ನಾಗಮಂಗಲ: ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿಯೋಜನೆಯ ನೋಂದಣಿಗೆ ಜಿಲ್ಲಾಧಿಕಾರಿ ಡಾ.ಕುಮಾರ್ ಗುರುವಾರ ಚಾಲನೆ ನೀಡಿದರು.
ಪಟ್ಟಣದ ಪುರಸಭೆಯ ಸೂಪರ್ ಮಾರ್ಕೆಟ್ ಕಟ್ಟಡದಲ್ಲಿರುವ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ ಗೃಹಲಕ್ಷ್ಮೀ ಯೋಜನೆಯ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಗೃಹಲಕ್ಷ್ಮೀ ಯೋಜನೆ ನೋಂದಣಿಗೆ ಕಾಲಮಿತಿ ಇಲ್ಲ. ಯಾವಾಗ ಬೇಕಿದ್ದರೂ ನೋಂದಣಿ ಮಾಡಿಸಿಕೊಳ್ಳಬಹುದಾಗಿದ್ದು, ಇದಕ್ಕೆ ಕೊನೆಯ ದಿನಾಂಕವೆಂಬುದಿಲ್ಲ. ಸಾರ್ವಜನಿಕರು ಸಾಲುಗಟ್ಟಿ ನಿಲ್ಲುವುದು ಅಥವಾ ಅಂತಿಮ ದಿನಾಂಕ ನಿಗದಿಪಡಿಸಿದ್ದಾರೆಂಬ ಆತಂಕ ಬೇಡ. ಮನೆಯ ಯಜಮಾನಿಗೆ ನೋಂದಣಿ ಕುರಿತಾಗಿ ಮೊಬೈಲ್‌ಗೆ ಮೆಸೇಜ್ ಬರುವವರೆಗೂ ಯಾರೂ ನೋಂದಣಿ ಕೇಂದ್ರಕ್ಕೆ ಬಂದು ನಿಲ್ಲುವುದು ಬೇಡ. ನೋಂದಣಿಯ ದಿನಾಂಕ, ಕೇಂದ್ರದ ವಿಳಾಸ ಸೇರಿದಂತೆ ಇನ್ನಿತರ ಮಾಹಿತಿಯ ಮೆಸೇಜ್ ಬಂದ ನಂತರವಷ್ಟೇ ನೋಂದಣಿ ಮಾಡಲು ಸಾಧ್ಯ ಎಂದರು. ಇದೇ ಸಂದರ್ಭ ಗೃಹಲಕ್ಷ್ಮೀ ಯೋಜನೆಯ ಕುರಿತಾಗಿ ಮಹಿಳೆಯರಿಗೆ ಮಾಹಿತಿ ನೀಡಿದರು.
ಸಹಾಯವಾಣಿಗೆ ಮೆಸೇಜ್ ಮಾಡಿದ ಡಿಸಿ, ಎಡಿಸಿ: ಗೃಹಲಕ್ಷ್ಮೀ ಯೋಜನೆಯ ನೋಂದಣಿಗೆ ಚಾಲನೆ ನೀಡಲು ಡಿಸಿ ಡಾ.ಕುಮಾರ್ ಹೋದಂತಹ ಸಂದರ್ಭದಲ್ಲಿ ನೋಂದಣಿ ಕೇಂದ್ರದಲ್ಲಿ ನೋಂದಣಿಯ ಖಚಿತತೆಯ ಮೆಸೇಜ್ ಬಾರದಿದ್ದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸಾಲುಗಟ್ಟಿ ನಿಂತಿದ್ದರು. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಮಹಿಳೆಯರಿಂದ ಮಾಹಿತಿ ಪಡೆದು ನಂತರ ಮಹಿಳೆಯರ ಮೊಬೈಲ್ ಫೋನ್ ಪಡೆದು ಖುದ್ದು ಡಿಸಿ ಮತ್ತು ಎಡಿಸಿ ಸಹಾಯವಾಣಿಗೆ ಮೆಸೇಜ್ ಕಳುಹಿಸುವ ಮೂಲಕ ನೋಂದಣಿ ದಿನಾಂಕದ ಮೆಸೇಜ್ ತಿಳಿಸಿಕೊಟ್ಟರು.
ಅಲ್ಲಿದ್ದ ಎಲ್ಲ ಮಹಿಳೆಯರು ತಮ್ಮ ಮೊಬೈಲ್‌ಗಳನ್ನು ಡಿಸಿ ಮತ್ತು ಎಡಿಸಿ ಅವರಿಗೆ ನೀಡಿ ನಮಗೆ ಅದು ಗೊತ್ತಾಗುವುದಿಲ್ಲ, ನಮಗೂ ಮಾಡಿಕೊಡಿ ಸರ್ ಎಂದು ಹೇಳಿ ಮೊಬೈಲ್ ಕೊಟ್ಟಿದ್ದು ಕಂಡುಬಂತು. ಸಮಾಧಾನವಾಗಿ ಅಲ್ಲಿದ್ದ ಎಲ್ಲ ಮಹಿಳೆಯರಿಗೂ ಡಿಸಿ ಮತ್ತು ಎಡಿಸಿ ಮೊಬೈಲ್ ಪಡೆದು ಸಹಾಯವಾಣಿಗೆ ಸಂದೇಶ ಕಳುಹಿಸುವ ಜತೆಗೆ ನೋಂದಣಿಯ ದಿನಾಂಕ ಹಾಗೂ ಕೇಂದ್ರವನ್ನು ತಿಳಿಸಿಕೊಟ್ಟರು.
ಪುರಸಭೆ ಕಚೇರಿಗೆ ಭೇಟಿ: ಪುರಸಭೆ ಕಚೇರಿಗೆ ಜಿಲ್ಲಾಧಿಕಾರಿ ಡಾ.ಕುಮಾರ್ ಭೇಟಿ ನೀಡಿ ಸಿಬ್ಬಂದಿ ಹಾಜರಾತಿ ಪರಿಶೀಲನೆ ನಡೆಸಿ ಹಾಜರಾತಿಯಲ್ಲಿದ್ದವರನ್ನು ಖುದ್ದು ಪರಿಶೀಲನೆ ನಡೆಸಿದರು. ನಂತರ ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಅವರಿಂದ ಕುಡಿಯುವ ನೀರಿನ ಸೌಲಭ್ಯ, ಒಳಚರಂಡಿ ವ್ಯವಸ್ಥೆ ಕುರಿತಾಗಿ ಮಾಹಿತಿ ಪಡೆದರು.
ಪುರಸಭೆಯಲ್ಲಿ ಸಿಬ್ಬಂದಿ ಕೊರತೆಯಿದ್ದು ಕೂಡಲೆ ಸಿಬ್ಬಂದಿ ನೇಮಕ ಮಾಡಿಕೊಡುವಂತೆ ಜಿಲ್ಲಾಧಿಕಾರಿಗೆ ಮುಖ್ಯಾಧಿಕಾರಿ ಮನವಿ ಮಾಡಿದರು.
ಶಿಸ್ತುಕ್ರಮಕ್ಕೆ ವರದಿ ಸಲ್ಲಿಸಲು ಸೂಚನೆ: ಪುರಸಭೆ ಕಚೇರಿಯಲ್ಲಿ ಸಿಬ್ಬಂದಿ ಹಾಜರಾತಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಆರೋಗ್ಯ ನಿರೀಕ್ಷಕ ನಿಂಗೇಗೌಡ ಕುರಿತಾಗಿ ಮಾಹಿತಿ ಕೇಳಿದರು. ಈ ಸಂದರ್ಭ ಮುಖ್ಯಾಧಿಕಾರಿ ಶ್ರೀನಿವಾಸ್ ಪ್ರತಿಕ್ರಿಯಿಸಿ ಅವರು ಮಧ್ಯಾಹ್ನದ ನಂತರ ಪ್ರತಿನಿತ್ಯ ಕರ್ತವ್ಯಕ್ಕೆ ಬರುವುದಿಲ್ಲ, ಕಚೇರಿಗೆ ಸರಿಯಾಗಿ ಬರುವುದಿಲ್ಲ, ಮೊಂಡುತನ ಪ್ರದರ್ಶನ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭ ಡಿಸಿ ಡಾ.ಕುಮಾರ್ ಅಸಮಾಧಾನ ವ್ಯಕ್ತಪಡಿಸಿ ಸರ್ಕಾರಿ ಸಂಬಳ ತೆಗೆದುಕೊಂಡು ಸರ್ಕಾರಿ ಕೆಲಸ ಮಾಡಲು ಆಗದವರು ಸರ್ಕಾರಕ್ಕೆ ಅಗತ್ಯವಿಲ್ಲ. ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು, ಈ ಕುರಿತು ವರದಿ ಸಲ್ಲಿಸುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು. ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ತಹಸೀಲ್ದಾರ್ ನಯೀಂ ಉನ್ನಿಸಾ, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ರಾಜಸ್ವ ನಿರೀಕ್ಷಕ ಮಂಜುನಾಥ್, ಪುರಸಭೆ ಆರೋಗ್ಯ ನಿರೀಕ್ಷಕ ಮೂರ್ತಿ ಇದ್ದರು.