ಮದ್ದೂರು: ಮುಂಬರುವ ಚುನಾವಣೆಯಲ್ಲಿ ನಾನು ನಾಗಮಂಗಲ ಕ್ಷೇತ್ರದಿಂದ ಗೆದ್ದು ಶಾಸಕನಾಗುವುದು ಶತಸಿದ್ಧವಾಗಿದ್ದು, ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದರು.
ತಾಲೂಕಿನ ಕೊಪ್ಪದಲ್ಲಿ ಭಾನುವಾರ ಆಯೋಜಿಸಿದ್ದ ಎಲ್.ಆರ್.ಶಿವರಾಮೇಗೌಡ ಸ್ವಾಭಿಮಾನ ಪರ್ವ-2023ರ ಸಭೆ ಉದ್ಘಾಟಿಸಿ ಮಾತನಾಡಿ, ಈಗಾಗಲೇ ನನ್ನ ಹಣೆಬರಹದಲ್ಲಿ ಮುಂದಿನ ಚುನಾವಣೆಯಲ್ಲಿ ಶಾಸಕನಾಗುತ್ತೀಯಾ ಎಂದು ಬರೆಯಲಾಗಿದೆ. ಈ ಹಿನ್ನೆಲೆಯಲ್ಲಿ ನಾನು ಶಾಸಕನಾಗುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2008ರಿಂದ ಶಾಸಕ ಸ್ಥಾನದ ಚುನಾವಣೆಗೆ ಬಂದಿಲ್ಲ. 2008ರಲ್ಲಿ ಕಾಂಗ್ರೆಸ್‌ನಿಂದ ನಿಲ್ಲಲು ಪ್ರಯತ್ನ ಮಾಡಿದ್ದೆ. ಆಗ ಟಿಕೆಟ್ ಸಿಗದೆ ಹೋದಾಗ ಪಕ್ಷೇತರವಾಗಿ ಸ್ಪರ್ಧೆ ಮಾಡಲು ಒತ್ತಡ ಬಂದಿತ್ತು. ಆ ವೇಳೆ ಎಸ್.ಎಂ.ಕೃಷ್ಣ ಸೇರಿದಂತೆ ಹಿರಿಯರ ಸಲಹೆಯಂತೆ ಚುನಾವಣೆಗೆ ಸ್ಪರ್ಧಿಸದೆ ತಟಸ್ಥನಾದೆ ಎಂದರು.
ನಾಗಮಂಗಲದಲ್ಲಿ ಕಾಂಗ್ರೆಸ್ ಕಟ್ಟಿದೆ. ನಾನು ಮಾಡಿದ ಅಡುಗೆಯನ್ನು ಊಟ ಮಾಡಿದ್ದು ಸುರೇಶ್‌ಗೌಡ. ಆಗ ನನ್ನ ಬಿಟ್ಟು ಸುರೇಶ್‌ಗೌಡರಿಗೆ ಟಿಕೆಟ್ ಕೊಟ್ಟರು. ಆಗ ಚುನಾವಣೆಗೆ ನಿಲ್ಲಲು ಪ್ರಯತ್ನ ಮಾಡಿದ್ದರೆ ಸುರೇಶ್‌ಗೌಡ ಶಾಸಕರಾಗುತ್ತಿರಲ್ಲ ಎಂದು ಹೇಳಿದರು.
ರಾಜಕೀಯದಲ್ಲಿ ನಿರಂತರ ಮೋಸ ಮಾಡಿದರು. ನಾನು ಸುಮ್ಮನೆ ಕೂರಲಿಲ್ಲ. ಕಳೆದ 6 ತಿಂಗಳಿಂದ ಕ್ಷೇತ್ರದ ಎಲ್ಲ ಕಡೆ ಪ್ರವಾಸ ಮಾಡಿದ್ದೇನೆ. 25 ವರ್ಷದಿಂದ ಚುನಾವಣೆಯಿಂದ ಹೊರಗಿದ್ದೆ. ಈಗ ಪಕ್ಷೇತರವಾಗಿ ಸ್ಪರ್ಧೆ ಮಾಡಲು ತೀರ್ಮಾನಿಸಿದ್ದೇನೆ. ಕೊಪ್ಪ ಭಾಗದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ನಾನು ಶಾಸಕನಾಗಿ ಆಯ್ಕೆಯಾದರೆ ಕೊಪ್ಪದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಹಾಗೂ ವಾರಕ್ಕೆ ಒಂದು ಬಾರಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆದು ಈ ಭಾಗದ ಜನರು ಸರ್ಕಾರಿ ಕಚೇರಿಗಳಿಗೆ ಅಲೆಸುವುದನ್ನು ತಪ್ಪಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊಪ್ಪ ಹೋಬಳಿಯ ಮತದಾರರು ಚಲುವರಾಯಸ್ವಾಮಿ ಹಾಗೂ ಸುರೇಶ್‌ಗೌಡ ಅವರನ್ನು ಶಾಸಕರನ್ನಾಗಿ ನೋಡಿದ್ದೀರಿ, ಅವರಿಂದ ಕೊಪ್ಪ ಹೋಬಳಿ ಯಾವುದೇ ಅಭಿವೃದ್ಧಿ ಕಂಡಿಲ್ಲ. ಇದರಿಂದ ಕೊಪ್ಪ ಹೋಬಳಿ ಮತದಾರರು ಅತಂತ್ರರಾಗಿದ್ದಾರೆ ಎಂದರು.
ಜಿಲ್ಲೆಯ ಜೆಡಿಎಸ್ ಭದ್ರಕೋಟೆ ಅನ್ನೋದು ಕಳೆದ ಲೋಕಸಭಾ ಚುನಾವಣೆಯಲ್ಲಿ ಕೊಚ್ಚಿ ಹೋಯ್ತು. ಆಗ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರ ಮಗನನ್ನೂ ಮಂಡ್ಯ ಜನರು ಸೋಲಿಸಿದರು. ಸುಮಲತಾರ ಸ್ವಾಭಿಮಾನಕ್ಕೆ ಮತ ಹಾಕಿದ್ದೀರಿ. ನಾನು ಈ ಹಿಂದೆಯೂ ಎರಡು ಬಾರಿ ಪಕ್ಷೇತರನಾಗಿ ಗೆದ್ದಿರೋ ಅನುಭವ ಇದೆ. ಈಗಲೂ ಯಾರ ಹಂಗಿಲ್ಲದೆ ಸ್ವತಂತ್ರವಾಗಿ ನಿಲ್ಲುತ್ತೇನೆ ಎಂದು ತಿಳಿಸಿದರು.
ಪುತ್ರ ಚೇತನ್‌ಗೌಡ ಮಾತನಾಡಿ, ತಂದೆ ಎಲ್.ಆರ್.ಶಿವರಾಮೇಗೌಡ 40 ವರ್ಷಗಳಿಂದ ಸಾರ್ವಜನಿಕರ ಸೇವೆಯಲ್ಲಿದ್ದಾರೆ. 2008ರಿಂದ ಕೊಪ್ಪ ಹೋಬಳಿ ನಾಗಮಂಗಲ ಕ್ಷೇತ್ರಕ್ಕೆ ಸೇರಿದೆ. ಇದುವರೆಗೆ ಕೊಪ್ಪ ಹೋಬಳಿ ಅಭಿವೃದ್ಧಿಯೇ ಆಗಿಲ್ಲ. ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳು ಇವೆ. ಕ್ಷೇತ್ರದ ಅಭಿವೃದ್ಧಿ ಆಗಬೇಕಿದೆ ಎಂದು ಹೇಳಿದರು.
ಒಂದು ಆಡಿಯೋ ಇಟ್ಟುಕೊಂಡು ಎಲ್.ಆರ್.ಶಿವರಾಮೇಗೌಡರನ್ನು ಜೆಡಿಎಸ್ ಪಕ್ಷದಿಂದ ಅಮಾನತು ಮಾಡಲಾಗಿದೆ. 2008ರಲ್ಲಿ ಜೆಡಿಎಸ್‌ಗೆ ಬೇಕಿತ್ತು. ಇವಾಗ ಅವರಿಗೆ ಬೇಡವಾಗಿದ್ದಾರೆ. ಈ ಬಾರಿ ತಂದೆಯನ್ನು ಪಕ್ಷೇತರರಾಗಿ ಗೆಲ್ಲಿಸಿ. ಮೋಸ ಮಾಡಿದವರಿಗೆ ತಕ್ಕಪಾಠ ಕಲಿಸಿ ಎಂದರು.