಳ್ಳಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗಂಗಾಪುರ ಸೇರಿ ಸುತ್ತಮುತ್ತಲ ರೈತರು ಅಲವತ್ತುಕೊಂಡಿದ್ದಾರೆ.
ಕಟ್ಟೆ ಕಟ್ಟದೆ ನೀರು ಹರಿಸುವಿಕೆ: ಅಂತರ್ಜಲ ವೃದ್ಧಿಸಲು ಕೆರೆಗೆ ಕೆಸಿ ವ್ಯಾಲಿ ನೀರು ಹರಿಸಲಾಗುತ್ತಿದೆ. ಆದರೆ, ಇದಕ್ಕೂ ಮುನ್ನ ಕೆರೆ ಸರ್ವೇ ಮಾಡಿಸಿ, ಅದರ ಸುತ್ತ ಸಮರ್ಪಕವಾಗಿ ಕಟ್ಟೆ ನಿರ್ಮಿಸಿದ್ದರೆ, ಹಿನ್ನೀರಿನ ಸಮಸ್ಯೆ ಇರುತ್ತಿರಲಿಲ್ಲ. ಈ ಬಗ್ಗೆ ತಾಲೂಕು ಆಡಳಿತ, ನೀರಾವರಿ ಇಲಾಖೆ ಕ್ರಮ ಕೈಗೊಳ್ಳದ ಕಾರಣ ನಮ್ಮ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವ ಪರಿಸ್ಥಿತಿ ಬಂದೊದಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ತಹಸೀಲ್ದಾರ್ ವಿರುದ್ಧ ಆರೋಪ: ಗೇರಹಳ್ಳಿ, ಗಂಗಾಪುರದಲ್ಲಿ 20ಕ್ಕೂ ಹೆಚ್ಚು ರೈತರ 35 ಎಕರೆಗೂ ಹೆಚ್ಚಿನ ಭೂಮಿ ಕೆಸಿ ವ್ಯಾಲಿ ಹಿನ್ನೀರಿನಿಂದ ಆವೃತವಾಗಿದೆ. ಈ ಸಮಸ್ಯೆ ಪರಿಹರಿಸುವಂತೆ ರಾಜ್ಯ ಕಂದಾಯ ಇಲಾಖೆ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗೆ ರೈತರು ಮನವಿ ಸಲ್ಲಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಡಿಸಿ, ಸ್ಥಳ ಪರಿಶೀಲಿಸುವಂತೆ ತಹಸೀಲ್ದಾರ್ ಗೆ ಸೂಚಿಸಿದ್ದಾರೆ. ಅದರಂತೆ, ಸ್ಥಳಕ್ಕೆ ಬರದೆ ತಹಸೀಲ್ದಾರ್ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಕೆಸಿ ವ್ಯಾಲಿ ನೀರನ್ನು ಕೆರೆಗೆ ಹರಿಸಿದ್ದರಿಂದ ಆದ ಅನುಕೂಲಕ್ಕಿಂತ ಹಿನ್ನೀರಿನಿಂದ ಆಗುತ್ತಿರುವ ಅನನುಕೂಲವೇ ಹೆಚ್ಚು. ನಮ್ಮ ಜಮೀನಿನಲ್ಲಿ ನೀರು ನಿಂತಿರುವುದರಿಂದ, ಅಲ್ಪಾವಧಿ ಬೆಳೆ ಬೆಳೆಯಲಾಗುತ್ತಿಲ್ಲ. ದೀರ್ಘಾವಧಿ ಸಲು ಪಡೆಯಲು ಆಗುತ್ತಿಲ್ಲ. ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಇದರಿಂದ ತಾಲೂಕು ಕಚೇರಿ ಎದುರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ಎನ್.ರಾಜೇಶ್, ಗಂಗಾಪುರ ರೈತ ಕೆಸಿ ವ್ಯಾಲಿ ಹಿನ್ನೀರು ರೈತರ ಜಮೀನಿಗೆ ಹರಿಯುತ್ತಿರುವ ವಿಷಯ ಗಮನಕ್ಕೆ ಬಂದಿಲ್ಲ. ಗ್ರಾಮ ಲೆಕ್ಕಾಧಿಕಾರಿ ಅವರನ್ನು ಸ್ಥಳಕ್ಕೆ ಕಳುಹಿಸಿ, ಪರಿಶೀಲಿಸಲಾಗುವುದು. ಅವರ ವರದಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ರಾಮಾಂಜಿನಪ್ಪ, ನಂದಗುಡಿ ಉಪತಹಸೀಲ್ದಾರ್