ಜಿಲ್ಲೆ

ಗೃಹಲಕ್ಷ್ಮೀಗೆ ಸರ್ವರ್ ಸಂಕಷ್ಟ; ಗ್ರಾಮ ಒನ್ ಕೇಂದ್ರಗಳಲ್ಲಿ ಸುಲಿಗೆ

server problem in gruhalakshmi application at gramone, karnataka one

ರವಿಭಾರತಿ ಗೋಸಾವಿ ಬೆಳಗಾವಿ

ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮೀ ಯೋಜನೆಗೆ ಫಲಾನುಭವಿಗಳಾಗಲು ಮಹಿಳೆಯರು ಅರ್ಜಿ ಸಲ್ಲಿಕೆಗೆ ಮುಗಿಬೀಳುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಸೈಬರ್ ಕೇಂದ್ರಗಳ ಸಿಬ್ಬಂದಿ ಯಜಮಾನಿಗಳಿಂದ ಹಣ ಸುಲಿಗೆ ಮಾಡುತ್ತಿದ್ದಾರೆ.

ಜಿಲ್ಲೆಯಲ್ಲಿ ಯೋಜನೆಗೆ ಅರ್ಹರಾಗಿರುವ 14 ಲಕ್ಷಕ್ಕೂ ಅಧಿಕ ಕುಟುಂಬಗಳ ಯಜಮಾನಿಯರಿದ್ದು, ಯೋಜನೆಯ ಅರ್ಜಿ ಸಲ್ಲಿಕೆಗೆ ಜಿಲ್ಲೆಯ ಎಲ್ಲ ಗ್ರಾಪಂಗಳ ವ್ಯಾಪ್ತಿಯಲ್ಲಿ ಗ್ರಾಮ ಒನ್ ಕೇಂದ್ರ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಬಾಪೂಜಿ ಸೇವಾ ಕೇಂದ್ರ, ಬೆಳಗಾವಿ ಮಹಾನಗರ ಹಾಗೂ ಇತರ ನಗರ ಸಭೆಗಳಲ್ಲಿ ಕರ್ನಾಟಕ ಒನ್ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರತಿ ಕೇಂದ್ರಕ್ಕೂ ದಿನವೂ ನೂರಾರು ಮಹಿಳೆಯರು ಆಗಮಿಸುತ್ತಿದ್ದಾರೆ. ಅರ್ಜಿ ಸಲ್ಲಿಸಲು ಮಹಿಳೆಯರ ನಡುವೆ ಇನ್ನಿಲ್ಲದ ಪೈಪೋಟಿ ನಡೆಯುತ್ತಿದ್ದು, ಸರ್ವರ್ ಸಮಸ್ಯೆಯಿಂದ ದಿನವೀಡಿ ಮಳೆಯಲ್ಲೇ ಕಾಯುವ ಸ್ಥಿತಿ ಬಂದೊದಗಿದೆ.

ಪ್ರತಿ ಕೇಂದ್ರಕ್ಕೆ ದಿನವೊಂದಕ್ಕೆ 60 ಅರ್ಜಿ ಸ್ವೀಕಾರದ ಗುರಿ ನಿಗದಿಪಡಿಸಲಾಗಿದ್ದು, ಸಂಭವನೀಯ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಅರ್ಜಿ ಸಲ್ಲಿಕೆ ಕೇಂದ್ರ ಮತ್ತು ದಿನ ನಿಗದಿಪಡಿಸಿ ಸಂದೇಶ ಕಳುಹಿಸಲಾಗುತ್ತಿದೆ. ಅದನ್ನು ಆಧರಿಸಿ ಸಾವಿರಾರು ಜನರಿಗೆ ಅರ್ಜಿ ಸಲ್ಲಿಕೆಗೆ ಸೂಚನೆ ಬರುತ್ತಿದ್ದು ಸೇವಾ ಕೇಂದ್ರಗಳಿಗೆ ತೆರಳಿದರೆ ಅಲ್ಲಿ ಸರ್ವರ್ ಸಮಸ್ಯೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಆದರೆ, ‘ಕಳೆದ ಮೂರ‌್ನಾಲ್ಕು ದಿನಗಳ ಹಿಂದೆ ಸರ್ವಸ್ ಸಮಸ್ಯೆ ಇತ್ತು. ಅದನ್ನು ಸರ್ಕಾರ ಸರಿಪಡಿಸಿದೆ. ಇದೀಗ ಸಾಕಷ್ಟು ಅರ್ಜಿ ಸಲ್ಲಿಕೆಯಾಗುತ್ತಿವೆ’ ಎಂದು ಜಿಲ್ಲಾಡಳಿತ ಹೇಳುತ್ತಿದ್ದರೂ, ಕೇಂದ್ರಗಳ ಸಿಬ್ಬಂದಿ ಮಾತ್ರ ಅರ್ಜಿ ಸಲ್ಲಿಕೆಗೆ ಬಂದ ಮಹಿಳೆಯರಿಗೆ ಸರ್ವರ್ ಸಮಸ್ಯೆ ಇದೆ ಎಂದು ದಿನವಿಡೀ ಕಾಯುಸುವುದು ಬಿಟ್ಟಿಲ್ಲ. ಹೀಗಾಗಿ, ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರ ಹಾಗೂ ಕರ್ನಾಟಕ ಒನ್ ಸಿಬ್ಬಂದಿ ಮೇಲೆ ಅನುಮಾನ ದಟ್ಟವಾಗಿದೆ.

ಬೆಳಗಾವಿ ಒನ್ ಕೇಂದ್ರದಲ್ಲಿ ಅರ್ಜಿ ಸಲ್ಲಿಕೆಗೆ ಮುಗಿಬಿದ್ದಿರುವ ಮಹಿಳೆಯರು

ಪ್ರತಿ ಕೇಂದ್ರದಿಂದ ದಿನವೂ ನೂರಾರು ಮಹಿಳೆಯರು ಅರ್ಜಿಸಲು ಸಲ್ಲಿಸಲು ಸಾಧ್ಯವಾಗದೆ ಇದ್ದುದರಿಂದ ನಿರಾಸೆಯಿಂದ ವಾಪಸ್ಸಾಗುವುದು ಸಾಮಾನ್ಯವಾಗಿದೆ. ತಮ್ಮ ಸರತಿಗಾಗಿ ಮಳೆಯಲಿ ದಿನವಿಡೀ ಕಾಯುವವರಿಗೆ ಮಣೆಹಾಕದ ಸಿಬ್ಬಂದಿಯು, ತಮ್ಮ ಜೇಬು ಬಿಸಿ ಮಾಡುವವರಿಗೇ ಆದ್ಯತೆ ನೀಡಿ, 50, 100-200 ರೂ.ವರೆಗೆ ಸುಲಿಗೆ ನಡೆಸುತ್ತಿರುವುದು ಕಂಡುಬರುತ್ತಿದೆ.
ಈ ಬಗ್ಗೆ ಪತ್ರಿಕೆಗೆ ಪ್ರತಿಕ್ರಿಯಿಸಿದ ವಡಗಾವಿ ನಿವಾಸಿ ಉಜ್ವಲಾ ಪಾಟೀಲ. ‘ಜು.20ರಂದೇ ಅರ್ಜಿ ಸಲ್ಲಿಸಲು ದಿನ ನಿಗದಿಪಡಿಸಿ ಸಂದೇಶ ಬಂದಿದೆ. ಕೂಲಿ ಕೆಲಸ ಅಷ್ಟೇ ಸೋರುವ ಮನೆಯಲ್ಲಿ ಸಣ್ಣ ಮಕ್ಕಳನ್ನು ಬಿಟ್ಟು ಬಂದು ಮೂರು ದಿನ ಬೆಳಿಗ್ಗೆಯಿಂದ ಕಾದಿದ್ದೇನೆ. ಆದರೆ, ನಮಗಿಂತಲೂ ಮೊದಲೇ ದಿನ ನಿಗದಿಯಾಗಿದೆ ಎಂದು ಯಾರ ಯಾರದೂ ದಾಖಲೆ ಪಡೆದು ಅರ್ಜಿ ಹಾಕುತ್ತಾರೆ. ನಮಗೆ ಮಾತ್ರ ಬೆಳಗಾವಿ ಒನ್ ಸಿಬ್ಬಂದಿ ಸರ್ವರ್‌ಸಮಸ್ಯೆ ಇದೆ ನಾಳೆ ಬನ್ನಿ, ಪ್ರಯತ್ನಿಸುತ್ತೇವೆ ಎಂದು ಸಂಜೆ ಹೇಳಿ ಕಳುಹಿಸುತ್ತಿದ್ದಾರೆ. ಸಹಾಯವಾಣಿಗೆ ಕರೆ ಮಾಡಿದರೆ ಸ್ಪಂದನೆ ಸಿಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
 

ಸಂದೇಶ ತಂದೊಡ್ಡಿದ ಸಮಸ್ಯೆ..!
ಅರ್ಜಿ ಸಲ್ಲಿಕೆಯ ದಿನ  ನಿಗದಿಪಡಿಸುವ ಸಂದೇಶದಲ್ಲಿ ಅರ್ಜಿದಾರರು ವಾಸಿಸುವ ಗ್ರಾಪಂ ಅಥವಾ ವಾರ್ಡ್‌ನಲ್ಲಿನ ಕೇಂದ್ರಗಳ ಬದಲಾಗಿ 20-25 ಕಿ.ಮೀ ದೂರದೂರಿನ ಕೇಂದ್ರಕ್ಕೆ ಬರುತ್ತಿದೆ. ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದಲ್ಲಿರುವ ಬಹುತೇಕರಿಗೆ ಅಥಣಿ ಪಟ್ಟಣದಲ್ಲಿರುವ ಕರ್ನಾಟಕ ಒನ್ ಸೇವಾ ಕೇಂದ್ರಕ್ಕೆ ಹೋಗಲು ಸಂದೇಶ ಬಂದಿದ್ದು, ಅಂಥಹ ಕೇಂದ್ರಲ್ಲಿ ವಿಚಾರಿಸಿದರೆ, ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲ ಎಂದು ವಾಪಸ್ ಕಳುಹಿಸುತ್ತಿದ್ದು, ಜನ ರೋಸಿಹೋಗಿದ್ದಾರೆ. ‘ಗೊಂದಲ ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಅಥಣಿ ತಹಸೀಲ್ದಾರ್ ಬಿ.ಎಸ್.ಕಡಕಬಾವಿ ಅಭಯ ನೀಡಿದ್ದಾರೆ. ಆದರೆ, ಅಲೆದಾಟ ಮಾತ್ರ ಇನ್ನೂ ತಪ್ಪಿಲ್ಲ.

‘ಮಹಿಳೆಯರಿಂದ ಹಣ ಪಡೆಯುತ್ತಿದ್ದ ಆರೋಪದ ಮೇಲೆ ನಾಲ್ಕು ಕೇಂದ್ರಗಳ ಲಾಗ್ ಇನ್ ಐಡಿ, ಪಾಸ್‌ವರ್ಡ್ ಮತ್ತೊಬ್ಬರಿಗೆ ವಹಿಸಿದ್ದೇವೆ. ಪ್ರತಿ ಅರ್ಜಿಗೆ 12 ರೂ.ಸೇವಾ ಶುಲ್ಕ ಸರ್ಕಾರವೇ ನೀಡುತ್ತಿದ್ದರೂ ಹಣ ವಸೂಲಿ ಮಾಡಿದವರ ವಿರುದ್ಧ ಕ್ರಮಿನಲ್ ಕೇಸ್ ಹಾಕಿ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜನರ ದೂರುಗಳಿಗೆ ಸ್ಪಂದಿಸಿದೇ ಪಿಡಿಒ, ಆರ್‌ಐ ಹಾಗೂ ತಹಸೀಲ್ದಾರ್‌ಅಸಡ್ಡೆ ಮಾಡಿದರೇ ಸರ್ಕಾರ ಶಿಸ್ತುಕ್ರಮ ಜರುಗಿಸುತ್ತದೆ. ಲಕ್ಷ್ಮೀ ಹೆಬ್ಬಾಳ್ಕರ್, ಸಚಿವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಲಕ್ಷ್ಮೀ ಹೆಬ್ಬಾಳ್ಕರ್, ಸಚಿವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ