ಚಿತ್ರದುರ್ಗ: ಗೃಹರಕ್ಷಕ ದಳ ಪೊಲೀಸ್ ಇಲಾಖೆಯ ಅವಿಭಾಜ್ಯ ಅಂಗವಾಗಿದೆ ಎಂದು ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಹೇಳಿದರು.
ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ಸೋಮವಾರ ಜಿಲ್ಲಾ ಗೃಹರಕ್ಷಕ ದಳ ಹಮ್ಮಿಕೊಂಡಿದ್ದ ಅಖಿಲ ಭಾರತ ಗೃಹ ರಕ್ಷಕ ದಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಬಂದೋಬಸ್ತ್, ಚುನಾವಣೆ, ಪ್ರಕೃತಿ ವಿಕೋಪ ಮತ್ತಿತರ ತುರ್ತು ಸಂದರ್ಭಗಳಲ್ಲಿ ಗೃಹ ರಕ್ಷಕ ದಳದ ಸಹಕಾರ ಪೊಲೀಸ್ ಇಲಾಖೆಗೆ ಅಗತ್ಯವಾಗಿದೆ. ಗೃಹ ರಕ್ಷಕದಳದ ಅಧಿಕಾರಿ, ಸಿಬ್ಬಂದಿಯ ನಿಸ್ವಾರ್ಥ ಸೇವೆ ಮತ್ತು ಪೊಲೀಸ್ ಇಲಾಖೆಗೆ ಕೊಡುತ್ತಿರುವ ಸಹಕಾರ ಹೀಗೆ ಮುಂದುವರೆಯಲಿ ಎಂದರು.
ಈ ಜಿಲ್ಲೆಯಲ್ಲಿ ಗೃಹರಕ್ಷಕ ಸಿಬ್ಬಂದಿ ಬಹಳ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಿದ್ದೇನೆ. ಈಚೆಗೆ ನಡೆದ ಗಣೇಶ ಶೋಭಾಯಾತ್ರೆಯ ಬಂದೋಬಸ್ತ್ ಸಂದರ್ಭದಲ್ಲಿ ಗೃಹರಕ್ಷಕ ಗುರುಮೂರ್ತಿ ಹೃದಯ ಸಮಸ್ಯೆಯಿಂದ ಮರಣ ಹೊಂದಿದರು. ಅವರು ತಮಗೆ ವಹಿಸಿದ್ದ ಕರ್ತವ್ಯವನ್ನು ಸೈನಿಕರಂತೆ, ಬದ್ಧತೆಯಿಂದ ನಿರ್ವಹಿಸಿದ್ದರು. ಅವರ ಈ ಸ್ಫೂರ್ತಿ ನಮ್ಮೆಲ್ಲರಿಗೂ ಮಾದರಿಯಾಗಿದೆ. ಆರೋಗ್ಯದ ಕಡೆಗೂ ವಿಶೇಷ ಕಾಳಜಿ ವಹಿಸುವಂತೆ ಸಲಹೆ ನೀಡಿದರು.
ಗೃಹರಕ್ಷಕ ದಳದಲ್ಲಿ ಇನ್ನೂ ಹೆಚ್ಚಿನ ಶಿಸ್ತು ಅಗತ್ಯವಿದೆ. ಪ್ರತಿ ವಾರದ ಪರೇಡ್ ತರಬೇತಿಯಲ್ಲಿ ಭಾಗವಹಿಸಿ, ಶ್ರದ್ಧೆ ಹಾಗೂ ಶಿಸ್ತನ್ನು ಬೆಳೆಸಿಕೊಳ್ಳಬೇಕು. ಪೊಲೀಸರಂತೆ ಗೃಹರಕ್ಷಕರು ಖಾಕಿ ಸಮವಸ್ತ್ರದೊಂದಿಗೆ ಕರ್ತವ್ಯ ನಿರ್ವಹಿಸುತ್ತಾರೆ. ಸಮವಸ್ತ್ರದಲ್ಲಿದ್ದಾಗ ಶಿಸ್ತು, ಪ್ರಾಮಾಣಿಕತೆ ಹಾಗೂ ಶ್ರದ್ಧೆಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದರು.
ನಿಧನ ಹೊಂದಿದ ಗೃಹರಕ್ಷಕ ಗುರುಮೂರ್ತಿ ಕುಟುಂಬ ವರ್ಗಕ್ಕೆ ಎಸ್‌ಪಿ 1.50 ಲಕ್ಷ ರೂ. ಚೆಕ್ ವಿತರಿಸಿದರು.
ಗೃಹರಕ್ಷಕ ದಳದ ಜಿಲ್ಲಾ ಸಮಾದೇಷ್ಟರಾದ ಸಿ.ಕೆ. ಸಂಧ್ಯಾ ಮಾತನಾಡಿ, ಜಿಲ್ಲೆಯ ಗೃಹ ರಕ್ಷಕ ಸಿಬ್ಬಂದಿ ಚುನಾವಣೆ ಮತ್ತಿತರ ಬಂದೋ ಬಸ್ತ್‌ಗಳಿಗೆ ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಿಗೆ ತೆರಳಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ತುರ್ತು ಸಂದರ್ಭಗಳಲ್ಲೂ ಉತ್ತಮ ಸೇವೆ ಸಲ್ಲಿಸಿದ್ದಾರೆ. ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದರು.
ನಿವೃತ್ತ ಸಿಬ್ಬಂದಿ ಹಾಗೂ ಉತ್ತಮ ಸೇವೆ ಸಲ್ಲಿಸಿದ ಗೃಹ ರಕ್ಷಕರಿಗೆ ಹಾಗೂ ರಕ್ತದಾನ ಮಾಡಿದವರನ್ನು ಗೌರವಿಸಲಾಯಿತು. ಗೃಹರಕ್ಷಕ ದಳದ ಉಪ ಸಮಾದೇಷ್ಟ ಜಿ.ಎಚ್. ಲೋಕೇಶ್ ಪ್ರಮಾಣ ವಚನ ಬೋಧಿಸಿದರು. ಹಿರಿಯೂರು ಘಟಕಾಧಿಕಾರಿ ಹನುಮಂತರಾಯಪ್ಪ ವಾರ್ಷಿಕ ವರದಿ ವಾಚಿಸಿದರು. ಡಿವೈಎಸ್‌ಪಿ ಪಿ.ಕೆ. ದಿನಕರ್, ದಳದ ಘಟಕಾಧಿಕಾರಿಗಳಾದ ವೈ.ಬಿ.ತಿಪ್ಪೇಸ್ವಾಮಿ, ಕಾಂತರಾಜ್ ಇತರರು ಇದ್ದರು.