ಜಿಲ್ಲೆ

ಗೃಹ ಬಳಕೆಗೆ ನೀರಿನ ಶುಲ್ಕ 120 ರೂ. ನಿಗದಿ

ಕೊಳ್ಳೇಗಾಲ: ನಗರಸಭೆ ವ್ಯಾಪ್ತಿಯಲ್ಲಿ 24*7 ಕುಡಿಯುವ ನೀರಿನ ದರವನ್ನು ಗೃಹ ಬಳಕೆಗೆ ಮಾಸಿಕ 120 ರೂ. ನಿಗದಿಪಡಿಸಬೇಕು ಹಾಗೂ ಗೃಹೇತೇರ ಮತ್ತು ವಾಣಿಜ್ಯ, ಕೈಗಾರಿಕೆಗೆ ನೀರಿನ ಮೀಟರ್ ದಾಖಲೆ ಮೇಲೆ ಶುಲ್ಕವನ್ನು ಕಟ್ಟಿಸಿಕೊಳ್ಳಲು ಸರ್ಕಾರದ ಗಮನ ಸೆಳೆಯಲು ಕೊಳ್ಳೇಗಾಲ ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ನಗರಸಭೆ ಸಭಾಂಗಣದಲ್ಲಿ ಸೋಮವಾರ ನಗರ ಸಭಾಧ್ಯಕ್ಷೆ ರೇಖಾ ರಮೇಶ್ ಅಧ್ಯಕ್ಷತೆ ಮತ್ತು ಶಾಸಕ ಎ.ಆರ್.ಕೃಷ್ಣಮೂರ್ತಿ ಉಪಸ್ಥಿತಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಸದಸ್ಯರು ಚರ್ಚಿಸಿ ತೀರ್ಮಾನ ಕೈಗೊಂಡರು. 24*7 ನಿರಂತರ ಕುಡಿಯುವ ನೀರು ಸರಬರಾಜು ಯೋಜನೆ ನಿರ್ವಹಿಸುತ್ತಿರುವ ಮಾಲೂ ಕನ್‌ಸ್ಟ್ರಕ್ಷನ್ ಸಾರ್ವಜನಿಕರಿಗೆ ನೀರಿನ ಶುಲ್ಕದ ಬಿಲ್ಲನ್ನು ವಿತರಿಸಿದ ಬಳಿಕ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು.

ಚಿಂತು ಪರಮೇಶ್ ಮಾತನಾಡಿ, ನೀರಿನ ಬಿಲ್ 10 ರಿಂದ 20 ಸಾವಿರ ರೂ.ವರೆಗೆ ಬಂದಿದ್ದು ಬಡವರು ಹೇಗೆ ಕಟ್ಟಲು ಸಾಧ್ಯ. ಹಾಗಾಗಿ ಕನಿಷ್ಠ ಶುಲ್ಕ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದರು. ಶಾಂತರಾಜು ಮಾತನಾಡಿ, ಗಾಳಿಗೂ ಮೀಟರ್ ಓಡುವ ಸಂಭವವಿದ್ದು ಪರಿಶೀಲಿಸಬೇಕು ಎಂದರು.ಪ್ರಕಾಶ್ ಶಂಕನಪುರ ಮಾತನಾಡಿ, ಹೆಸರಿಗೆ ಮಾತ್ರ 24 ಗಂಟೆ ನೀರು ಎಂದು ಹೇಳಲಾಗುತ್ತಿದೆ. ಆದರೆ 2 ಗಂಟೆ ಮಾತ್ರ ನೀರು ಬರುತ್ತಿದೆ ಎಂದು ದೂರಿದರು.

ಉಪಾಧ್ಯಕ್ಷೆ ಎ.ಪಿ. ಶಂಕರ್ ಮಾತನಾಡಿ, ನೀರಿನ ಬಿಲ್ ಅಧಿಕ ಪ್ರಮಾಣದಲ್ಲಿ ಬಂದಿರುವುದರಿಂದ ಜನರಿಗೆ ಆಘಾತವಾಗಿದೆ. ಹಾಗಾಗಿ ಕನಿಷ್ಠ ಶುಲ್ಕ ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು. ಅಧ್ಯಕ್ಷೆ ರೇಖಾ ರಮೇಶ್, ಜಿ.ಪಿ.ಶಂಕರ್ ಇನ್ನು ಹಲವೆಡೆ ಪೈಪ್‌ಲೈನ್ ಅಳವಡಿಕೆ ಏಕೆ ನಡೆದಿಲ್ಲ ಎಂದು ಸಭೆಯಲ್ಲಿದ್ದ ಮಾಲು ಕನ್‌ಸ್ಟ್ರಕ್ಷನ್ ಚಂದನ್ ಅವರನ್ನು ಪ್ರಶ್ನಿಸಿದರು.

ಹೆಚ್ಚಿನ ನೀರಿನ ಬಿಲ್ ಬಗ್ಗೆ ಬಹುತೇಕ ಸದಸ್ಯರು ಅಸಮಾಧಾನ ಹೊರ ಹಾಕಿದರು. ಕೊನೆಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಹಿಂದಿನ ಸರ್ಕಾರ ಆದೇಶ ಹಾಗೂ ಬೇರೆ ನಗರ ಸ್ಥಳೀಯ ಸಂಸ್ಥೆಯಲ್ಲಿ ನಿಗದಿಪಡಿಸಿರುವ ನೀರಿನ ಬಿಲ್ ಪರಿಶೀಲಿಸಿದರು.

ನಗರಸಭೆ ಸದಸ್ಯರ ಸಲಹೆ ಆಧರಿಸಿ ಕೊಳ್ಳೇಗಾಲ ನಗರಸಭೆಯಲ್ಲಿ ಗೃಹ ಬಳಕೆಗೆ 120 ರೂ. ನಿಗದಿಗೊಳಿಸುವಂತೆ ಹಾಗೂ ಗೃಹೇತರ ಮತ್ತು ವಾಣಿಜ್ಯ, ಕೈಗಾರಿಕೆಗೆ ಮೀಟರ್ ಓಡಿದಷ್ಟು ಬಿಲ್ ಕಟ್ಟಿಸಿಕೊಳ್ಳುವ ಸಂಬಂಧ ಕೌನ್ಸಿಲ್ ನಿರ್ಧಾರವನ್ನು ಸರ್ಕಾರಕ್ಕೆ ಗಮನಕ್ಕೆ ತಂದು ಅಂತಿಮವಾಗಿ ತೀರ್ಮಾನ ಕೈಗೊಳ್ಳುವಂತೆ ಪೌರಾಯುಕ್ತ ರಮೇಶ್ ಅವರಿಗೆ ಸೂಚಿಸಿದರು. ಬಾಕಿ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಮಾಲು ಕನ್‌ಸ್ಟ್ರಕ್ಷನ್ ಸಿಬ್ಬಂದಿಗೆ ತಾಕೀತು ಮಾಡಿದರು.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗರಂ:

ಕಳೆದ ಮಾ.23ರಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಗರ ಸಭೆ ವ್ಯಾಪ್ತಿಯ ಸಾರ್ವಜನಿಕ ಶೌಚಗೃಹ, ಐಡಿಎಸ್‌ಎಂಟಿ ಅಂಗಡಿ ಮಳಿಗೆ, ತರಕಾರಿ ಮತ್ತು ಮಾಂಸದ ಮಾರುಕಟ್ಟೆ ಹಾಗೂ ನಗರಸಭೆ ಆಸ್ತಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಇತ್ಯರ್ಥಗೊಳಿಸಿ, ನಗರಸಭೆ ಸುಪರ್ದಿಗೆ ಪಡೆದು ಅಭಿವೃದ್ಧಿಬಳಸಿಕೊಳ್ಳಲು 15 ದಿನಗಳೊಳಗೆ ಕ್ರಮ ವಹಿಸುವಂತೆ ನಡವಳಿ ಮಾಡಲಾಗಿತ್ತು. ಈ ಜವಾಬ್ದಾರಿಯನ್ನು ಕಂದಾಯಧಿಕಾರಿ ನಂಜುಂಡಸ್ವಾಮಿ, ಎಸ್‌ಡಿಎ ಆರ್.ರಾಘವೇಂದ್ರ ವಹಿಸಿದ್ದರು. ಆದರೆ 6 ತಿಂಗಳಾದರೂ ಏನು ಕ್ರಮವಾಗಿಲ್ಲ ಎಂದು ನಗರಸಭೆ ಪೌರಾಯುಕ್ತ ರಮೇಶ್ ಸೇರಿದಂತೆ ಅಧಿಕಾರಿ ಮತ್ತು ಸಿಬ್ಬಂದಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ತರಾಟೆಗೆ ತೆಗೆದುಕೊಂಡರು.

ಅಕ್ರಮ ಖಾತೆಗಳ ಕೆಲಸ ಸಲೀಸು:

ನಾಮನಿರ್ದೇಶಿತ ಸದಸ್ಯ ದೇವಾನಂದ್ ಮಾತನಾಡಿ, ಕೊಳ್ಳೇಗಾಲ ನಗರಸಭೆಯಲ್ಲಿ ಅಕ್ರಮ ಖಾತೆಗಳು ಮಾತ್ರ ಸಲೀಸಲಾಗಿ ನಡೆಯುತ್ತಿದೆ. ಬಂಡವಾಳಶಾಯಿಗಳ ಕೆಲಸಗಳು ಆಗುತ್ತಿದೆ. ಬಡವರ ಖಾತೆಗಳು ಆಗುತ್ತಿಲ್ಲ. ಪಟ್ಟಣದಲ್ಲಿ ಇತ್ತೀಚೆಗೆ ಆರಂಭಗೊಂಡ ಬೃಹತ್ ಅಂಗಡಿ ಕಟ್ಟಡಕ್ಕೆ ಪರವಾನಗಿ ನೀಡುವಲ್ಲಿ ನಿಯಮ ಉಲಂಘನೆ ಯಾಗಿದೆ ಎಂದು ದೂರಿದರು.

ಇ-ಸ್ವತ್ತು ನವೀಕರಣ ಬಗ್ಗೆ ತನಿಖೆ ಆಗಲಿ:

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ರಾಜ್ ಕುಮಾರ್ ಕುಮಾರ್ ರಸ್ತೆಯ ವಿಸ್ತರಣೆ ಪ್ರಕ್ರಿಯೆ ಹಂತದಲ್ಲಿದ್ದರೂ ಈ ರಸ್ತೆಗಳಲ್ಲಿರುವ 14 ಆಸ್ತಿಗಳಿಗೆ ಖಾತೆಗಳನ್ನು ನವೀಕರಣ ಮಾಡಿಕೊಡಲಾಗಿದೆ. ಅಲ್ಲದೆ ಶಿವಕುಮಾರಸ್ವಾಮಿ ಬಡಾವಣೆಯಲ್ಲಿ ನಗರಸಭೆ ಅನುಮತಿ ಪಡೆಯದೆ ಅಕ್ರಮವಾಗಿ ಕಟ್ಟಡ ಕಟ್ಟಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿ ಬಂದಿದೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ನಗರಸಭೆ ಪೌರಾಯುಕ್ತ ರಮೇಶ್ ವಿರುದ್ಧ ಅಸಮಾಧಾನ ಹೊರ ಹಾಕಿದರು. ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ನಡೆಯುತ್ತಿರುವ ಅಕ್ರಮ ಕಟ್ಟಡ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು ಎಂದು ತಾಕೀತು ಮಾಡಿದರು. ಈ ವೇಳೆ ನಗರಸಭೆ ಅಧಿಕಾರಿಗಳ ವಿರುದ್ಧ ಕೆಲ ಸದಸ್ಯರು ಅಕ್ರೋಶ ಹೊರ ಹಾಕಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ರಮೇಶ್, ಆಸ್ತಿಗಳ ಖಾತೆ ನವೀಕರಣ ಮಾಡಿ ಕೊಂಡದಿದ್ದರೆ ಸಾರ್ವಜನಿಕರು ಆರ್‌ಟಿಐಗೆ ಅರ್ಜಿ ಹಾಕುತ್ತಾರೆ. ಹಾಗಾಗಿ ಮಾಡಿಕೊಟ್ಟಿ ಎಂದರು. ನಂತರ ಶಾಸಕ ಎ.ಆರ್.ಕೃಷ್ಣಮೂರ್ತಿ ಈ ಬಗ್ಗೆ ತನಿಖೆ ಆಗಲಿ ಎಂದು ತಿಳಿಸಿದರು. ಸಭೆಯಲ್ಲಿ ನಗರಸಭೆ ಸ್ಥಾಯಿ ಸಮಿತಿ ಆಧ್ಯಕ್ಷ ಸುರೇಶ್ ಮತ್ತು ಸದಸ್ಯರು ಇದ್ದರು.