ಜಿಲ್ಲೆ

ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮ ಆಯೋಜನೆಗೆ ನಿಗಾವಹಿಸಲು ಸೂಚನೆ

ಹಾಸನ: ಆ.27 ರಂದು ಗೃಹಲಕ್ಷ್ಮ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ವಿಶೇಷ ಹಾಗೂ ವಿಭಿನ್ನವಾಗಿ ಆಚರಿಸಲು ಅಗತ್ಯ ಸಿದ್ದತೆ ಮಾಡಿಕೊಂಡು ಅತ್ಯಂತ ಯಶಸ್ವಿಯಾಗಿ ನಡೆಸಲು ಅಧಿಕಾರಿಗಳು ನಿಗಾವಹಿಸುವಂತೆ ಜಿಲ್ಲಾಧಿಕಾರಿ ಸತ್ಯಭಾಮ ಅವರು ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನ ಕುರಿತಂತೆ ವಿಡಿಯೋ ಸಂವಾದದ ಮೂಲಕ ಎಲ್ಲಾ ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಗೃಹಲಕ್ಷ್ಮ್ಮಿ ಯೋಜನೆಗೆ ಆ.27 ರಂದು ಮಾನ್ಯ ಮುಖ್ಯ ಮಂತ್ರಿಯವರು ಬೆಳಗಾವಿಯಲ್ಲಿ ಚಾಲನೆ ನೀಡಲಿದ್ದಾರೆ. ಜಿಲ್ಲೆಯ 264 ಗ್ರಾಮ ಪಂಚಾಯಿತಿ ಹಾಗೂ 186 ವಾರ್ಡ್‌ಗಳಲ್ಲಿ ಅನುಷ್ಠಾನ ಕಾರ್ಯಕ್ರಮ ಜರುಗಲಿದೆ ಎಂದರು.

ಕಾರ್ಯಕ್ರಮದ ಆಯೋಜನೆಗೆ ಸಮುದಾಯ ಭವನ ಸ್ಥಳ ಗುರುತಿಸಿ, ಆಸನದ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ಸ್ವಚ್ಚತೆ, ಲಘು ಉಪಹಾರ, ಎಲ್.ಇ.ಡಿ.ಪರದೆ, ಒಂದೇ ಮಾದರಿಯ ಬ್ಯಾನರ್, ನಿರಂತರ ವಿದ್ಯುತ್, ನೆಟ್ ವರ್ಕ್ ಸಮಸ್ಯೆಯಾಗದಂತೆ ಪೂರ್ವ ತಯಾರಿ ಮಾಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಎಲ್ಲರು ಕೇಂದ್ರ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.

ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಮುಖಂಡರುಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವಂತೆ ತಿಳಿಸಿದರಲ್ಲದೆ, ಕಾರ್ಯಕ್ರಮದಲ್ಲಿ ಯಾವುದೇ ಅಪಚಾರವಾಗದಂತೆ ಎಚ್ಚರವಹಿಸಿ ಎಂದ ಅವರು ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ 2 ನಿಮಿಷಗಳ ವಿಡೀಯೋ ಮಾಡುವಂತೆ ಸೂಚಿಸಿದರು.

ಕಾರ್ಯಕ್ರಮ ನಡೆಯುವ ಭವನವನ್ನು ತಳಿರು ತೋರಣಗಳಿಂದ ಸಿಂಗರಿಸಿ, ಪಿಂಕ್ ಬಲೂನ್ ಹಾಗೂ ಕಾಗದದ ಚಿತ್ತಾರಗಳನ್ನು ಬಳಸಿ ಅಲಂಕಾರ ಮಾಡಿ. ಹಬ್ಬದ ರೀತಿ ಸಡಗರ ಸಂಭ್ರಮದಿಂದ ಕಾರ್ಯಕ್ರಮ ನಡೆಸಬೇಕು. ಇರುವ ಸಂಪನ್ಮೂಲ ಬಳಸಿಕೊಂಡು ಅತ್ಯುತ್ತಮವಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದರು.

ಕಾರ್ಯಕ್ರಮಕ್ಕೆ ಬರುವ ಫಲಾನುಭವಿಗಳು ಹಿರಿಯ ನಾಗರೀಕರು ಹಾಗೂ ವಿಕಲಚೇತನರಾಗಿದ್ದಾರೆ ಅವರನ್ನು ಕರೆತರಲು ಅಂಗವಾಡಿ ಕಾರ್ಯಕರ್ತೆಯವರು, ಆಶಾ ಕಾರ್ಯಕರ್ತೆಯರು, ಗ್ರಾಮ ಸಹಾಯಕರನ್ನು ಬಳಸಿಕೊಂಡು ಅಗತ್ಯ ಸಿದ್ದತೆ ಮಾಡಿಕೊಳ್ಳುವಂತೆ ಸೂಚಿಸಿದ ಜಿಲ್ಲಾಧಿಕಾರಿಯವರು ಕಾರ್ಯಕ್ರಮಕ್ಕೆ ಬರುವ ಎಲ್ಲಾ ಮಹಿಳೆಯರು ಪಿಂಕ್ ಬಣ್ಣದ ಸೀರೆ ಧರಿಸಿ ಬರುವಂತೆ ತಿಳಿಸಿ ಎಂದರಲ್ಲದೆ, ಪುರುಷರು ಸಹ ಪಿಂಕ್ ಬಣ್ಣದ ಶರ್ಟ್ ಧರಿಸಿಬರಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್.ಪೂರ್ಣಿಮಾ ಅವರು ಮಾತನಾಡಿ, ಸ್ಥಳೀಯ ಸಂಸ್ಥೆಗಳಲ್ಲಿ ಲಭ್ಯವಿರುವ ಅನುದಾನ ಬಳಸಿಕೊಂಡು ಕಾರ್ಯಕ್ರಮ ರೂಪಿಸಿ ಎಂದ ಅವರು ಕಾಯಕ ಬಂಧು, ಕಾಯಕ ಮಿತ್ರ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಮಹಿಳಾ ಒಕ್ಕೂಟದ ಸದಸ್ಯರನ್ನು ಬಳಸಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಉಪ ವಿಭಾಗಾಧಿಕಾರಿ ಮಾರುತಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ,ಕೃಷ್ಣ ಮೂರ್ತಿ,ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪರಪ್ಪಸ್ವಾಮಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೆಶಕ ಬಿ.ಎ.ಜಗದೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೆಶಕ ಸುರೇಶ್, ನಗರ ಸಭೆ ಪೌರಾಯುಕ್ತ ಸತೀಶ್ ಮತ್ತಿತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.