ರಾಯಚೂರು: ಮನೆಯ ಯಜಮಾನಿಗೆ ಸರ್ಕಾರಿ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿತಿಂಗಳು ನೀಡುವ ಎರಡು ಸಾವಿರ ರೂ.ಗಳಿಗಾಗಿ ಅರ್ಜಿ ಸಲ್ಲಿಸಲು ಗ್ರಾಮ ಒನ್ ಕೇಂದ್ರದ ಮುಂದೆ ಜನರು ಗುಂಪು ಗುಂಪಾಗಿ ಸೇರುತ್ತಿರುವುದರಿಂದ ಕೇಂದ್ರದ ಸಿಬ್ಬಂದಿ ಸಮಸ್ಯೆ ಎದುರಿಸುವಂತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಯಡಿ ಅರ್ಜಿ ಸಲ್ಲಿಕೆಗೆ ಬುಧವಾರ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದು, ಗುರುವಾರದಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಬೆಳಗ್ಗೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದರೂ ಮಹಿಳೆಯರು ಅರ್ಜಿ ಸಲ್ಲಿಸಲು ಕೇಂದ್ರಗಳ ಮುಂದೆ ಗುಂಪುಗುಂಪಾಗಿ ಸೇರುತ್ತಿದ್ದಾರೆ.
ಅರ್ಜಿ ಸಲ್ಲಿಸಲು ಜನರು ಸರತಿ ಸಾಲಿನಲ್ಲಿ ಬಾರದೆ ಗುಂಪುಗುಂಪುಗಾಗಿ ನಿಲ್ಲುತ್ತಿರುವುದರಿಂದ ಅರ್ಜಿ ಅಪ್‌ಲೋಡ್ ಮಾಡಲು ಕೇಂದ್ರದ ಸಿಬ್ಬಂದಿ ಸಮಸ್ಯೆ ಎದುರಿಸುವಂತಾಗಿದೆ. ಅದರಲ್ಲೂ ಗ್ರಾಮಾಂತರ ಪ್ರದೇಶದಲ್ಲಿ ಸರ್ವರ್ ಸಮಸ್ಯೆಯಿಂದ ಒಬ್ಬರ ಅರ್ಜಿ ಅಪ್‌ಲೋಡ್ ಮಾಡಲು ಹೆಚ್ಚಿನ ಸಮಯ ಹಿಡಿಯುತ್ತಿರುವುದರಿಂದ ಸಮಸ್ಯೆ ಎದುರಾಗಿದೆ.
ನಗರದ ತಹಸೀಲ್ ಕಚೇರಿ ಮುಂದಿರುವ ಗ್ರಾಮ ಒನ್ ಕೇಂದ್ರದಲ್ಲಿ ಮಹಿಳೆಯರು ಮತ್ತು ಮಹಿಳೆಯರ ಪರವಾಗಿ ಪುರುಷರು ಅರ್ಜಿ ಸಲ್ಲಿಸಲು ಬಂದಿದ್ದು, ಎಲ್ಲರೂ ಗುಂಪಾಗಿ ನಿಂತು ಮೊದಲು ಅರ್ಜಿ ಸಲ್ಲಿಸಲು ಮುಂದಾಗಿದ್ದರಿಂದ ಸಿಬ್ಬಂದಿಗಳು ಸಂಕಷ್ಟ ಎದುರಿಸುವಂತಾಗಿತ್ತು.
ಮಳೆಯ ನಡುವೆಯೂ ಸಾಕಷ್ಟು ಮಹಿಳೆಯರು ಕೊಡೆ ಹಿಡಿದು ಕೇಂದ್ರಗಳಿಗೆ ಅರ್ಜಿ ಸಲ್ಲಿಸಲು ಬರುತ್ತಿದ್ದು, ಮಳೆಯಿಂದಾಗಿ ಸರ್ವರ್ ಸಮಸ್ಯೆಯೂ ಕಾಡುತ್ತಿದೆ. ಗ್ರಾಮ ಒನ್ ಕೇಂದ್ರಗಳ ಮುಂದೆ ಪೊಲೀಸರನ್ನು ನಿಯೋಜನೆ ಮಾಡುವ ಮೂಲಕ ಜನರು ಸಾಲಿನಲ್ಲಿ ನಿಂತು ಅರ್ಜಿ ಸಲ್ಲಿಸುವ ವ್ಯವಸ್ಥೆ ಮಾಡಬೇಕು ಎಂದು ಕೇಂದ್ರದ ಸಿಬ್ಬಂದಿ ಮನವಿ ಮಾಡುತ್ತಿದ್ದಾರೆ.