ಜಿಲ್ಲೆ

‘ಗೃಹಲಕ್ಷ್ಮಿ’ ಬಾಕಿ ಫಲಾನುಭವಿಗಳ ವರದಿ ನೀಡಿ

ಮೈಸೂರು: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯಡಿ 6,73,334 ಫಲಾನುಭವಿಗಳು ಪ್ರತಿ ಮಾಹೆ 2 ಸಾವಿರ ರೂ. ಧನಸಹಾಯ ಪಡೆಯಲು ಅರ್ಹರಾಗಿದ್ದು, ತಾಂತ್ರಿಕ ಕಾರಣದಿಂದ ಈ ವರೆಗೂ ನೋಂದಣಿ ಆಗದಿರುವ ಫಲಾನುಭವಿಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಅರುಣ್ ಕುಮಾರ್ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಬಾಕಿ ಇರುವ ಅರ್ಹ ಫಲಾನುಭವಿಗಳ ಗ್ರಾಮವಾರು, ವಾರ್ಡ್‌ವಾರು ದತ್ತಾಂಶ ಸಂಗ್ರಹಿಸಿ 2 ದಿನದೊಳಗೆ ವರದಿ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗೆ ತಿಳಿಸಿದರು.

ಕ್ಷೇತ್ರ ಭೇಟಿ ನೀಡಿರುವ ಕುರಿತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಾಲೂಕುಗಳಿಗೆ ಕನಿಷ್ಠ 10 ಸ್ಥಳವಾರು ಛಾಯಾಚಿತ್ರ ಸಹಿತ ವರದಿ ನೀಡಬೇಕು. ಅನ್ನಭಾಗ್ಯ ಯೋಜನೆಯ ಬಗ್ಗೆ ಮಾಹಿತಿ ನೀಡಿದ ಆಹಾರ ಇಲಾಖೆಯ ಜಂಟಿ ನಿರ್ದೇಶಕರು, ಜಿಲ್ಲೆಯಲ್ಲಿ 6,65,115 ಪಡಿತರ ಚೀಟಿದಾರರಿಗೆ ನಿಯಮಿತವಾಗಿ ಪ್ರತಿ ಮಾಹೆ 10 ಕೆ.ಜಿ. ಅಕ್ಕಿ ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 5479 ಎನ್‌ಪಿಸಿಐ ಬಾಕಿ ಪಡಿತರ ಚೀಟಿದಾರರಿದ್ದು, ಈ ಪೈಕಿ ಹಾಡಿಗಳಲ್ಲಿ ವಾಸ ಮಾಡುವವರು ಎಷ್ಟಿದ್ದಾರೆ ಎಂದು ಪರಿಶೀಲಿಸಿ ಆದ್ಯತಾವಾರು ಅರ್ಹರಿಗೆ 10 ಕೆ.ಜಿ. ಅಕ್ಕಿ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷರು ತಿಳಿಸಿದರು.

ಯುವನಿಧಿ, ಶಕ್ತಿ ಯೋಜನೆ ಹಾಗೂ ಗೃಹಜ್ಯೋತಿ ಯೋಜನೆಗಳ ಬಗ್ಗೆ ಪರಿಶೀಲಿಸಲಾಯಿತು. ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಯಶೋಗಾಥೆ ಮಾಹಿತಿ ಹಾಗೂ ಸ್ಥಳವಾರು ಭೇಟಿ ಬಗ್ಗೆ ಮುಂದಿನ ಸಭೆಗೆ ಮಾಹಿತಿ ಒದಗಿಸಲು ತಿಳಿಸಲಾಯಿತು. ಗ್ಯಾರಂಟಿ ಪ್ರಾಧಿಕಾರದ ಉಪಾಧ್ಯಕ್ಷರು, ಸದಸ್ಯರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.