ಮೈಸೂರು: ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಪ್ರತ್ಯೇಕ ಮೊಬೈಲ್ ಆ್ಯಪ್ ರೂಪಿಸಲಾಗಿದ್ದು, ಜುಲೈನಿಂದ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷೀ ಹೆಬ್ಬಾಳ್ಕರ್ ತಿಳಿಸಿದರು.
ಜನರು ನಿರೀಕ್ಷಿಸುತ್ತಿರುವ ಗೃಹಲಕ್ಷ್ಮೀ ಯೋಜನೆಗೆ ಯಾವುದೇ ಅಡ್ಡಿಯಾಗದಂತೆ ಕ್ರಮಕೈಗೊಳ್ಳಲಾಗುವುದು. ಈಗಾಗಲೇ ಆ್ಯಪ್ ರೂಪಿಸಿದ್ದು, ಜೂ.27ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಆ್ಯಪ್‌ನ ಕಾರ್ಯವೈಖರಿಯನ್ನು ಪ್ರತ್ಯಕ್ಷಿಕೆ ಮೂಲಕ ತೋರಿಸಲಾಗುವುದು. ಬಳಿಕ ಅರ್ಜಿ ಸಲ್ಲಿಕೆಗೆ ಆ್ಯಪ್ ಬಿಡುಗಡೆ ಮಾಡಲಾಗುವುದು ಎಂದು ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯಿಸಿದರು.
ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಆ್ಯಪ್ ರಚಿಸಿದ್ದೇವೆ. ಅರ್ಜಿ ಸಲ್ಲಿಸಲು ಒಂದು ರೂಪಾಯಿ ಹಣವನ್ನು ಕೊಡಬೇಕಾಗಿಲ್ಲ. ಅರ್ಜಿ ಸಲ್ಲಿಸಲು ಕೊನೆ ದಿನಾಂಕವೂ ಇರುವುದಿಲ್ಲ. ಅರ್ಜಿ ಸಲ್ಲಿಸಿ ಸ್ಚೀಕೃತಿ ಪತ್ರ ಸಿಕ್ಕರೆ ಅಲ್ಲಿಗೆ ಫಲಾನುಭವಿ ಪಟ್ಟಿಗೆ ಸೇರುತ್ತಾರೆ. ಇದರಲ್ಲಿ ಯಾವುದೇ ಗೊಂದಲಗಳು ಬೇಡ ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆ ಜಾರಿಗೆ ಹಣಕಾಸಿನ ತೊಂದರೆ ಇದೆ ಎನ್ನುವ ಪ್ರತಿಪಕ್ಷಗಳ ಟೀಕೆಗೆ ಅರ್ಥವಿಲ್ಲ. ಸರ್ಕಾರದಲ್ಲಿ ಎಲ್ಲ ರೀತಿಯ ಸಂಪನ್ಮೂಲ ನಮ್ಮ ಬಳಿ ಇದೆ ಎಂದು ಉತ್ತರಿಸಿದರು.
ನಾಡದೇವತೆಗೆ ವಿಶೇಷ ಪೂಜೆ:
ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಸಚವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನಾಡ ಅಧಿದೇವತೆ ಚಾಮುಂಡೇಶ್ವರಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬರಲಿ ಎಂದು ಚಾಮುಂಡಿ ತಾಯಿಯಲ್ಲಿ ಹರಕೆ ಕಟ್ಟಿದ್ಧೆ. ಈಗ ಅಧಿಕಾರಕ್ಕೆ ಬಂದಿದ್ದೇವೆ. ಹೀಗಾಗಿ ಚಾಮುಂಡಿಬೆಟ್ಟಕ್ಕೆ ಬಂದು ಹರಕೆ ತೀರಿಸಿದ್ದೇನೆ. ರಾಜ್ಯದಲ್ಲಿ ಒಳ್ಳೆಯ ಮಳೆಯಾಗಲಿ ಎಂದು ಈಗ ದೇವಿಯನ್ನು ಸೆರೆಗೊಡ್ಡಿ ಬೇಡಿಕೊಂಡಿದ್ದೇನೆ ಎಂದರು.