ಹುಳಿಯಾರು ಪಟ್ಟಣ ಪಂಚಾಯಿತಿ ಬಳಿ ಜನಜಂಗುಳಿ.  
ಜಿಲ್ಲೆ

ಗೃಹಲಕ್ಷ್ಮೀ ನೋಂದಣಿಗೆ ಜನಜಂಗುಳಿ

ಹುಳಿಯಾರು: ಗೃಹಲಕ್ಷ್ಮೀ ಯೋಜನೆಗೆ ಹೆಸರು ನೋಂದಣಿ ಮಾಡುವುದಕ್ಕಾಗಿ ಚಿಕ್ಕನಾಯಕನಹಳ್ಳಿ ತಾಲೂಕಿನಾದ್ಯಂತ ನೋಂದಣಿ ಕೇಂದ್ರಗಳ ಮುಂದೆ ಸರತಿ ಸಾಲು ಕಂಡು ಬರುತ್ತಿದೆ.

ಗ್ರಾಪಂಗಳ 27 ಬಾಪೂಜಿ ಸೇವಾ ಕೇಂದ್ರ, 40 ಗ್ರಾಮ ಒನ್, 1 ಕರ್ನಾಟಕ ಒನ್, ಪುರಸಭೆ 3, ಪಟ್ಟಣ ಪಂಚಾಯಿತಿಯಲ್ಲಿ 1 ಕೇಂದ್ರಗಳನ್ನು ತೆರೆಯಲಾಗಿದೆ. ಆಗಾಗ ತಾಂತ್ರಿಕ ದೋಷ ಕಂಡು ಬರುವುದು ಬಿಟ್ಟರೆ ಮತ್ತ್ಯಾವ ತೊಂದರೆಯಿಲ್ಲದೆ ನಿತ್ಯ ಒಂದೊಂದು ಕೇಂದ್ರದಲ್ಲಿ ನೂರಕ್ಕೂ ಹೆಚ್ಚು ಅರ್ಜಿಗಳು ನೋಂದಣಿಯಾಗುತ್ತಿವೆ. ಇಲ್ಲಿಯವರೆಗೆ 34,613 ಅರ್ಜಿ ನೋಂದಣಿಯಾಗಿವೆ.

ಆರಂಭದಲ್ಲಿ ದಿನಕ್ಕೆ 60 ಮಂದಿಗೆ ನೋಂದಣಿಗೆ ಅವಕಾಶ ಎಂದು ಹೇಳಲಾಗಿತ್ತು. ಅಲ್ಲದೆ, ಬಿಪಿಎಲ್ ಪಡಿತರ ಕಾರ್ಡ್‌ನಲ್ಲಿರುವಂತೆ ಮನೆಯ ಯಜಮಾನಿಗೆ ಸಂದೇಶ ಬಂದ ನಂತರ ಕೇಂದ್ರಕ್ಕೆ ಬಂದು ನೋಂದಣಿ ಮಾಡಿಕೊಳ್ಳಬೇಕಿತ್ತು. ಆದರೆ, ಸರ್ಕಾರ ಈ ನಿಯಮ ತೆಗೆದಿದ್ದು, ಫಲಾನುಭವಿಗಳು ಯಾವಾಗ ಬೇಕಾದರೂ ಬಂದು ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಹೇಳಿರುವುದರಿಂದ ಮಹಿಳೆಯರು ಹತ್ತಿರದ ಕೇಂದ್ರಗಳಿಗೆ ದಾಂಗುಡಿ ಇಡುತ್ತಿದ್ದು, ನೂಕುನುಗ್ಗಲಿಗೆ ಕಾರಣವಾಗಿದೆ.

ಯೋಜನೆಯ ಫಲಾನುಭವಿಗಳಾಗಲು ಆಧಾರ್‌ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್‌ಗಳನ್ನು ತೆಗೆದುಕೊಂಡು ಮುಂಜಾನೆಯೇ ಬಂದು ಸಂಜೆಯವರೆಗೂ ಕಾಯುತ್ತಿದ್ದಾರೆ. ನೋಂದಣಿ ಯಾದವರು ಖುಷಿಯಿಂದ ಮನೆಗೆ ತೆರಳಿದರೆ ನೋಂದಣಿಯಾಗದ ಮಹಿಳೆಯರು ಮತ್ತೆ ಮತ್ತೆ ಬರಬೇಕಲ್ಲ ಎಂಬ ಬೇಸರದೊಂದಿಗೆ ವಾಪಸ್ ಆಗುತ್ತಿದ್ದಾರೆ.

ಕೆಲವರಿಗೆ ಇಕೆವೈಸಿ ತೊಡಕಾಗುತ್ತಿದ್ದರೆ, ಇನ್ನೂ ಕೆಲವರಿಗೆ ಒಟಿಪಿ ಬರುವುದು ಸಮಸ್ಯೆಯಾಗುತ್ತಿದೆ, ಮತ್ತೆ ಕೆಲವರಿಗೆ ಒಟಿಪಿ ನಂಬರ್ ಇಲ್ಲದೆ ಸಲೀಸಾಗಿ ಕೆಲಸಗಳು ಆಗುತ್ತಿವೆ. ಸರ್ವರ್ ಸಮಸ್ಯೆ ತಲೆದೋರದಂತೆ ನೆಟ್‌ವರ್ಕ್ ಸಿಸ್ಟಮ್ ಅಭಿವೃದ್ಧಿಪಡಿಸಿದರೆ ಅನುಕೂಲವಾಗುತ್ತದೆ. ಅಲ್ಲದೆ ವೃದ್ಧರಿಗೆ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಿಸಿ ಕಾಯಿಸುವ ಬದಲು ಆದ್ಯತೆ ಮೇರೆಗೆ ಮಾಡಿಕೊಟ್ಟರೆ ನೆರವಾದಂತಾಗುತ್ತದೆ ಎಂದು ಮಹಿಳೆಯರು ಹೇಳುತ್ತಿದ್ದುದು ಈ ವೇಳೆ ಕಂಡುಬಂತು.

ತರಾತುರಿ ಬೇಡ, ಅರ್ಜಿ ಬೇಡ, ಹಣ ಬೇಡ: ನೋಂದಣಿಗೆ ಸರ್ಕಾರ ಗಡುವು ವಿಧಿಸಿಲ್ಲ. ಹಾಗಾಗಿ, ಫಲಾನುಭವಿಗಳು ತರಾತುರಿ ಮಾಡುವ ಅಗತ್ಯವಿಲ್ಲ. ನಿಧಾನವಾಗಿ ನೋಂದಣಿ ಮಾಡಬಹುದು, ನೋಂದಣಿಗೆ ಅರ್ಜಿ ಸಲ್ಲಿಸಬೇಕಿಲ್ಲ, ಹಣ ಕೊಡಬೇಕಿಲ್ಲ, ಯಾರಾದರೂ ಅರ್ಜಿ ನಮೂನೆ ಭರ್ತಿ ಮಾಡಬೇಕು ಎಂದು ದಾರಿ ತಪ್ಪಿಸುವ ಕೆಲಸ ಮಾಡಿದರೆ, ನೋಡಲ್ ಅಧಿಕಾರಿಗಳಾದ ನಿಮ್ಮ ವ್ಯಾಪ್ತಿಯ ಗ್ರಾಮ ಲೆಕ್ಕಿಗರು, ಪಿಡಿಒಗಳಿಗೆ ಕರೆ ಮಾಡಿ ತಿಳಿಸಿ ಎಂದು ಸಿಡಿಪಿಒ ಹೊನ್ನಪ್ಪ ತಿಳಿಸಿದ್ದಾರೆ.

ವಂಚಿತರಾಗುತ್ತಿರುವ ಯಜಮಾನಿ: ಪಡಿತರ ಚೀಟಿಯಲ್ಲಿರುವ ಯಜಮಾನಿ ಮಹಿಳೆಯ ನೋಂದಣಿ ಆರಂಭದಲ್ಲಿ ಡಾಕ್ಯೂಮೆಂಟ್ ಅಪ್‌ಲೋಡ್ ಕೇಳುತ್ತದೆ. ಮಾಡಿದರೆ ಮಿಸ್ ಮ್ಯಾಚ್ ಎಂದು ಡಾಟಾ ಮ್ಯಾಚ್ ಆಗದೆ ತಿರಸ್ಕರಿಸುತ್ತಿದೆ. ಇದೊಂದೇ ಸಮಸ್ಯೆಯಿಂದ ಯೋಜನೆಯಿಂದ ಯಜಮಾನಿ ವಂಚಿತರಾಗುತ್ತಿರುವ ಪ್ರಕರಣ ಬಹಳಷ್ಟಿದೆ. ಅಲ್ಲದೆ ಯೋಜನೆಗೆ ನೋಂದಣಿ ಮಾಡಿಸಿದ ಸ್ಥಳದಲ್ಲೇ ಸ್ವೀಕೃತಿ ಪತ್ರದ ಪ್ರತಿ ಪಡೆಯಬೇಕಿದೆ. ನೋಂದಣಿಯಾಗಿ ಪ್ರಿಂಟ್ ಬರುವ ಸಂದರ್ಭದಲ್ಲಿ ಸರ್ವರ್ ಸಮಸ್ಯೆಯಾದಾಗ ಮತ್ತೆ ಅದೇ ಕೇಂದ್ರಕ್ಕೆ ತೆರಳಿ ಪ್ರಿಂಟ್ ತರಬೇಕಿದೆ. ಇದರಿಂದ ಅನೇಕರಿಗೆ ತೊಂದರೆಯಾಗುತ್ತಿದ್ದು, ಯಾರು ಎಲ್ಲಿ ಬೇಕಾದರೂ ಸ್ವೀಕೃತಿ ಪ್ರತಿ ಪ್ರಿಂಟ್ ತೆಗೆಸಿಕೊಳ್ಳುವಂತೆ ಮಾಡಬೇಕಿದೆ.

ಸಾಲಿನಲ್ಲಿ ನಿಂತು ಸಹಕರಿಸಿ: ಬೆಳಗ್ಗೆ 8ಕ್ಕೆ ನಾವು ಕೆಲಸ ಆರಂಭಿಸುತ್ತೇವೆ. ಮಹಿಳೆಯರು ಆಧಾರ್ ಕಾರ್ಡ್, ಪಡಿತರ ಚೀಟಿ, ಮೊಬೈಲ್‌ನೊಂದಿಗೆ ಬಂದು ಸರದಿ ಸಾಲಿನಲ್ಲಿ ನಿಂತು ಸಹಕರಿಸಬೇಕು. ವೆಬ್ ಸೈಟ್ ಡೌನ್ ಆಗಿರುವುದರಿಂದ ಮೊಬೈಲ್‌ನಲ್ಲೇ ನಿತ್ಯ ಇನ್ನೂರಕ್ಕೂ ಹೆಚ್ಚು ನೋಂದಣಿ ಮಾಡುತ್ತಿದ್ದೇವೆ. ನಮಗೆ ಸಹಕರಿಸಿ ಕೆಲಸ ತೆಗೆದುಕೊಳ್ಳಬೇಕು ಎಂದು ಹುಳಿಯಾರು ಹೋಬಳಿಯ ಯಳನಡು ಕೇಂದ್ರದ ಈರಣ್ಣ ಮನವಿ ಮಾಡಿದರು.