ಬೆಳಗಾವಿ: ಆದಿ ಬಣಜಿಗ ಸಮಾಜಕ್ಕೆ ಕರ್ನಾಟಕ ಸರ್ಕಾರದ ಜಾತಿ ಗೆಜೆಟ್‌ನಲ್ಲಿ ಸೇರಿಸಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಆದಿ ಬಣಜಗ ಯುವ ವೇದಿಕೆ ವತಿಯಿಂದ ಇಲ್ಲಿನ ಸುವರ್ಣ ಗಾರ್ಡ್‌ನ್‌ನಲ್ಲಿ ಗುರುವಾರ ಪ್ರತಿಭಟಿಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ವೀರಶೈವ ಲಿಂಗಾಯತ ಉಪಜಾತಿಗಳಲ್ಲಿ ವೀರಶೈವ ಆದಿ ಬಣಜಿಗ ಜಾತಿಯನ್ನು ಗೆಜೆಟ್‌ನಲ್ಲಿ ಸೇರ್ಪಡೆ ಮಾಡಿ (ಪ್ರವರ್ಗ 3ಬಿ)ಗೆ ಶೇ. 5ರಷ್ಟು ಮೀಸಲಾತಿ ನಿಗದಿಪಡಿಸಿ ಆದೇಶ ಹೊರಡಿಸಿತ್ತು. ಆ ಆದೇಶವನ್ನು ಹಿಂಪಡೆದು ವೀರಶೈವ ಆದಿ ಬಣಜಿಗ ಜಾತಿಯನ್ನು ಜಾತಿ ಪಟ್ಟಿಯಿಂದ ಕೈ ಬಿಟ್ಟಿದ್ದರಿಂದ ಸಮಾಜಕ್ಕೆ ಅನ್ಯಾಯವಾಗಿದೆ. ಅದನ್ನು ಕೂಡಲೇ ಸರಿಪಡಿಸುವಂತೆ ಒತ್ತಾಯಿಸಿದರು.
ಎಸ್.ಸಿದ್ದಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿನ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಆದಿ ಬಣಜಿಗ ಜನಾಂಗವನ್ನು (ಪ್ರವರ್ಗ 2ಎ) ಮೀಸಲಾತಿಯಡಿ ಹಿಂದುಳಿದ ವರ್ಗಕ್ಕೆ ಸೇರಿಸಬಹುದು ಎಂದು ಶಿಫಾರಸ್ಸು ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ 2015ರಲ್ಲಿ ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿ, ಹಿಂದುಳಿದ ಆಯೋಗವು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಇದನ್ನು ಪರಿಶೀಲಿಸಿ ಸರ್ಕಾರ ಶೀಘ್ರವೇ ಆದಿ ಬನಜಿಗ ಜಾತಿ ಪರಿಗಣಿಸಿ, ಸರ್ಕಾರದ ಗೆಜೆಟ್ ಹಾಗೂ ಪ್ರವರ್ಗ 2ಎ ನಲ್ಲಿ ಸೇರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ವೇದಿಕೆ ಗೌರವಾಧ್ಯಕ್ಷ ಸುರೇಶ ಗಚ್ಚಿನಕಟ್ಟಿ, ಶಾಸಕ ದೇವಾನಂದ ಚವ್ಹಾಣ, ಸಿದ್ದು ಸವದಿ, ಮಾಜಿ ಶಾಸಕಿ ಸೀಮಾ ಮಸೂತಿ, ಸದಾಶಿವ ಕಾರಡಗಿ, ಶಂಕರಗೌಡ ಪಾಟೀಲ, ರಾಜಣ್ಣ ಜೊರವಿ, ಶಿವಾನಂದ ಡಂಗಿ, ರಾಜು ದೇವಪೂಜೆ, ಮಾಹಾಂತೇಶ ಚಿಂಚಲಿ, ಸಂಜಯ ಹಣಗೋಜಿ, ಶರಣು ಮಾವೂರ, ಗುರು ನಿಂಬಾಳ ಇತರರು ಇದ್ದರು.
ನಿವೇಶನ ಹಾಗೂ ಮನೆ ಮಂಜೂರು ಮಾಡುವಂತೆ ಆಗ್ರಹಿಸಿ ಶ್ರೀದುರ್ಗಾ ಮಹಿಳಾ ವಿವಿಧೋದ್ದೇಶಗಳ ಸಂಘದ ವತಿಯಿಂದ ಪ್ರತಿಭಟಿಸಲಾಯಿತು. ಸಂಘದ ಸದಸ್ಯರು ಮಾತನಾಡಿ, ತಾವು ಅತಿ ಬಡವರಿದ್ದು ತಮಗೆ ಬರುವ ಸಂಬಳದಲ್ಲಿ ಮನೆ ಬಾಡಿಗೆ, ವಿದ್ಯುತ್ ಬಿಲ್, ಮಕ್ಕಳ ಶಿಕ್ಷಣ ವೆಚ್ಚ, ಆರೋಗ್ಯ ಖರ್ಚು ಸೇರಿದಂತೆ ಇತರೆ ಖರ್ಚು-ವೆಚ್ಚಗಳಿಗೆ ಸಾಕಾಗುವುದಿಲ್ಲ. ಸ್ವಂತ ನಿವೇಶನವೂ ಇಲ್ಲ. ಆದ್ದರಿಂದ ಮನೆ ನಿವೇಶನ ಕಲ್ಪಿಸಿಕೊಡಬೇಕೆಂದು ಮನವಿ ಮಾಡಿದರು. ಸುರೇಖಾ ಅರಳಿ, ಸುಶೀಲಾ ಅರಳಿಕಟ್ಟಿ, ಮಹಾದೇವಿ ಕನಬರ್ಗಿ, ಅನಿತಾ ಕುರಿ, ಪೂಜಾ ಠಾಕೂರ್, ಗೌರವ ಕಟ್ಟನ ಬಾವಿ, ರುದ್ರವ್ವ ಭಜಂತ್ರಿ, ರೇಣುಕಾ ಜುಮನಾಳ, ರಾಜೇಶ್ವರಿ ಕುರಿ, ಅರ್ಚನಾ ಮೋರೆ, ಶಾಂತ ವರದ, ಮಲ್ಲವ್ವ ನಾರಿ ಇದ್ದರು.