ಜಿಲ್ಲೆ

ಗೆಜೆಟೆಡ್ ಪ್ರೊಬೆಷನರ್ಸ್ ಮರು ಸ್ಪರ್ಧಾತ್ಮಕ ಪರೀಕ್ಷೆ 29ಕ್ಕೆ

ಚಿತ್ರದುರ್ಗ: ಕರ್ನಾಟಕ ಲೋಕಸೇವಾ ಆಯೋಗದಿಂದ ಗೆಜೆಟೆಡ್ ಪೊಬೆಷನರ್ಸ್ 384 ಹುದ್ದೆಗಳ ನೇಮಕಕ್ಕೆ ಪೂರ್ವಭಾವಿ ಮರು ಪರೀಕ್ಷೆ ಡಿ.29ರಂದು ನಡೆಯಲಿದೆ ಎಂದು ಡಿಸಿ ಟಿ. ವೆಂಕಟೇಶ್ ಹೇಳಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಸಿದ್ಧತಾಸಭೆಯಲ್ಲಿ ಮಾತನಾಡಿ, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ವ್ಯವಸ್ಥಿತವಾಗಿ ಪರೀಕ್ಷೆಯ ಕಾರ್ಯ ನಿರ್ವಹಿಸಬೇಕು. ಇದರ ನಿರ್ವಹಣೆ ಅತ್ಯಂತ ಸೂಕ್ಷ್ಮವಾಗಿದ್ದು, ಅಭ್ಯರ್ಥಿಗಳ ಭವಿಷ್ಯ ಅಡಗಿದೆ ಎಂದರು.

ಅಕ್ರಮಗಳಿಗೆ ಅವಕಾಶ ಮಾಡಿಕೊಡದಂತೆ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗಬಾರದು. ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಹಾಗೂ ಒಎಂಆರ್ ಬಂಡಲ್‌ಗಳನ್ನು ಕೊಂಡೊಯ್ಯುವ ಮಾರ್ಗಾಧಿಕಾರಿಗಳು ಸರಿಯಾದ ಸಮಯಕ್ಕೆ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಪಡೆದು ಪರೀಕ್ಷಾ ಕೇಂದ್ರಗಳಿಗೆ ತಲುಪಿಸಬೇಕು. ಪರೀಕ್ಷೆ ಮುಗಿದ ನಂತರ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಒಎಂಆರ್ ಬಂಡಲ್‌ಗಳನ್ನು ಅಂಚೆ ಮೂಲಕ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕಳುಹಿಸಿಕೊಡಬೇಕು ಎಂದರು.

ಜಾಮರ್ ಅಳವಡಿಕೆ: ಪರೀಕ್ಷಾ ಅಕ್ರಮಗಳ ತಡೆಗೆ ಮೊಬೈಲ್ ಬ್ಲೂಟೂತ್ ಮತ್ತು ಇತರೆ ಆಧುನಿಕ ಸಂವಹನ ಉಪಕರಣಗಳ ಬಳಕೆ ತಡೆಗೆ ಜಾಮರ್, ಪ್ರತಿ ಕೊಠಡಿಯಲ್ಲಿ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗುವುದು. ಫೇಸ್ ರೆಕಗ್ನೈಸೇಷನ್, ಬಯೋಮೆಟ್ರಿಕ್ ಹಾಜರಾತಿಯನ್ನು ಆಯೋಗದ ಸಿಬ್ಬಂದಿ ಕೈಗೊಳ್ಳುವರು. ಅಭ್ಯರ್ಥಿಗಳನ್ನು ಪೂರ್ಣ ಪ್ರಮಾಣದಲ್ಲಿ ತಪಾಸಣೆಗೆ ಒಳಪಡಿಸಬೇಕೆಂದು ಡಿಸಿ ಹೇಳಿದರು.

ಮರು ಪರೀಕ್ಷೆ ಪ್ರವೇಶ ಪತ್ರ: ಈ ಹುದ್ದೆಗಳಿಗೆ ಕಳೆದ ಆಗಸ್ಟ್27 ರಂದು ಪೂರ್ವಭಾವಿ ಪರೀಕ್ಷೆ ನಡೆಸಲಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುತ್ತಿದೆ. ಅಭ್ಯರ್ಥಿಗಳು ಹೊಸದಾಗಿ ಮರು ಪರೀಕ್ಷೆ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ನಮೂದಿಸಿರುವ ಪರೀಕ್ಷಾ ಕೇಂದ್ರಗಳಿಗೆ ಹಾಜರಾಗ ಬೇಕು ಎಂದರು.

ಪರೀಕ್ಷಾ ಕೇಂದ್ರಗಳ ಸಮೀಪ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತದೆ ಎಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

25 ಪರೀಕ್ಷಾ ಕೇಂದ್ರ, 8170 ಅಭ್ಯರ್ಥಿಗಳು: 29ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಪತ್ರಿಕೆ-1 ಹಾಗೂ ಮಧ್ಯಾಹ್ನ 2ರಿಂದ ಸಂಜೆ 4 ರವರೆಗೆ ಪತ್ರಿಕೆ-2ರ ಪರೀಕ್ಷೆ ನಡೆಯಲಿದೆ. ನಗರದಲ್ಲಿ 25 ಪರೀಕ್ಷಾ ಕೇಂದ್ರಗಳು ಹಾಗೂ 8,170 ಅಭ್ಯರ್ಥಿಗಳಿದ್ದಾರೆ. 155 ಅಂಗವಿಕಲ ಅಭ್ಯರ್ಥಿಗಳಿದ್ದಾರೆ. ನಾಲ್ವರು ಅಂಧ ವಿದ್ಯಾರ್ಥಿಗಳಿಗೆ ಸ್ಕ್ರೈಬ್ ಸೌಲಭ್ಯ ಒದಗಿಸಲಾಗುತ್ತದೆ ಎಂದು ಡಿಡಿಪಿಐ ಎಂ.ಆರ್. ಮಂಜುನಾಥ ತಿಳಿಸಿದರು.

ಜಿಪಂ ಸಿಇಒ ಎಸ್.ಜೆ. ಸೋಮಶೇಖರ್, ಜಿಲ್ಲಾ ಖಜಾನಾಧಿಕಾರಿ ರಮೇಶ್ ಅರೆಮಲ್ಲಾಪುರ ಮತ್ತಿತರ ಅಧಿಕಾರಿಗಳು ಇದ್ದರು.