ಜಿಲ್ಲೆ

ಗೆಡ್ಡೆ-ಗೆಣಸಿನಿಂದ ರೋಗನಿರೋಧಕ ಶಕ್ತಿ ಹೆಚ್ಚಳ

reportermys

ಮೈಸೂರು: ನಮ್ಮ ಆಹಾರದ ಬಟ್ಟಲಿನಿಂದ ಗೆಡ್ಡೆ-ಗೆಣಸುಗಳು ಮಾಯವಾಗಿವೆ. ಇವುಗಳ ನಿರಂತರ ಬಳಕೆಯಿಂದ ಶರೀರಕ್ಕೆ ರೋಗನಿರೋಧಕ ಶಕ್ತಿ ಬರುತ್ತದೆ. ಆರೋಗ್ಯದ ಜೀವನಕ್ಕೆ ಗೆಡ್ಡೆ ಗೆಣಸುಗಳ ಬಳಕೆ ಪೂರಕ ಎಂದು ಜೈವಿಕ್ ಕೃಷಿಕ್ ಸೊಸೈಟಿಯ ಗೌರವಾಧ್ಯಕ್ಷ ಡಾ.ರಾಮಕೃಷ್ಣಪ್ಪ ಅಭಿಪ್ರಾಯಪಟ್ಟರು.
ಸಹಜ ಸಮೃದ್ಧ, ಸ್ವಿಸ್ ಏಡ್ ಹಾಗೂ ಸಹಜ ಸೀಡ್ಸ್‌ನಿಂದ ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಭಾನುವಾರ ಆಯೋಜಿಸಿದ್ದ ಗೆಡ್ಡೆಗೆಣಸು ಮೇಳದ ಅಂಗವಾಗಿ ಆಯೋಜಿಸಿದ್ದ ಗೆಡ್ಡೆ ಗೆಣಸು ಅಡುಗೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಕೃಷಿ ಕ್ಷೇತ್ರದ ವಿಸ್ಮಯಗಳು ಎಂದು ಪರಿಗಣಿಸಿದ ಗೆಡ್ಡೆ ಗೆಣಸುಗಳು ಪೋಷಕಾಂಶದ ಆಗರವಾಗಿವೆ. ಇಷ್ಟೊಂದು ಬಗೆಯ ಕಂದಮೂಲಗಳು ಇರುವುದು ಹೆಚ್ಚಿನವರಿಗೆ ಗೊತ್ತೇ ಇಲ್ಲ. ಇಂಥ ಮೇಳಗಳನ್ನು ಆಯೋಜಿಸುವ ಮೂಲಕ, ಗ್ರಾಹಕರಲ್ಲಿ ಶುದ್ಧ ಆಹಾರದ ಕುರಿತ ಜಾಗೃತಿಯನ್ನು ಮೂಡಿಸುವುದು ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಗೆಡ್ಡೆ ಗೆಣಸು ಅಡುಗೆ ಸ್ಪರ್ಧೆ ತೀರ್ಪುಗಾರರಾಗಿದ್ದ ಸಾವಯವ ಕೃಷಿಕ ಶ್ರೀವತ್ಸ ಮಾತನಾಡಿ, ಗ್ರಾಹಕರು ಕಂದಮೂಲಗಳನ್ನು ತಮ್ಮ ದಿನನಿತ್ಯದ ಅಡುಗೆಗಳಲ್ಲಿ ಬಳಸಬೇಕು. ಅವುಗಳ ಪಾಕ ವಿಧಾನ ಪರಿಚಯ ಮಾಡಬೇಕು. ಇವತ್ತಿನ ಅಡುಗೆ ಸ್ಪರ್ಧೆಯಲ್ಲಿ ವಿವಿಧ ಬಗೆಯ ಹೊಸ ತರಹದ ಅಡುಗೆಗಳನ್ನು ಪರಿಚಯಿಸಿದ್ದು ಸಂತಸದ ಸಂಗತಿ ಎಂದು ಪ್ರಶಂಸಿಸಿದರು.
ಮತ್ತೊಬ್ಬ ತೀರ್ಪುಗಾರ ಸಂದೀಪ್ ಮಂಜುನಾಥ್ ಮಾತನಾಡಿ, ಆರ್ಯುವೇದದಲ್ಲಿ ಗೆಡ್ಡೆ ಗೆಣಸುಗಳಿಗೆ ವಿಶೇಷ ಮಹತ್ವವಿದೆ. ಗೆಡ್ಡೆ ಗೆಣಸು ಆಹಾರವೂ ಹೌದು, ಔಷಧವೂ ಹೌದು. ಅವುಗಳನ್ನು ದಿನ ನಿತ್ಯದ ಬಳಕೆಗೆ ತರಬೇಕಿದೆ ಎಂದರು.
ತೀರ್ಪುಗಾರರಾದ ಅನಿತಾ, ಮಂಗಳಾ ಪ್ರಕಾಶ್, ಸೀಮಾ ಪ್ರಸಾದ್ ಮತ್ತು ಸಹಜ ಸಮೃದ್ಧದ ಕೋಮಲ್ ಕುಮಾರ್ ಇದ್ದರು.
ಪರ್ಪಲ್ ಯಾಮ್ ಹೋಳಿಗೆ, ಸಿಹಿ ಉಂಡೆ, ಸೂಪ್, ಇಡ್ಲಿ, ಕಡಬು ಮತ್ತು ಜ್ಯೂಸ್, ಬೀಟ್ರೂಟ್ ಮೂಲಂಗಿ ಪರೋಟ, ಮಿಕ್ಸಡ್ ಯಾಮ್ ಸಲಾಡ್, ಬೀಟ್ರೂಟ್ ಮತ್ತು ಸಿಹಿ ಗೆಣಸಿನ ಪಾನ್, ಮಾವಿನ ಶುಂಠಿ ಚಟ್ನಿ, ಸಿಹಿ ಗೆಣಸಿನ ಚಕ್ಕುಲಿ, ಹೋಳಿಗೆ, ಹರಿಶಿಣ ಚಟ್ನಿ ಸೇರಿದಂತೆ ಹಲವಾರು ಬಗೆಯ ವೈವಿಧ್ಯಮಯ ರುಚಿಕರ ತಿಂಡಿ ತಿನಿಸುಗಳನ್ನು ಸ್ಪರ್ಧೆಗೆ ತರಲಾಗಿತ್ತು. ದಕ್ಷಿಣ ಅಮೇರಿಕಾ ಮೂಲದ ಯಾಕೋನ್ ಬೀನ್ಸ್‌ನಿಂದ ಮಾಡಿದ ಪಾಯಸ ತೀರ್ಪಗಾರರ ಮೆಚ್ಚುಗೆಗೆ ಪಾತ್ರವಾಯಿತು.
ಗೆಡ್ಡೆ ಗೆಣಸು ಅಡುಗೆ ಸ್ಪರ್ಧೆಯಲ್ಲಿ ಎಂ.ಎಸ್. ಹರ್ಷಿತಾ (ಪ್ರಥಮ), ಸಾವಿತ್ರಿ ಶ್ರೀಹರಿ (ದ್ವಿತೀಯ) ಹಾಗೂ ಶ್ರೀದೇವಿ ಪಿ.ಹೆಗಡೆ (ತೃತೀಯ) ಬಹುಮಾನ ಪಡೆದರು. ಅಂಬಿಕಾ, ಜಯಲಕ್ಷೀ, ಸಾವಿತ್ರಿ ಮತ್ತು ಮಾಯಾದೇವಿ ಸಮಾಧಾನಕರ ಬಹುಮಾನ ಪಡೆದರು.