ಜಿಲ್ಲೆ

ಗೆಲುವಿಗಾಗಿ ಬಸಪ್ಪನ ಆಶೀರ್ವಾದ ಬೇಡಿದ ಮಾಜಿ ಸಚಿವ

ಕೆ.ಎಂ.ದೊಡ್ಡಿ: ಮಂಡ್ಯ ಜಿಲ್ಲೆ ಮಳವಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರು ಮಂಗಳವಾರ ಚಿಕ್ಕರಸಿನಕೆರೆ ಶ್ರೀ ಕಾಲಭೈರವೇಶ್ವರಸ್ವಾಮಿಯ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರಲ್ಲದೆ, ಇಲ್ಲಿನ ಪ್ರಸಿದ್ಧ ‘ಬಸಪ್ಪ’ನ ಆಶೀರ್ವಾದ ಪಡೆದರು.

‘ಈ ಬಾರಿಯ ಚುನಾವಣೆಯಲ್ಲಿ ನಾನು ಜಯಗಳಿಸುವುದು ಖಚಿತವಾದರೆ ನಿನ್ನ ‘ಪಾದ’ವನ್ನು ನೀಡುವಂತೆ ಬಸಪ್ಪನ ಮುಂದೆ ಕೈಚಾಚಿ ಬೇಡಿದರು. ಬಸಪ್ಪ ಕೆಲಕಾಲ ತನ್ನ ಪಾದವನ್ನು ನೀಡಲಿಲ್ಲ. ಸ್ವಲ್ಪ ಸಮಯದ ನಂತರ ಪಿ.ಎಂ.ನರೇಂದ್ರಸ್ವಾಮಿ ಅವರು ಹರಕೆ ಕಟ್ಟಿಕೊಂಡ ಮೇಲೆ ಅವರಿಗೆ ‘ಪಾದ’ ನೀಡಿ ಆಶೀರ್ವದಿಸಿತು.

ಬಳಿಕ ಕ್ಷೇತ್ರಕ್ಕೆ ಆಗಮಿಸಿದ್ದ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಪ್ರಸನ್ನಾನಂದನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ ಹಾಗೂ ಕನಕ ಗುರು ಪೀಠದ ಕೆ.ಆರ್.ನಗರ ಶಾಖೆಯ ಶಿವಾನಂದಪುರಿ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.